ಬಿಜೆಪಿ ಎಂಪಿ ಟಿಕೆಟ್ ನನಗೆ ಸಿಗಲಿದೆ- ಎಂಎಲ್ಎ ಚುನಾವಣೆಯಲ್ಲಿ ಸ್ಪರ್ಧೆ ಬಯಸಿ ಸಿಪಿಐ ಹುದ್ದೆಗೆ ರಾಜೀನಾಮೆ ನೀಡಿದ್ದೆ- ಮಹೇಂದ್ರಕುಮಾರ ನಾಯಕ

ವಿಜಯಪುರ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ನನಗೆ ಟಿಕೆಟ್ ಸಿಗಲಿದೆ ಎಂದು ಶೇ. 200ರಷ್ಟು ವಿಶ್ವಾಸವಿದೆ ಎಂದು ಕಳೆದ ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಸಿಪಿಐ ಹುದ್ದೆಗೆ ರಾಜೀನಾಮೆ ನೀಡಿದ್ದ ಮಹೇಂದ್ರಕುಮಾರ ನಾಯಕ ತಿಳಿಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಬಾರಿ ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿಪಿಐ ಹುದ್ದೆಗೆ ರಾಜೀನಾಮೆ ನೀಡಿದ್ದೆ.  ಆದರೆ, ಕಾಣದ ಕೈಗಳ ಕುತಂತ್ರದಿಂದ ಕಳೆದ ಬಾರಿ ನಾಗಠಾಣ ಟಿಕೇಟ್ ತಪ್ಪಿದೆ.  ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗುತ್ತದೆ ಎಂದು ಶೇ. 200 ರಷ್ಟು ವಿಶ್ವಾಸವಿದೆ ಎಂದು ಹೇಳಿದರು.

ಹೈಕಮಾಂಡ್ ಕೂಡ ನೀವು ಕೆಲಸ ಮಾಡಿ ಎಂದು ಹೇಳಿದೆ.  ಪೊಲೀಸ್ ‌ಅಧಿಕಾರಿಯಾಗುವ ‌ಜೊತೆಗೆ ನಾನು ಸಮಾಜ ಸೇವೆಯನ್ನು ಮಾಡಿದ ಅನುಭವವಿದೆ.  ಬಿಜೆಪಿ ಸೇರ್ಪಡೆಯಾಗುವಾಗ ಸಾಮಾನ್ಯ ಕಾರ್ಯಕರ್ತನಾಗಿ ಸೇರಿದ್ದೇನೆ.  ಯಾವ ಭರವಸೆ ಪಡೆದು ಸೇರ್ಪಡೆಯಾಗಿಲ್ಲ.  ಒಂದು ಕ್ಷೇತ್ರಕ್ಕೆ ಅನೇಕ ಆಕಾಂಕ್ಷಿಗಳು ಇರುವುದರಿಂದ ಟಿಕೇಟ್ ಸಿಗದಿದ್ದರೂ ಬಿಜೆಪಿ ಪರವಾಗಿಯೇ ದುಡಿಯುವೆ ಎಂದು ಅವರು ಹೇಳಿದರು.

ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಗೋಪಾಲ ಕಾರಜೋಳ ಅಥವಾ ನನಗೆ ಟಿಕೇಟ್ ‌ನೀಡಿದ್ದರೆ ನಾಗಠಾಣ ಕ್ಷೇತ್ರ ಬಿಜೆಪಿ ಪಾಲಾಗುತ್ತಿತ್ತು.  ಆದರೆ, ಹೊಸ‌ಮುಖಕ್ಕೆ ಟಿಕೇಟ್ ನೀಡಿದ ಪರಿಣಾಮ ಬಿಜೆಪಿ ಅಭ್ಯರ್ಥಿ ಸೋತರು.  ಟಿಕೇಟ್ ಕೊಡಿಸಿದ ಹೊಸ ವ್ಯಕ್ತಿಗೆ ಎಲ್ಲ ರೀತಿಯ ಸಹಾಯ ಮಾಡುವುದಾಗಿ ಜವಾಬ್ದಾರಿ ತೆಗೆದುಕೊಂಡೆ.  ಆದರೆ, ಅವರು ಮುಂದೆ ಬರಲಿಲ್ಲ.  ಹೀಗಾಗಿ ಇದು ಸಹ ಬಿಜೆಪಿ ಅಭ್ಯರ್ಥಿ ಸೋಲಿಗೆ ಕಾರಣವಾಯಿತು ಎಂದು ಅವರು ತಿಳಿಸಿದರು.

ಕಳೆದ ಬಾರಿ ನನಗೆ ಯಾರು ಯಾರು ತಪ್ಪಿಸಿದ್ದಾರೋ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ತಪ್ಪಿಸಲಿದ್ದೇವೆ.  ಆದರೆ, ಪಕ್ಷ ಯಾರಿಗೆ ಟಿಕೇಟ್ ‌ನೀಡಿದರೂ ಅವರ ಗೆಲುವಿಗಾಗಿ ಕೆಲಸ ಮಾಡುತ್ತೇನೆ ಎಂದು ಮಹೇಂದ್ರಕುಮಾರ ನಾಯಕ ಇದೇ ವೇಳೆ ಸ್ಪಷ್ಟಪಡಿಸಿದರು.

Leave a Reply

ಹೊಸ ಪೋಸ್ಟ್‌