ವಿಜಯಪುರ: ಸಂಚಾರಿ ನಿಯಮಗಳ ಪಾಲನೆ ಮತ್ತು ಜಾಗರೂಕತೆಯಿಂದ ವಾಹನ ಚಲಾಯಿಸಿದರೆ ರಸ್ತೆ ಅಪಘಾತ ಹಾಗೂ ಜೀವಹಾನಿ ತಡೆಯಲು ಸಾಧ್ಯ ಎಂದು ವಿಜಯಪುರ ನಗರ ಡಿವೈಎಸ್ಪಿ ಬಸವರಾಜ ಯಲಿಗಾರ ಹೇಳಿದ್ದಾರೆ.
ನಗರದ ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯದ ಟ್ರಾಮಾ ಸೆಂಟರ್ ನಲ್ಲಿ ವಿವಿಯ ಐಕ್ಯೂಎಸಿ ವಿಭಾಗದ ವತಿಯಿಂದ ಇಂದು ಬುಧವಾರ ಆಯೋಜಿಸಲಾಗಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ರಸ್ತೆ ಅಪಘಾತಗಳು ಮತ್ತು ಅವುಗಳಿಗೆ ಕಾರಣಗಳ ಕುರಿತು ಎಳೆಎಳೆಯಾಗಿ ಮಾಹಿತಿ ನೀಡಿದ ಅವರು, ರಸ್ತೆ ಅಪಘಾತ ಮತ್ತು ಜೀವಹಾನಿ ತಪ್ಪಿಸಲು ಹಾಗೂ ಸಾರ್ವಜನಿಕರ ಸುರಕ್ಷತೆಗಾಗಿ ಸರಕಾರಗಳು ಸಂಚಾರಿ ನಿಯಮಗಳನ್ನು ರೂಪಿಸಿವೆ. ಆದರೆ, ಬಹಳಷ್ಟು ಚಾಲಕರು ವಾಹನಗಳ ಚಾಲನೆ ಸಂದರ್ಭದಲ್ಲಿ ಅವುಗಳ ಬಗ್ಗೆ ಗಮನ ಹರಿಸುವುದಿಲ್ಲ. ಅತೀ ವೇಗದ ಚಾಲನೆ, ಸಂಚಾರಿ ನಿಯಮಗಳ ಉಲ್ಲಂಘನೆ, ಮದ್ಯಪಾನ ಸೇವನೆ ಮಾಡಿ ವಾಹನ ಚಲಾಯಿಸುವುದರಿಂದ ಹೆಚ್ಚು ಅಪಘಾತಗಳು ಉಂಟಾಗುತ್ತಿವೆ. ಚಾಲಕರು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿದರೆ ಅದರಿಂದ ತಾವಷ್ಟೇ ಅಲ್ಲ, ಆ ವಾಹನಗಳಲ್ಲಿರುವ ಇತರ ಪ್ರಯಾಣಿಕರಿಗೆ ಉಂಟಾಗುವ ಹಾನಿ ಮತ್ತು ತಮ್ಮನ್ನೇ ನಂಬಿರುವ ಕುಟುಂಬ ಸದಸ್ಯರ ಭವಿಷ್ಯಕ್ಕೂ ತೊಂದರೆ ಎದುರಾಗುತ್ತದೆ ಎಂಬುದರ ಬಗ್ಗೆ ಎಚ್ಚರಿಕೆ ವಹಿಸಬೇಕು. ವೇಗದ ಚಾಲನೆ ಥ್ರಿಲ್ ನೀಡುತ್ತದೆಯಾದರೂ ಕಿಲ್ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಅವರು ಹೇಳಿದರು.
ಪ್ರತಿಯೊಬ್ಬರಿಗೂ ಜೀವ ಅಮೂಲ್ಯವಾಗಿದೆ. ಹೀಗಾಗಿ ವಾಹನ ಚಾಲನೆ ಮಾಡುವ ಮುನ್ನ ಅದರ ಸೈಡ್ ಬ್ರೇಕ್, ಸೀಟ್ ಬೆಲ್ಟ್, ಸೈಡ್ ಕನ್ನಡಿಗಳು ಸರಿಯಾಗಿರುವ ಬಗ್ಗೆ ಪರಿಶೀಲನೆ ನಡೆಸಬೇಕು. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಹಾಕಿಕೊಳ್ಳಬೇಕು. ತಾವು ಸಂಚರಿಸುವ ಮಾರ್ಗಗಳಲ್ಲಿ ಸದಾ ಜಾಗರೂಕತೆಯಿಂದ ವಾಹನ ಓಡಿಸಿದರೆ ಸುರಕ್ಷಿತ ಪ್ರಯಾಣ ಸಾಧ್ಯ ಎಂದು ಅವರು ಹೇಳಿದರು.
ಈ ಬಾರಿ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಝಿರೊ ಹಾರ್ಮ್ ಆ್ಯಂಡ್ ಬಿ ಎ ಹೀರೊ ಘೋಷ್ಯವಾಕ್ಯ ನೀಡಲಾಗಿದೆ. ಹೀಗಾಗಿ ಪ್ರತಿಯೊಬ್ಬರು ಅಪಘಾತ ರಹಿತ ವಾಹನ ಚಲಾಯಿಸಿ ಉತ್ತಮ ಜೀವನ ಸಾಗಿಸಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ರಸ್ತೆ ಸುರಕ್ಷತೆ ಮತ್ತು ಸಂಚಾರಿ ನಿಯಮಗಳ ಪಾಲನೆ ಕುರಿತು ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಉಪಪ್ರಾಚಾರ್ಯ ಡಾ. ಎಂ. ಬಿ. ಪಾಟೀಲ, ಡಾ. ಸುಮಂಗಲಾ ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ,
ಐಕ್ಯೂಎಸಿ ನಿರ್ದೇಶಕಿ ಡಾ. ಲತಾ ಮುಳ್ಳೂರು ಸ್ವಾಗತಿಸಿ ಪರಿಚಯಿಸಿದರು. ಡಾ. ಸಿದ್ದಲಿಂಗ ತಾಳಿಕೋಟಿ ಪ್ರತಿಜ್ಞಾವಿಧಿ ಬೋಧಿಸಿದರು. ಡಾ. ನಿಲಿಮಾ ಡೋಂಗ್ರೆ ವಂದಿಸಿದರು.