ವಿಜಯಪುರ: ಪಕ್ಷದ ಕಾರ್ಯಕರ್ತರು ಮತ್ತು ಹಿರಿ ಮುಖಂಡರ ಆಶೀರ್ವಾದದಿಂದ ತಮಗೆ ಮತ್ತೋಮ್ಮೆ ಬಿಜೆಪಿ ಜಿಲ್ಲಾಧ್ಯ್ಕಷ ಸ್ಥಾನದ ಜವಾಬ್ದಾರಿ ಒಲಿದು ಬಂದಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ತಿಳಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಮಂದಿರ ಲೋಕಾರ್ಪಣೆಯ ಈ ಶುಭ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷನಾಗಿ ಪುನರಾಯ್ಕೆಯಾಗಿರುವುದು ನನ್ನ ಸುದೈವ. ಜಿಲ್ಲಾ ಬಿಜೆಪಿಯಲ್ಲಿ ಯಾವ ಬಣವೂ ಇಲ್ಲ. ಎಲ್ಲ ನಾಯಕರು ನನ್ನ ಆಯ್ಕೆಗೆ ಸಹಕರಿಸಿ ಈ ಜವಾಬ್ದಾರಿಯನ್ನು ಹೊರೆಸಿದ್ದಾರೆ, ಅವರ ವಿಶ್ವಾಸವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವೆ. ಎಲ್ಲ ಕಾರ್ಯಕರ್ತರ, ಮುಖಂಡರ ಮಾರ್ಗದರ್ಶನ, ಸಲಹೆ ಸೂಚನೆ ಪಡೆದುಕೊಂಡು ಪಕ್ಷ ಸಂಘಟನೆ ಮಾಡುವುದಾಗಿ ಅವರು ತಿಳಿಸಿದರು.
ಮುಂಬರುವ ಲೋಕಸಭೆ ಚುನಾವಣೆಗೆ ದಿನಗಣನೆ ನಡೆಯುತ್ತಿದೆ. ನರೇಂದ್ರ ಮೋದಿ ಅನೇಕ ಅಭಿವೃದ್ಧಿ ಕಾರ್ಯಗಳ ಮೂಲಕ ಮನೆಮಾತಾಗಿದ್ದು, ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಿಯಾಗಿ ಮುಂದುವರೆಸಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಸಂಘಟನೆ ಕೆಲಸ ಸಾಗಿದೆ. ಈ ಬಾರಿಯೂ ಜನತೆ ಖಂಡಿತವಾಗಿಯೂ ಬಿಜೆಪಿಗೆ ಆಶೀರ್ವಾಧ ಮಾಡಲಿದ್ದಾರೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಟಗಿ,ಮಹಾನಗರ ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ, ಬಿಜೆಪಿ ಮುಖಂಡರಾದ ಬಸವರಾಜ ಬಿರಾದಾರ, ವಿಜಯ ಜೋಶಿ ಮುಂತಾದವರು ಉಪಸ್ಥಿತರಿದ್ದರು.