ಸಿಂದಗಿಯಲ್ಲಿ ಸಿಗರೇಟ್ ಕಳ್ಳತನ ಪ್ರಕರಣ- ಓರ್ವನನ್ನು ಬಂಧಿಸಿದ ಪೊಲೀಸರು- ನಿಟ್ಟುಸಿರು ಬಿಟ್ಟ ವಾರದ ಕುಟುಂಬ

ವಿಜಯಪುರ: ಸಿಂದಗಿ‌ ಪಟ್ಟದಲ್ಲಿ ಕಳೆದ ವರ್ಷ ಡಿಸೆಂಬರ್ 24 ರಂದು ನಡೆದ ಸುಮಾರು ರೂ.‌ 42 ಲಕ್ಷ ಮೌಲ್ಯದ ಸಿಗರೇಟ್ ಕಳ್ಳತನ ಪ್ರಕರಣವನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್ 24 ರಂದು ನಡೆದಿದ್ದ ಮತ್ತು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಈ ಪ್ರಕರಣವನ್ನು ಎಸ್ಪಿ ಋಷಿಕೇಶ ಸೋನಾವಣೆ ಅವರು ಗಂಭೀರವಾಗಿ ಪರಿಗಣಿಸಿದ್ದರು.  ಅದವರ ಸೂಚನೆಯಂತೆ ನಡೆದ ಕಾರ್ಯಾಚರಣೆಯ ಬಳಿಕ ಇದೀಗ ಈ ಪ್ರಕರಣವನ್ನು ಸಿಂದಗಿ ಪೊಲೀಸರು ಭೇದಿಸಿದ್ದಾರೆ.

ಈ ಪ್ರಕರಣ ಸಂಬಂಧ ರಾಜಸ್ತಾನದ ಜಿತೇಂದ್ರಕುಮಾರ ಮಾಂಗಿಲಾಲ್ ಗೆಹ್ಲೊಟ್(26) ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಕಾರ ಮತ್ತು ಸಿಗರೇಟ್ ಮಾರಾಟದಿಂದ ಬಂದ ಹಣ ರೂ. 37 ಲಕ್ಷ ರೂಪಾಯಿ ವಶಕ್ಕೆ ಪಡೆದಿದ್ದಾರೆ.  ಈ ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತು ಈಗ ಪರಾರಿಯಾಗಿರುವ ರಾಜಸ್ತಾನದ ರಾಜೇಂದ್ರನಗರದ ಆರೋಪಿ ಪ್ರಕಾಶ ದೀಪರಾಮ ಹಾಗೂ ಪಂಜಾಬಿನ ಗುರುಪೀತಸಿಂಗ್ ಪಲ್ವಿಂದರಸಿಂಗ್ ಅವರ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಿಂದಗಿಗೆ ಖುದ್ದಾಗಿ ತೆರಳಿದ ಎಸ್ಪಿ ಋಷಿಕೇಶ ಸೋನಾವಣೆ, ಪರಿಶೀಲನೆ ನಡೆಸಿ ಪ್ರಕರಣ ಭೇದಿಸಿದ ಸಿಂದಗಿ ಪೊಲೀಸರಿಗೆ ಪ್ರಶಂಸಾ ಪತ್ರ ನೀಡಿ ಬಹುಮಾನ ವಿತರಿಸಿದರು.

ಸಿಗರೇಟ್ ಕಳ್ಳತನ ಪ್ರಕರಣ ಭೇದಿಸಿದ ಸಿಂದಗಿ ಪೊಲೀಸರಿಗೆ ಎಸ್ಪಿ ಋಷಿಕೇಶ ಸೋನಾವಣೆ ಬಹುಮಾನ ವಿತರಿಸಿದರು

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಗುಜರಾತ, ರಾಜಸ್ತಾನ ಮತ್ತು ದೆಹಲಿ ಮೂಲದ ಕಳ್ಳರ ಕೈವಾಡವಿತ್ತು.  ಈ ಹಿನ್ನೆಲೆಯಲ್ಲಿ ತನಿಖೆಗೆ ರಚಿಸಲಾದ ಎರಡು ತಂಡಗಳು ಚುರುಕಿನಿಂದ ಕೆಲಸ ಮಾಡಿದ್ದು, ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.  ಅಲ್ಲದೇ, ಆರೋಪಿ ನೀಡಿದ ಮಾಹಿತಿಯಂತೆ ಬೆಂಗಳೂರಿಗೆ ತೆರಳಿ ಮಾರಾಟ ಮಾಡಲಾಗಿದ್ದ ಸಿಗರೇಟಿನ ಹಣವನ್ನು ವಶಪಡಿಸಿಕೊಂಡಿದ್ದಾರೆ.  ಈ ಆರೋಪಿಗಳ ವಿರುದ್ಧ ಬೇರೆ ರಾಜ್ಯಗಳಲ್ಲಿಯೂ ಸಿಗರೇಟ್ ಕಳ್ಳತನ ಮಾಡಿರುವ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದ್ದಾರೆ.

ಘಟನೆ ಹಿನ್ನೆಲೆ

ಡಿಸೆಂಬರ್ 24 ರಂದು ರವಿವಾರ ಸಿಂದಗಿ ಪಟ್ಟಣದ ಪ್ರತಿಷ್ಠಿತ ಸಿ. ಎಂ. ವಾರದ ಡಿಸ್ಟ್ರಿಬ್ಯೂಟರ್ಸ್ ಅಂಗಡಿಯಲ್ಲಿ ಐಟಿಸಿ ಕಂಪನಿಯ ಸಿಗರೇಟ್ ಕಳವು ಮಾಡಲಾಗಿತ್ತು.  ಶಾಂತವೀರ, ಚನ್ನಬಸಪ್ಪ ವಾರದ ಸಹೋದರರಿಗೆ ಸೇರಿದ ಅಂಗಡಿಯಲ್ಲಿ ಈ ಕಳ್ಳತನ ನಡೆದಿತ್ತು.  ಸಿಂದಗಿ ಪಟ್ಟಣದ ಕಿರಾಣಾ ಬಜಾರನಲ್ಲಿರುವ ಅಂಗಡಿಯಲ್ಲಿ ಸಂಗ್ರಹಿಸಿ ಇಡಲಾಗಿದ್ದ ಐಟಿಸಿ ಕಂಪನಿಗೆ ಸೇರಿದ ಸಿಗರೇಟನ್ನು ರಾತ್ರೊರಾತ್ರಿ ಕಳ್ಳತನ ಮಾಡಲಾಗಿತ್ತು.   37 ಬಾಕ್ಸ್ ಗಳಲ್ಲಿ ಮಾರಾಟಕ್ಕೆ ಸಂಗ್ರಹಿಸಿ ಇಡಲಾಗಿದ್ದ ನಾನಾ ಹೆಸರಿನ ಸಿಗರೇಟ್ ಗಳನ್ನು ಕಳವು ಮಾಡಿದ ಕಳ್ಳರು, ಅಂಗಡಿಯಲ್ಲಿದ್ದ ಸಿಸಿಟಿವಿ ಸಿಡಿಆರ್ ನ್ನೂ ಕೂಡ ಕೈಗೆತ್ತಿಕೊಂಡು ಪರಾರಿಯಾಗಿದ್ದರು.

ಈ ಘಟನೆ ನಡೆದ ಬಳಿಕ ಸ್ಥಳಕ್ಕೆ ಭೇಟಿ ನೀಡಿದ್ದ ಸಿಂದಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.  ಎಸ್ಪಿ ಋಷಿಕೇಶ ಸೋನಾವಣೆ ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು.  ಈಗ ಈ ಪ್ರಕರಣವನ್ನು ಭೇದಿಸಲಾಗಿದೆ.  ಇದರಿಂದಾಗಿ ವಾರದ ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದ್ದು, ಸಿಂದಗಿ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Leave a Reply

ಹೊಸ ಪೋಸ್ಟ್‌