StarpUp Story: ಉ. ಕ. ದ ಪ್ರಥಮ ಸ್ಟೀಲ್ ರಿಂಗ್ ಯಂತ್ರ: ಕಟ್ಟಡ ನಿರ್ಮಾಪಕರಿಗೆ ವರವಾದ ವಿನೋದ ಪೀರಗೊಂಡರ ವೈಭವಿ ಟ್ರೆಡರ್ಸ್

ಮಹೇಶ ವಿ. ಶಟಗಾರ

ವಿಜಯಪುರ: ಮನೆಕಟ್ಟಿ ನೋಡು.  ಮದುವೆ ಮಾಡಿ ನೋಡು ಎಂಬುದು ನಾಣ್ಣುಡಿ.  ಆದರೆ, ಮನೆ ಕಟ್ಟುವಾಗ ಸಿಕ್ಕ ಅನುಭವವನ್ನೇ ಜೀವನದಲ್ಲಿ ಉದ್ಯಮವಾಗಿಸಿಕೊಂಡು ಯಶಸ್ವಿಯಾದರೆ ಹೇಗಿರಬೇಡ.  ಹೌದು.  ಈ ರೀತಿ ಮನೆ ಕಟ್ಟುವಾಗ ಎದುರಿಸಿದ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರ ಕಂಡುಕೊಳ್ಳಲು ರೂಪಿಸಿದ ಯೋಜನೆಗಳ ಮೇಲೆ ಯುವಕನೊಬ್ಬ ಉದ್ಯಮ ಪ್ರಾರಂಭಿಸಿ ಯಶಸ್ವಿಯಾಗಿರುವ ಸ್ಟೋರಿ ಇದು.

ವಿಜಯಪುರ ನಗರದ ಸೋಲಾಪುರ ರಸ್ತೆಯಿಂದ ಶ್ರೀ ಸಿದ್ಧಾರೂಢ ಮಠದ ಕಡೆಗೆ ಹೊರಟರೆ ಸಾಕು ಮೂರ್ನಾಲ್ಕು ಅಂಗಡಿಗಳನ್ನು ದಾಟಿದರೆ ವೈಭವಿ ಟ್ರೇಡರ್ಸ್ ಎಂಬ ಹೆಸರಿನ ಸುಮಾರು 10 ಗುಂಟೆಯಲ್ಲಿ ಅಲ್ಲಲ್ಲಿ ಕಬ್ಬಿಣದ ನಾನಾ ವಸ್ತುಗಳು ಬಿದ್ದಿರುವ ಸ್ಥಳ ಕಾಣಿಸುತ್ತದೆ.  ಇಲ್ಲಿಗೆ ಬಂದು ನೋಡಿದರೆ ಏನೂ ತಿಳಿಯುವುದಿಲ್ಲ.  ಆದರೆ, ಬೆಳಿಗ್ಗೆಯಿಂದ ರಾತ್ರಿವರೆಗೂ ಅಲ್ಲಿ ಸ್ವತಃ ಆಳಾಗಿ ದುಡಿಯುತ್ತ ಆರಸನಾಗಿ ಕೆಲಸ ನಿರ್ವಹಿಸುವ ಯುವಕ ವಿನೋದಕುಮಾರ ಅಣ್ಣಾರಾಯ ಪೀರಗೊಂಡ ಅವರ ತಮ್ಮ ಅಂಗಡಿಯಲ್ಲಿರುವ ವಸ್ತುಗಳ ಬಗ್ಗೆ ನೀಡುವ ಮಾಹಿತಿಯನ್ನು ಕೇಳುತ್ತ ಹೋದರೆ ಸಮಯ ಹೋಗಿದ್ದೆ ಗೊತ್ತಾಗುವುದಿಲ್ಲ.  ಪ್ರತಿಯೊಂದುನ್ನು ಎಳೆಎಳೆಯಾಗಿ ಬಿಡಿಸಿ ಹೇಳುವ ಅವರ ಶೈಲಿ ಪ್ರಾಥಮಿಕ ಶಾಲೆಯಲ್ಲಿ ಕಥೆಗಳ ರೂಪದಲ್ಲಿ ಮಕ್ಕಳಿಗೆ ಹೇಳುವ ಪಾಠ ನೆನಪಿಸುತ್ತದೆ.  ಇಲ್ಲಿಗೆ ಬಂದಿದ್ದೂ ಸಾರ್ಥಕವಾಯಿತು ಎಂಭ ಭಾವನೆ ಬರುತ್ತದೆ.

ಹುಲಜಂತಿ ಮಹಾಳಿಂಗರಾಯ ಸ್ವಾಮೀಜಿ ಜೊತೆ ವಿನೋದಕುಮಾರ ಅಣ್ಣಾರಾಯ ಪೀರಗೊಂಡ

ಉತ್ತರ ಕರ್ನಾಟಕದ ಪ್ರಪ್ರಥಮ ರಿಂಗ್ ಮಾಡುವ ಯಂತ್ರ

ಇಲ್ಲಿರುವುದು ಉತ್ತರ ಕರ್ನಾಟಕದ ಪ್ರಪ್ರಥಮ ರಿಂಗ್ ಮಾಡುವ ಯಂತ್ರ.  ಅಂದರೆ, ಕಟ್ಟಡ ನಿರ್ಮಿಸುವಾಗ ತಳ(ಪಾಯ)ದಿಂದ ಹಿಡಿದು ಮೇಲ್ಭಾಗ(ಮೇಲ್ಛಾವಣಿ) ವರೆಗೂ ಅಗತ್ಯವಾಗಿರುವ ಕಬ್ಬಿಣವನ್ನು ಸಿದ್ಧಪಡಿಸುವ ಅಟೊಮೇಟಿಕ್ ಯಂತ್ರ.  ಜಪಾನ್ ನಿಂದ ಈ ಯಂತ್ರ ಖರೀದಿಸಿ ತಂದಿದ್ದಾರೆ.  ಮನೆ ಅಥವಾ ಯಾವುದೇ ಕಟ್ಟಡ ನಿರ್ಮಿಸುವಾಗ ಸಮಯ, ಹಣ, ಕಾರ್ಮಿಕರ ಶ್ರಮ ಉಳಿಸುವ ಯಂತ್ರ ಇದಾಗಿದೆ.  ಇಲ್ಲಿ ಅಗತ್ಯಕ್ಕೆ ತಕ್ಕಂತೆ ಸೈಜಿನ ಆಕಾರದ ರಿಂಗ್ ಗಳನ್ನು ಮಾಡಿ ಕೊಡಲಾಗುತ್ತದೆ.  ಸಾಮಾನ್ಯವಾಗಿ ನಾಲ್ಕು ಜನ ಕಾರ್ಮಿಕರು ಒಂದು ವಾರ ಮಾಡುವ ಕೆಲಸವನ್ನು ಈ ಯಂತ್ರ ಕೇವಲ ಎರಡು ಗಂಟೆಗಳಲ್ಲಿ ಮಾಡಿ ಕೊಡುತ್ತದೆ.  ಇದರಿಂದ ಕಬ್ಬಿಣದ ರಿಂಗ್ ನ ನಿಖರತೆ, ಗುಣಮಟ್ಟ, ಸಮಯ, ಹಣ ಎಲ್ಲವೂ ಉಳಿತಾಯವಾಗುತ್ತದೆ.

ಇಂಥ ಯಂತ್ರಗಳನ್ನು ನಾವು ಮೆಟ್ರೊಪಾಲಿಟನ್ ಸಿಟಿಗಳಲ್ಲಿ ನೋಡಬಹುದು.  ಅಲ್ಲಿ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ವಸತಿ ಸಮುಚ್ಛಯ ನಿರ್ಮಿಸುವ ಕಟ್ಟಡ ನಿರ್ಮಾಪಕರು ಈ ಯಂತ್ರಗಳನ್ನು ಬಳಸುತ್ತಾರೆ.  ಇಂಥ ನಗರಗಳಲ್ಲಿ ಸಿಗುವ ಅತ್ಯಾಧುನಿಕ ಯಂತ್ರಗಳು ವಿಜಯಪುರದಂಥ ಟಾಯರ್ ಥ್ರಿ ಸಿಟಿಗಳಿಗೆ ಪ್ರವೇಶ ಮಾಡಬೇಕಾದರೆ ನಾಲ್ಕೈದು ವರ್ಷಗಳೇ ಬೇಕು.  ಈ ಯಂತ್ರಗಳು ಮನುಷ್ಯರು ದಿನಗಳಗಟ್ಟಲೆ ಮಾಡುವ ಕೆಲಸವನ್ನು ಕೆಲವೇ ಗಂಟೆಗಳಲ್ಲಿ ಮಾಡುವ ಗಜಗಾತ್ರದ ವೃತ್ತಿಪರ ಕೆಲಸಗಳಿಗೆ ಸಾಕ್ಷಿ ಎನ್ನುತ್ತಾರೆ ವಿನೋದಕುಮಾರ ಅಣ್ಣಾರಾಯ ಪೀರಗೊಂಡ.

 

ಎರಡು ವರ್ಷಗಳ ಹಿಂದೆ ಪ್ರಾರಂಭಿಸಿರುವ ಈ ಉದ್ಯಮ ಈಗ ಅವರ ಕೈ ಹಿಡಿದಿದ್ದು, ನಾಲ್ಕಾರು ಕುಟುಂಬಗಳಿಗೆ ನೇರವಾಗಿ ಉದ್ಯೋಗ ನೀಡಿದ್ದಾರೆ.  ಅಲ್ಲದೇ, ನೂರಾರು ಕುಟುಂಬಗಳಿಗೆ ಪರ್ಯಾಯವಾಗಿಯೂ ನೆರವಾಗುತ್ತಿದ್ದಾರೆ.  ಇಲ್ಲಿಗೆ ಬರುವ ಇವರಲ್ಲಿಗೆ ಬಂದರೆ ಸಾಕು, ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ಮಾಹಿತಿಯ ಕಣಜವೇ ಸಿಗುತ್ತದೆ.  ಪಾಯ ಅಗೆಯುವುದರಿಂದ ಹಿಡಿದು, ಸ್ಟೀಲ್ ಖರೀದಿ, ಕಾಲಂ ಹಾಕುವುದು, ಬಾಂದಕಮ್(ಗೋಡೆ ಕಟ್ಟುವುದು), ಪ್ಲಂಬಿಂಗ್, ಎಲೆಕ್ಟ್ರಿಕಲ್ ವರ್ಕ್, ಫ್ಲೋರಿಂಗ್, ಸ್ಲ್ಯಾಬ್, ಡ್ರೀನೇಜ್, ಗೋಡೆ ಕಟ್ಟುವುದು, ಬಣ್ಣ ಹಚ್ಚುವುದು ಸೇರಿದಂತೆ ಅಗತ್ಯವಾಗಿರುವ ಎಲ್ಲ ಮಾಹಿತಿಯನ್ನು ಕ್ಷಣಾರ್ಧದಲ್ಲಿ ನೀಡುತ್ತಾರೆ.  ಸ್ಟೀಲ್ ನ ಗುಣಮಟ್ಟ ಹೇಗಿರಬೇಕು? ಯಾವ ರೀತಿ ಅದನ್ನು ಕಟ್ ಮತ್ತು ರಿಂಗ್ ಮಾಡಬೇಕು? ಪ್ರಥಮ, ದ್ವಿತೀಯ ಗುಣ್ಮಟ್ಟದ ಸ್ಟೀಲ್ ಎಂದರೇನು? ಯಾವ ಕಟ್ಟಡಕ್ಕೆ ಯಾವ ರೀತಿಯ ಇಟ್ಟಿಗೆ, ಸಿಮೆಂಟ್ ಬಳಸಬೇಕು? ಯಾವ ವಸ್ತುಗಳನ್ನು ಬಳಸುವುದರಿಂದ ಕಟ್ಟಡದ ಗುಣಮಟ್ಟ ಉತ್ತಮವಾಗಿ ಮತ್ತು ದೀರ್ಘಕಾಲ ಉಪಯೋಗಿಸಬಹುದು? ಯಾವ ವಸ್ತುಗಳನ್ನು ಬಳಸುವುದರಿಂದ ಮನೆಯಲ್ಲಿ ವಾಸ ಇರುವವರಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಏನೇನು ಪರಿಣಾಮ ಬೀರುತ್ತವೆ ಎಂಬುದರ ಕುರಿತು ಅವರು ಸುದೀರ್ಘವಾಗಿ ಮಹಾಪ್ರಬಂಧದ ರೀತಿಯಲ್ಲಿ ಸಂಪೂರ್ಣ ಮಾಹಿತಿಯನ್ನು ಬಿಚ್ಚಿಡುತ್ತಾರೆ.  ಕೊನೆಗೆ ಅವರು ಹೇಳುವ ಮಾತು ನಿಮಗೆ ಇಷ್ಟವಾದರೆ ಈ ಗುಣಮಟ್ಟದ ವಸ್ತುಗಳನ್ನು ಖರೀದಿಸಿ.  ಇಷ್ಟವಾಗದಿದ್ದರೆ ನಿಮಗಿಷ್ಟವಾಗುವ ಕಡೆ ಕಟ್ಟಡ ಸಾಮಗ್ರಿಗಳನ್ನು ಖರೀದಿಸಿ.  ನನಗೇನೂ ಬೇಜಾರಿಲ್ಲ.  ಈ ಮಾತು ಅಲ್ಲಿಗೆ ಭೇಟಿ ನೀಡುವ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ನೆರವಾಗುತ್ತದೆ ಎಂಬುದು ಸುಳ್ಳಲ್ಲ.

ಪ್ರತಿ ತಿಂಗಳು 20 ಟನ್ ರೆಡಿಮೇಡ್ ಸ್ಟೀಲ್ ಮಾರಾಟ

ಈ ವೈಭವಿ ಟ್ರೇಡರ್ಸ್ ನಲ್ಲಿ ಪ್ರತಿ ತಿಂಗಳು ಸುಮಾರು ತಿಂಗಳಿಗೆ 20 ಟನ್ ಕಬ್ಬಿಣದ ರಿಂಗ್ ಗಳನ್ನು ತಯಾರು ಮಾಡಿ ಮಾರಾಟ ಮಾಡಲಾಗುತ್ತದೆ.  ಗ್ರಾಹಕರ ಬೇಡಿಕೆಗೆ ತಕ್ಕಂತೆ ಆಗಷ್ಟೇ ರೆಡಿ ಮಾಡಲಾಗಿರುವ ಅಂದರೆ ಯಾವುದೇ ರೀತಿಯಲ್ಲಿಯೂ ತುಕ್ಕು ಹಿಡಿಯದ ಮತ್ತು ಕಂಪನಿಯಿಂದ ನೇರವಾಗಿ ತರಿಸಲಾದ ಕಬ್ಬಿಣದಿಂದ ಅಗತ್ಯಕ್ಕೆ ತಕ್ಕ ಸೈಜಿನ ರಿಂಗ್ ಮಾಡಿ ಮಾರಾಟ ಮಾಡುತ್ತಾರೆ.  ಅಡ್ವಾನ್ಸ್ ಆಗಿ ಆರ್ಡರ್ ನೀಡಿದರೆ ಮಾತ್ರ ಕಬ್ಬಿಣದ ರಿಂಗ್ ಗಳನ್ನು ಒಂದೆರಡು ದಿನ ಸಮಯ ಪಡೆದು ಪೂರೈಸುತ್ತಾರೆ.  ಸಿದ್ದ ಉಡುಪುಗಳ ರೀತಿಯಲ್ಲಿ ಮೊದಲೆ ತಯಾರಿಸಿಟ್ಟು ಇವರು ಮಾರಾಟ ಮಾಡುವುದಿಲ್ಲ.  ಇದು ಗ್ರಾಹಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಇಲ್ಲಿ ಪ್ರತಿಯೊಂದು ಕೆಲಸವೂ ರೆಡಿಮೇಡ್.  ಪ್ರತಿದಿನ 3 ರಿಂದ 4 ಟನ್ ರಿಂಗ್ ಮಾಡಬಹುದಾಗಿದ್ದು, ಈಗ ಬೇಡಿಕೆಗೆ ಅನುಗುಣವಾಗಿ ಪ್ರತಿ ತಿಂಗಳು ಸುಮಾರು 20 ಟನ್ ರಿಂಗ್ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.  ಈಗಾಗಲೇ ಹಲವಾರು ಕಡೆ ಶಾಲೆಗಳು, ದೇವಸ್ಥಾನಗಳ ನಿರ್ಮಾಣಕ್ಕೆ ಸ್ಟೀಲ್ ರಿಂಗ್ ಮಾರಾಟ ಮಾಡಿದ್ದಾರೆ.

ಅಟೊಮೇಟಿಕ್ ಯಂತ್ರದ ಉಪಯೋಗಗಳು

ಈ ರೀತಿ ಅತ್ಯಾಧುನಿಕ ಅಟೊಮೇಟಿಕ್ ರಿಂಗ್ ತಯಾರಿಕೆ ಯಂತ್ರಗಳನ್ನು ಬಳಸುವುದರಿಂದ ಕಟ್ಟಡ ನಿರ್ಮಾಪಕರಿಗೆ ಹೆಚ್ಚುವರಿ ಕಾರ್ಮಿಕರ ಕೊರತೆ ನೀಗಿಸಬಹುದು.  ಯಾವುದೇ ರೀತಿಯಲ್ಲಿ ಕಬ್ಬಿಣ ವೇಸ್ಟೇಜ್ ಇರಲ್ಲ.  ಸಮಯದ ಜೊತೆ ಹಣದ ಉಳಿತಾಯವೂ ಸಾಧ್ಯವಿದೆ.  ಮೇಲಾಗಿ ಗುಣಮಟ್ಟವನ್ನೂ ಕಾಯ್ದುಕೊಳ್ಳಬಹುದಾಗಿದೆ.

ವಿನೋದಕುಮಾರ ಅಣ್ಣಾರಾಯ ಪೀರಗೊಂಡ ಹಿನ್ನೆಲೆ

ವಿನೋದಕುಮಾರ ಅಣ್ಣಾರಾಯ ಪೀರಗೊಂಡ ಬಸವನಾಡು ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಭೀಮಾ ತೀರದ ಉಮರಾಣಿ ಸ್ವಗ್ರಾಮ ಯುವಕ.  ಆದರೆ. ಇವರ ತಂದೆ ಬಸ್ ಕಂಡಕ್ಟರ್ ಆಗಿದ್ದರಿಂದ 14 ವರ್ಷ ಬೆಂಗಳೂರು ಮತ್ತು 15 ವರ್ಷ ವಿಜಯಪುರದಲ್ಲಿ ಸೇವೆ ಸಲ್ಲಿಸಿ ಮಕ್ಕಳ ಸಲಹೆಯಂತೆ ಸ್ವಯಂ ನಿವೃತ್ತಿ ಪಡೆದರು.  ಹಿರಿಯ ಮಗ ವಿನೋದಕುಮಾರ ಪೀರಗೊಂಡನನ್ನು ವಿಜಯಪುರ ನಗರದ ವಿವಿ ಸಂಘದ ಡಿಗ್ರಿ ಕಾಲೇಜಿನಲ್ಲಿ ಬಿ.ಕಾಂ ಓದಿಸಿದರು.  ಆತನ ಇಚ್ಛೆಯಂತೆ ಕೇಂದ್ರ ಲೋಕಸೇವಾ ಆಯೋಗದ(UPSC) ಪರೀಕ್ಷೆ ತಯಾರಿಗಾಗಿ ಬೆಂಗಳೂರು, ದೆಹಲಿಗೂ ಕಳುಹಿಸಿದರು.  ಕೆಪಿಎಸ್‌ಸಿ ಪರೀಕ್ಷೆ ತಯಾರಿಗೂ ಸಲಹೆ ನೀಡಿದರು.  ಆದರೆ, ಕಾರಣಾಂತರಗಳಿಂದ ವಿನೋದಕುಮಾರ ಪೀರಗೊಂಡ ಸರಕಾರಿ ಅಧಿಕಾರಿಯಾಗಲಿಲ್ಲ.

ಹೀಗಾಗಿ ಮಗನಿಗೆ ವಿಜಯಪುರದಲ್ಲಿ ಯಾವುದಾದರೂ ಸ್ವಯಂ ಉದ್ಯೋಗ ಕೈಗೊಳ್ಳಲು ನೆರವಾಗಲು ಯೋಚಿಸಿ ಅದಕ್ಕೂ ಮೊದಲು ವಿಜಯಪುರ ನಗರದಲ್ಲಿ ವಾಸಿಸಲು ಮನೆಯೊಂದನ್ನು ನಿರ್ಮಿಸಲು ಮುಂದಾದರು.  ಮನೆ ಕಟ್ಟಿದ ಮೇಲೆ ಯಾವುದಾದರೊಂದು ಉದ್ಯಮ ಪ್ರಾರಂಭಿಸಿದರಾಯಿತು ಎಂದು ಮನೆ ನಿರ್ಮಿಸಿದ್ದು ಆಯ್ತು.  ಆದರೆ, ಈ ಸಂದರ್ಭದಲ್ಲಿ ಸಿಕ್ಕ ಅನುಭವ ಈ ಯುವಕನ ಯೋಚನೆಯನ್ನೇ ಬದಲಿಸಿತು.  ಅಂದು ಎದುರಿಸಿದ ಸಮಸ್ಯೆಗಳು, ಸಿಕ್ಕ ಅನುಭವ ಈಗ ಸ್ಟೀಲ್ ರಿಂಗ್ ಉದ್ಯಮದಲ್ಲಿ ಮಾಸ್ಟರ್ ಆಗಲು ನೆರವಾಗಿದೆ.

ಕೃಷಿಯಲ್ಲೂ ಆಸಕ್ತಿ ಹೊಂದಿರುವ ವಿನೋದಕುಮಾರ ಅಣ್ಣಾರಾಯ ಪೀರಗೊಂಡ

ಈ ಯುವಕ ವಿನೋದ ಅಣ್ಣಾರಾಯ ಪೀರಗೊಂಡ ತಮ್ಮ ಸ್ವಗ್ರಾಮ ಉಮರಾಣಿಯಲ್ಲಿ 15 ಎಕರೆ ಜಮೀನು ಹೊಂದಿದ್ದು, ಅಲ್ಲಿ ಒಂದೂವರೆ ಎಕರೆಯಲ್ಲಿ ಚಿಕ್ಕು(ಸಪೋಟಾ) ಕೃಷಿ ಮಾಡಿದ್ದಾರೆ.  ಉಳಿದ ಪ್ರದೇಶದಲ್ಲಿ ಇಲ್ಲಿ ಪಾರಂಪರಿಕವಾಗಿ ಬೆಳೆಯುವ ಕಬ್ಬನ್ನು ಬೆಳೆಯುತ್ತಿದ್ದಾರೆ.  ವೀಕೆಂಡ್ ನಲ್ಲಿ ಊರಿಗೆ ತೆರಳಿ ಕೃಷಿಯನ್ನೂ ಮಾಡುವ ಮೂಲಕ ಭೂತಾಯಿಯ ಸೇವೆಯನ್ನೂ ಮಾಡುತ್ತಿದ್ದಾರೆ.

ಇವರು ಸಾಹಸಗಾಥೆ ಇದೇ ರೀತಿ ಮುಂದುವರೆಯಲಿ.  ಈ ಕ್ಷೇತ್ರದಲ್ಲಿ ಮತ್ತಷ್ಟು ಪರಿಣಿತಿ ಜೊತೆಗೆ ಅತ್ಯುತ್ತಮ ಸಾಧನೆ ಮಾಡಲಿ ಎಂದು ಹಾರೈಸೋಣ.

ಆಸಕ್ತರು ಇವರ ಅಂಗಡಿಗೆ ಭೇಟಿ ನೀಡಬಹುದು.

ವಿಳಾಸ: ವೈಭವಿ ಟ್ರೆಡರ್ಸ್, ಪ್ಲಾಟ್ ಸಂಖ್ಯೆ. 81/22., ಬಿ. ಎಂ. ಪಾಟೀಲ ಸರ್ಕಲ್ ಹತ್ತಿರ, ಶ್ರೀ ಸಿದ್ಧಾರೂಢ ಮಠ ರಿಂಗ್ ರೋಡ್, ವಿಜಯಪುರ- 586103.  ಸಂಪರ್ಕ ಸಂಖ್ಯೆ- 8884440333 ಮತ್ತು 9902348990.

Leave a Reply

ಹೊಸ ಪೋಸ್ಟ್‌