ವಿಜಯಪುರ: ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಶಾಸಕ ಬಸನಗೌಡ ಪಾಟೀಲ ನೇತೃತ್ವದ ಶ್ರೀ ಸಿದ್ಧೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟ್ ನಿರ್ಮಿತ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜನೇವರಿ 18 ರಿಂದ ಜನೇವರಿ 22ರ ವರೆಗೆ ಐದು ದಿನಗಳ ಕಾಲ ಹೆರಿಗೆ ಮಾಡಿಸಿಕೊಳ್ಳುವ ಮಹಿಳೆಯರಿಗೆ ಯಾವುದೇ ಶುಲ್ಕವಿಲ್ಲದೇ ಉಚಿತವಾಗಿ ಹೆರಿಗೆ ಆರೋಗ್ಯ ಸೇವೆ ಸಿಗಲಿದೆ.
ಜನೇವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಯಾಗಲಿದ್ದು, ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಈ ಅಯೋಧ್ಯಾ ಸಂಭ್ರಮೋತ್ಸ ಅಂಗವಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಅಪೇಕ್ಷೆಯಂತೆ ಈ ವ್ಯವಸ್ಥೆ ಮಾಡಲಾಗಿದೆ. ಈ ಅವಧಿಯಲ್ಲಿ ಜನಿಸುವ ಮಕ್ಕಳನ್ನು ಶ್ರೀ ರಾಮ ಮತ್ತು ಸೀತಾದೇವಿ ಪ್ರತಿರೂಪವೆಂದು ಪರಿಗಣಿಸಿ ಹೆರಿಗೆಯನ್ನು ಸಂಪೂರ್ಣವಾಗಿ ಉಚಿತವಾಗಿ ನೆರವೇರಿಸಲಾಗುತ್ತದೆ. ಈ ಮೂಲಕ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆಯ ಸಮಯವನ್ನು ಮತ್ತಷ್ಟು ಸಾರ್ಥಕವಾಗಿ ಮಾಡಲಾಗುತ್ತಿದೆ.
ಅಗತ್ಯವಿರುವ ರಾಮಭಕ್ತರು ಇದರ ಲಾಭ ಪಡೆದುಕೊಳ್ಳಬೇಕು. ಮರ್ಯಾದಾ ಪುರುಷೋತ್ತಮ ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಈ ಸಂದರ್ಭದಲ್ಲಿ ಸರ್ವ ಹಿಂದೂಗಳ ಪರವಾಗಿ ನಾಡಿನ ಜನತೆಗೆ ಈ ಮೂಲಕ ಕೊಡುಗೆ ನೀಡಲಾಗುತ್ತಿದೆ ಎಂದು ಜೆಎಸ್‌ಎಸ್ ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಶರಣ ಮಳಖೇಡ್ಕರ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.