ಗೋ ಸಂಪತ್ತು ಉಳಿಸಲು ಜೋಳಕ್ಕೆ ಬೆಂಬಲ ಬೆಲೆ ಅಗತ್ಯವಾಗಿದೆ- ಶಾಸಕ ಬಸನಗೌಡ ಪಾಟೀಲ ಯತ್ನಾಳ

ವಿಜಯಪುರ: ವೈಜ್ಞಾನಿಕ ಕಾರಣಗಳಿಂದಲೇ ಋಷಿಮುನಿಗಳು, ಹಿರಿಯರು ಆಕಳನ್ನು ಗೋಮಾತೆ ಎಂದು ಕರೆದಿದ್ದಾರೆ.  ಜೋಳ ಬೆಳೆಯುವುದು ಕಡಿಮೆ ಆಗಿದ್ದರಿಂದ, ಕ್ರಮೇಣ ಗೋ ಸಂಪತ್ತು ಕಡಿಮೆಯಾಗುತ್ತಿದ್ದು, ಮುಂದಿನ ಅಧಿವೇಶನದಲ್ಲಿ ಪ್ರತಿ ಕ್ವಿಂಟಾಲ್ ಜೋಳಕ್ಕೆ ಕನಿಷ್ಠ ರೂ. 5000 ಬೆಂಬಲ ಬೆಲೆ ನಿಗದಿ ಪಡಿಸಲು ಸರಕಾರದ ಮೇಲೆ ಒತ್ತಡ ತಂದು ಪ್ರಯತ್ನಿಸುತ್ತೇನೆ ಎಂದು ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಹೇಳಿದರು.

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ತೊರವಿ ಸಮೀಪ ಸಂಕ್ರಾಂತಿ ಅಂಗವಾಗಿ ಆಯೋಜಿಸಲಾಗಿರುವ ಶ್ರೀ ಸಿದ್ದೇಶ್ವರ ಜಾನುವಾರು ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಉತ್ತಮ ಜಾನುವಾರುಗಳಿಗೆ ಬಹುಮಾನ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಬಂದಾಗ ಈ ದೇಶದಲ್ಲಿ ದನಗಣತಿ ಪ್ರಕಾರ 120 ಕೋಟಿ ಪಶು ಸಂಪತ್ತು ಇತ್ತು.  ಆಗ ಜನಸಂಖ್ಯೆ ಕೇವಲ 35 ಕೋಟಿ ಇತ್ತು.  ಆದರೆ, ಈಗ ಜನಸಂಖ್ಯೆ 150 ತಲುಪಿದೆ.  ಪಶು ಸಂಪತ್ತು ಕೇವಲ 25 ಕೋಟಿಗೆ ಇಳಿಕೆಯಾಗಿದೆ.  ಇದಕ್ಕೆ ಮೇವಿನ ಕೊರತೆ ಪ್ರಮುಖ ಕಾರಣವಾಗಿದೆ.  ಜೋಳ ಬೆಳೆದರೆ ಕಣಕಿ(ಮೇವು) ಸಿಗುತ್ತದೆ.  ಅದರಿಂದ ದನಗಳನ್ನು ಸಾಕಬಹುದು.  ದನಗಳಿದ್ದರೆ ಗೊಬ್ಬರ ದೊರೆಯುತ್ತದೆ.  ಜೋಳಕ್ಕೆ ಉತ್ತಮ ಬೆಲೆ ಇಲ್ಲದ ಕಾರಣ ಈ ಸರಪಳಿ ಕಳೆದುಕೊಂಡಿದೆ.  ಮತ್ತೆ ಜೋಳ ಬೆಳೆಯಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೆಳಗಾವಿ ಅಧಿವೇಶನದಲ್ಲಿ ಜೋಳಕ್ಕೆ ಕನಿಷ್ಠ ರೂ. 5000 ಬೆಂಬಲ ಬೆಲೆ ಘೋಷಿಸುವಂತೆ ಧ್ವನಿ ಎತ್ತಲಾಗಿತ್ತು.  ಮತ್ತೆ ಬೆಂಗಳೂರು ಅಧಿವೇಶನದಲ್ಲಿ ಯಾವುದೇ ಪರಿಸ್ಥಿತಿಯಲ್ಲಿ ಘೋಷಣೆ ಮಾಡಲು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ತೊರವಿ ಬಳಿ ದನಗಳ ಜಾತ್ರೆಯಲ್ಲಿ ಉತ್ತಮ ಹೋರಿಗಳಿಗೆ ಶಾಸಕ ಯತ್ನಾಳ ಬಹುಮಾನ ವಿತರಿಸಿದರು

ನಮ್ಮ ಗೋಶಾಲೆಯಲ್ಲಿ ಸಾವಿರ ಆಕಳುಗಳಿವೆ.  ಜವಾರಿ ಆಕಳುಗಳ ಹಾಲಿನಿಂದ ತಯಾರಿಸಿದ ತುಪ್ಪ ಪ್ರತಿ ಕೆಜೆಗೆ ರೂ. 5000, ಗೀರ್ ಆಕಳ ತುಪ್ಪ ರೂ. 2500 ಮಾರಾಟ ಮಾಡುತ್ತಿದ್ದೇವೆ.  ಹಾಲು, ಮೊಸರು ಅಲ್ಲದೆ, ಸೆಗಣಿ ಮತ್ತು ಗೋಮುತ್ರ ಕೂಡ ಮಾರಾಟ ಮಾಡುತ್ತಿದ್ದೇವೆ.  ವಿಭೂತಿ, ಕುಂಕುಮ, ಹಲ್ಲಿನ ಪುಡಿ, ಧೂಪ ಜೊತೆಗೆ ಚರ್ಮ ನಿವಾರಣೆಯ ಔಷಧಿ ತಯಾರಿಸಲಾಗಿದೆ.  ಈ ಔಷಧಿಯಿಂದ ಗುಣಮುಖರಾಗಿರುವ ನ್ಯಾಯಾಧೀಶರೊಬ್ಬರು ಶ್ಲಾಘಿಸಿದ್ದಾರೆ.  ಪ್ರತಿಯೊಬ್ಬರೂ ಗೋವಿನ ಮಹತ್ವ ತಿಳಿದು, ಸಾಕುವುದು ಮತ್ತು ರಕ್ಷಣೆಯ ಕೆಲಸ ಮಾಡಬೇಕು ಎಂದು ಶಾಸಕರು ತಿಳಿಸಿದರು.

ಈ ವೇಳೆ ಅತ್ಯುತ್ತಮ ಹೋರಿಗಳಿಗೆ 10 ಗ್ರಾಂ ಚಿನ್ನದ ಪದಕ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಸಿದ್ದೇಶ್ವರ ಸಂಸ್ಥೆಯ ಉಪಾಧ್ಯಕ್ಷ ಸಂಗು ಸಜ್ಜನ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ ಸೇರಿದಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳು, ಸಿಬ್ಬಂದಿ, ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ್ದ ರೈತರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌