ರಾಮ ಮಂದಿರ ಉದ್ಘಾಟನೆ ಬಳಿಕ ವಿಶ್ವದಲ್ಲಿ ಹಿಂದುಯುಗ ಪ್ರಾರಂಭವಾಗಲಿದೆ- ಕಾಂಗ್ರೆಸ್ ಕೌರವರು, ರಾವಣನ ಪಾತ್ರ ವಹಿಸುತ್ತಿದೆ- ಶಾಸಕ ಯತ್ನಾಳ ವಾಗ್ದಾಳಿ

ವಿಜಯಪುರ: ರಾಮ ಮಂದಿರ ಉದ್ಘಾಟನೆ ಬಳಿಕ ಜಗತ್ತಿನಲ್ಲಿ ಹಿಂದುಯುಗ ಪ್ರಾರಂಭವಾಗಲಿದೆ.  ವಿಶ್ವ ಹಿಂದೂಮಯವಾಗಲಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರು ಹೋಗದಿರುವ ಕ್ರಮವನ್ನು ಅವರು ಕಟುವಾಗಿ ಟೀಕಿಸಿದರು.

ಅಯೋಧ್ಯೆ ರಾಮಮಂದಿರ ಉದ್ಘಾಟನೆ ವಿಚಾರದಲ್ಲಿ ಶಂಕರಾಚಾರ್ಯ ಪೀಠಗಳ ವಿರೋಧ ವಿಚಾರ ಅವರವರಿಗೆ ಬಿಟ್ಟದ್ದು. ಒಂದು ತಿಳಿದುಕೊಳ್ಳಿ.  ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯ ಬಳಿಕ ದೇಶದಲ್ಲಿ ಹೊಸ ಹಿಂದೂ ಯುಗ ಪ್ರಾರಂಭವಾಗಲಿದೆ.  ರಾಮ ಕೇವಲ ಭಾರತದಲ್ಲಿ ಮಾತ್ರವಲ್ಲ, ವಿಶ್ವದಲ್ಲಿಯೇ ಹಿಂದು ಯುಗ ಪ್ರಾರಂಭವಾಗಲಿದೆ.  ಹಿಂದೂ ಧರ್ಮ ನಾಶವಾಗುತ್ತದೆ ಎಂಬುವವರಿಗೆ ರಾಮಜನ್ಮ ಭೂಮಿಯ ಮೂಲಕ ಜಗತ್ತಿಗೆ ಮತ್ತೋಂದು ಹಿಂದೂ ಧರ್ಮ ಮತ್ತು ಸನಾತನ ಧರ್ಮ ಪಸರಿಸಲಿದೆ.  ಉಳಿದೆಲ್ಲ ಧರ್ಮಗಳು, ಮೂಲ ಸನಾತನ ಧರ್ಮಕ್ಕೆ ಬರುತ್ತವೆ.  ಜಗತ್ತೇ ಹಿಂದೂ ಧರ್ವಮಯವಾಗಲಿದೆ.  ಹಿಂದೂ ಧರ್ಮದ ವಿರೋಧಿಗಳಿಗೆ ರಾಮಜನ್ಮ ಭೂಮಿಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಉತ್ತರ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ಸಿಗರು ಕೌರವರು, ರಾವಣನ ಪಾತ್ರ ವಹಿಸುತ್ತಿದ್ದಾರೆ

ನಮ್ಮ ದೇಶದಲ್ಲಿ ಮಹಾಭಾರತದಲ್ಲಿ ಪಾಂಡವರು, ಕೌರವರು ಇದ್ದರು.  ರಾಮಾಯಣದಲ್ಲಿ ರಾವಣ ಇದ್ದ.  ಅದೇ ರೀತಿ ಕಾಂಗ್ರೆಸ್ಸಿಗರು ಈಗ ಕೌರವರ ಮತ್ತು ರಾವಣನ ಪಾತ್ರ ವಹಿಸುತ್ತಿದ್ದಾರೆ.  ಹನುಮಾನ ಚಾಲಿಸಾ ಪಠಣದಿಂದ ಅಲ್ಲಿ ದುಷ್ಟ ಶಕ್ತಿಗಳು, ಪಿಶಾಚಿಗಳು, ನೀಚರು ಓಡಿ ಹೋಗುತ್ತಾರೆ.  ಆದರೆ, ಇಲ್ಲಿ ಅವರು ವಿರೋಧಿಗಳ ಪಾತ್ರ ವಹಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ಸಿಗರಿಗೆ ಧೈರ್ಯವಿಲ್ಲ

ರಾಮ ಮಂದಿರ ಉದ್ಗಾಟನೆಯ ಬಳಿಕ ಸಮಯ ಸಿಕ್ಕಾಗ ಅಯೋಧ್ಯೆಗೆ ತೆರಳುತ್ತೇನೆ ಎಂದು ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ನೀಡಿರುವ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಮಯ ಸಿಕ್ಕಾಗ ಸಿದ್ದರಾಮಯ್ಯ ಹೋಗಲಿ.  ಒಟ್ಟಾರೆ ಹೋಗ್ತಾರಲ್ವ ಎಂದು ವ್ಯಂಗ್ಯವಾಡಿದರು.  ನೋಡಿ ಒಬ್ಬರಿಗೂ ಕಾಂಗ್ರೆಸ್ಸಿನವರಿಗೆ ಧೈರ್ಯವಿಲ್ಲ.  ನಾನೇನಾದರೂ ಕಾಂಗ್ರೆಸ್ಸಿನಲ್ಲಿದ್ದರೆ ಹೈಕಮಾಂಡ್ ಆದೇಶವನ್ನು ಧಿಕ್ಕರಿಸಿ ಅಯೋಧ್ಯೆಗೆ ಹೋಗುತ್ತಿದ್ದೆ.  ಕಾಶಿ ವಿಶ್ವನಾಥ, ಮಥುರಾ ಕೃಷ್ಣ ನಮ್ಮ ದೇಶದ ಸನಾತನ ಧರ್ಮದ ಮಹಾಪುರುಷರು.  ರಾಮ ಮಂದಿರವನ್ನು ಬಿಜೆಪಿ, ಆರ್.ಎಸ್.ಎಸ್. ವಿಎಚ್‌ಪಿ ಯಾರು ಮಾಡಿದ್ದಾರೊ ನೋಡಬಾರದಿತ್ತು.  ನೀವು ರಾಮನ ಭಕ್ತರಾಗಿದ್ದರೆ ಹೋಗುತ್ತಿದ್ದೀರಿ.  ನೀವು ಕಪೀಲ್ ಸಿಬ್ಬಲ್ ಸೇರಿದಂತೆ 25 ವಕೀಲರನ್ನು ರಾಮ ಮಂದಿರ ನಿರ್ಮಾಣದ ವಿರುದ್ಧ ವಾದ ಮಾಡಿದಿರಿ.  ರಾಮ ಕಾಲ್ಪನಿಕ.  ರಾಮ ಹುಟ್ಟಿರಲಿಲ್ಲ.  ರಾಮ ಎಂಬಾತ ಭೂಮಿಯ ಮೇಲೆ ಇರಲಿಲ್ಲ ಎಂದು ಹೇಳಿದ್ದೀರಿ.  ಈಗ ರಾಮ ಇದ್ದಾನೆ.  ನಾನೂ ರಾಮಭಕ್ತ, ನೀನೂ ರಾಮಭಕ್ತ ಎಂದು ಸ್ಪರ್ಧೆ ಮಾಡುತ್ತಿದ್ದೀರಿ.  ರಾಮ ಈ ದೇಶದ ಮೂಲ ಪುರುಷ.  ರಾಮನನ್ನು ಬಿಟ್ಟು ಭಾರತವಿಲ್ಲ.  ಭಾರತವನ್ನು ಬಿಟ್ಟು ರಾಮನಿಲ್ಲ ಎಂದು ಅವರು ಹೇಳಿದರು.

ಗೃಹ ಸಚಿವ ಡಾ. ಜಿ. ಪರಮೇಶ್ವರ ಬಗ್ಗೆ ಗೌರರವಿದೆ.  ಅವರಿಂದ ರಾಮ ಮಂದಿರ ಉದ್ಗಾಟನೆ ಕಾರ್ಯಕ್ರಮದ ಕುರಿತು ನೀಡಿರುವ ಹೇಳಿಕೆಯನ್ನು ನಿರೀಕ್ಷೆ ಮಾಡಿರಲಿಲ್ಲ.  ನಿಮಗೆ ಧೈರ್ಯವಿದ್ದರೆ ಕೆ. ಎಚ್. ಮುನಿಯಪ್ಪ ಅವರಂತೆ ಪ್ರತಿದಿನ ರಾಮನಾಮ ಜಪ ಮಾಡುತ್ತೇನೆ ಎಂದು ಹೇಳಬೇಕಿತ್ತು.  ಅನೇಕರು ಅದೇ ರೀತಿ ಹೇಳಿದ್ದರು.  ರಾಮ ಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವುದು ವೈಯಕ್ತಿದ ಮತ್ತು ಧಾರ್ಮಿಕ ಹಕ್ಕು.  ಹಿಂದೂಗಳೂ ನಿಮಗೆ ಮತ ಹಾಕಿದ್ದಾರೆ.  ಅದನ್ನು ನೀವು ಪರಿಗಣಿಸಬೇಕಿತ್ತು.  ಕಾಂಗ್ರೆಸ್ಸಿನ ಈ ನಿರ್ಧಾರ ಮೂರ್ಖತನದಿಂದ ಕೂಡಿದೆ.  ಆ ಪಕ್ಷದ ನಾಯಕರು ನಾಳೆ ಸಾಯಬೇಕಾದರೂ ಹೈಕಮಾಂಡ ಅನುಮತಿ ಬೇಕಾಗಬಹುದು.  ಕಾಂಗ್ರೆಸ್ ಗುಲಮಾಗಿರಿಯ ಸಂಕೇತ ಎಂಬುದಕ್ಕೆ ಡಾ. ಜಿ. ಪರಮೇಶ್ವರ ಹೇಳಿಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ಪ್ರಚೋದನಕಾರಿ ಭಾಷಣ ಕೇಸ್ ವಿಚಾರ

ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಗದುಗಿನಲ್ಲಿ ಪ್ರಚೋದನಕಾರಿ ಭಾಷಣ ಮಾಡಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದನ್ನು ಬಸನಗೌಡ ಪಾಟೀಲ ಯತ್ನಾಳ ಇದೇ ವೇಳೆ ಸ್ವಾಗತಿಸಿದರು.

Leave a Reply

ಹೊಸ ಪೋಸ್ಟ್‌