ವಿಜಯಪುರ: ರೋಗಿಗಳಿಗೆ ಶಸ್ತ್ರಚಿಕಿತ್ಸೆಗಳೆಂದರೆ ಸಾಕು ಅವರಿಗಷ್ಟೇ ಅಲ್ಲ ಅವರ ಸಂಬಂಧಿಕರಿಗೆ ಚಿಂತೆ ಎದುರಾಗುತ್ತದೆ. ಅದರಲ್ಲೂ ಬಡವರಿಗೆ ಮೂತ್ರಪಿಂಡ ಕೃಸಿ ಶಸ್ತ್ರಚಿಕಿತ್ಸೆ ಬಗ್ಗೆ ಕೇಳಿದರೂ ಆತಂಕ ಉಂಟಾಗುತ್ತದೆ. ಅದರ ಚಿಕಿತ್ಸಾ ವೆಚ್ಚದ ಬಗ್ಗೆಯೂ ಗಾಬರಿಯಾಗುತ್ತದೆ. ಬಡವರ ಪಾಲಿಗೆ ಈ ಶಸ್ತ್ರಚಿಕಿತ್ಸೆಗಳು ಕೈಗೆಟುಕದಂತಾಗಿ ಬಿಡುತ್ತದೆ.
ಆದರೆ, ಬಸವನಾಡು ವಿಜಯಪುರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ವೈದ್ಯರು ಬಿಹಾರ ಮೂಲದ 17 ವರ್ಷದ ಯುವಕನೊಬ್ಬನಿಗೆ ಉಚಿತವಾಗಿ ಕಿಡ್ನಿಕಸಿ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕಿಡ್ನಿಕಸಿ ಶಸ್ತ್ರಚಿಕಿತ್ಸೆಗಳಿಗೆ ರೋಗಿಗಳು ಮಹಾನಗರಗಳನ್ನೇ ಹೆಚ್ಚಾಗಿ ಅವಲಂಬಿಸುತ್ತಾರೆ. ಇದೇ ರೀತಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಬಿಹಾರ ಮೂಲದ 17 ವರ್ಷದ ಕಬಡ್ಡಿ ಆಟವಾಡುವ ಯುವಕನೊಬ್ಬ ಕಿಡ್ನಿ ಶಸ್ತ್ರಚಿಕಿತ್ಸೆಗಾಗಿ ಹೈರಾಣಾಗಿದ್ದ. ನಂಜಿನ್ನು ನಿರ್ಲಕ್ಷ್ಯಿಸಿದ್ದರಿಂದಾಗಿ ಆದನ ಕಿಡ್ನಿಗಳಿಗೆ ಹಾನಿಯಾಗಿತ್ತು. ಈ ಕುರಿತು ಬಿಹಾರ ಮತ್ತು ದೆಹಲಿಗಳಲ್ಲಿ ಆಸ್ಪತ್ರೆಗಳಿಗೆ ಸಂಪರ್ಕಿಸಿದಾಗ ಅಲ್ಲಿನ ವೈದ್ಯರು ಸುಮಾರು ರೂ. 15 ರಿಂದ ರೂ. 20 ಲಕ್ಷ ವೆಚ್ಚವಾಗುತ್ತದೆ ಎಂದು ತಿಳಿಸಿದ್ದರು. ಇದರಿಂದ ಕಂಗಾಲಾದ ಯುವಕ ಫೇಸಬುಕ್ ನಲ್ಲಿ ತನ್ನ ಸಮಸ್ಯೆ ಕುರಿತು ಅಲವತ್ತುಕೊಂಡಿದ್ದ. ಈ ಪೋಸ್ಟ್ ನೋಡಿದ ಕರ್ನಾಟಕದ ಹಿರಿಯ ಪೊಲೀಸ್ ಅಧಿಕಾರಿ ಮತ್ತು ಕೆ.ಎಸ್.ಆರ್.ಪಿ ವಿಭಾಗದ ಎಡಿಜಿಪಿ ಸೀಮಾಂತಕುಮಾರ ಸಿಂಗ್, ರೋಗಿಯನ್ನು ಸಂಪರ್ಕಿಸಿ ವಿಜಯಪುರ ಬಿ.ಎಲ್.ಡಿ.ಇ ಆಸ್ಪತ್ರೆಯ ಬಗ್ಗೆ ಮಾಹಿತಿ ನೀಡಿ ಇಲ್ಲಿನ ವೈದ್ಯರನ್ನು ಸಂಪರ್ಕಿಸಿ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ. ಈ ರೋಗಿಗೆ ಆತನ ತಾಯಿ ಕಿಡ್ನಿದಾನ ಮಾಡಿದ್ದು, ಇಬ್ಬರಿಗೂ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಈಗ ಇಬ್ಬರೂ ಗುಣಮುಖರಾಗಿದ್ದು, ಡೀಮ್ಡ್ ವಿವಿ ಅಧಿಕಾರಿಗಳು ರೋಗಿ ಮತ್ತು ತಾಯಿಗೆ ಶುಭಕೋರಿ ಬೀಳ್ಕೊಟ್ಟಿದ್ದಾರೆ.
ಘೋಷಣೆಯಂತೆ ಉಚಿತವಾಗಿ ಕಿಡ್ನಿಕಸಿ
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಎಸ್. ಮುಧೋಳ, ನಮ್ಮ ಭಾಗದ ಜನರು ಚಿಕಿತ್ಸೆಗಳಿಗಾಗಿ ದೂರದ ಊರುಗಳಿಗೆ ಅಲೆದಾಡಬಾರದು. ಚಿಕಿತ್ಸೆಗಳು ಅವರಿಗೆ ಹೊರೆಯಾಗಬಾರದು ಎಂದು ಸಂಸ್ಥೆಯ ಅಧ್ಯಕ್ಷ ಮತ್ತು ಸಚಿವ ಎಂ. ಬಿ. ಪಾಟೀಲ ಅವರು ಸೂಚನೆ ನೀಡಿದ್ದಾರೆ. ಹೀಗಾಗಿ ನಾವು ಎಲ್ಲ ರೀತಿಯ ಅತ್ಯಾಧುನಿಕ ಶಸ್ತ್ರಚಿಕಿತ್ಸೆಗಳನ್ನು ಮಾಡುತ್ತಿದ್ದೇವೆ. ಶ್ರೀ ಬಿ. ಎಂ. ಪಾಟೀಲ ಆಸ್ಪತ್ರೆಯಲ್ಲಿ ಹೊಸ ಸೌಲಭ್ಯಗಳು ಆರಂಭವಾದಾಗ ಕಿಡ್ನಿಕಸಿ ಮಾಡಿಸಿಕೊಳ್ಳುವ ಮೊದಲ ಐದು ರೋಗಿಗಳಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡುವುದಾಗಿ ಭರವಸೆ ನೀಡಿದ್ದೇವು. ಅದರಂತೆ ಈಗ ಮೊದಲ ರೋಗಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಮಾತ್ರವಲ್ಲ, ಆಸ್ಪತ್ರೆಯಲ್ಲಿ ದಾಖಲಾತಿ, ಆರೈಕೆ, ಔಷಧೋಪಚಾರ ಎಲ್ಲವನ್ನೂ ಉಚಿತವಾಗಿ ಮಾಡಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಮುಂಬರುವ ದಿನಗಳಲ್ಲಿ ವಿಜಯಪುರ ನಗರದಲ್ಲಿ ಕ್ಯಾನ್ಸರ್ ಆಸ್ಪತ್ರೆ ಪ್ರಾರಂಭಿಸಲು ಎಂ. ಬಿ. ಪಾಟೀಲ ಅವರು ತಿಳಿಸಿದ್ದಾರೆ ಎಂದು ಡಾ. ಆರ್. ಎಸ್. ಮುಧೋಳ ಮಾಹಿತಿ ನೀಡಿದರು.
ಕಿಡ್ನಿಕಸಿ ಮಾಡಿದ ವೈದ್ಯ ಡಾ. ಎಸ್. ಬಿ. ಪಾಟೀಲ ಮಾತನಾಡಿ, ನಮ್ಮ ದೇಶದಲ್ಲಿ ಕಿಡ್ನಿಕಸಿ ಅಗತ್ಯವಾಗಿರುವ ರೋಗಿಗಳು ಮತ್ತು ಕಿಡ್ನಿದಾನಿಗಳ ಸಂಖ್ಯೆಯಲ್ಲಿ ಬಹಳಷ್ಟು ವ್ಯತ್ಯಾಸವಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಜಾಗೃತಿ ಅಗತ್ಯವಾಗಿದೆ. ಕಿಡ್ನಿ ಕಸಿ ಮಾಡಬೇಕಾದರೆ ದಾನಿಗಳು ರೋಗಿಯ ಹತ್ತಿರದ ಸಂಬಂಧಿಯಾಗಿರಬೇಕು ಅಥವಾ ಮೆದುಳು ನಿಷ್ಕ್ರೀಯಗೊಂಡಿರುವ ರೋಗಿಗಳಿಂದ ಅವರ ಸಂಬಂಧಿಕರಿಂದ ಒಪ್ಪಿಗೆ ಪಡೆದು ಅಂಗಾಂಗ ದಾನ ಮಾಡಿರಬೇಕು. ಆಗ ಮಾತ್ರ ಅಂಥ ದಾನಿಗಳಿಂದ ಕಿಡ್ನಿಕಸಿ ಮಾಡಲಾಗುತ್ತದೆ. ಅಷ್ಟೇ ಅಲ್ಲ, ಕಿಡ್ನಿಕಸಿ ಅಗತ್ಯವಾಗಿರುವವರು ಮೊದಲೇ ತಮ್ಮ ಹೆಸರನ್ನು ನಮ್ಮ ಆಸ್ಪತ್ರೆಯಲ್ಲಿ ನೋಂದಣಿ ಮಾಡಿಸಿರಬೇಕು. ಆಗ, ಆದ್ಯತೆಯ ಅನುಸಾರ ಮತ್ತು ನೋಂದಣಿಯಲ್ಲಿರುವ ಅನುಕ್ರಮ ಸಂಖ್ಯೆಗೆ ಅನುಗುಣವಾಗಿ ಕಿಡ್ನಿಕಸಿ ಮಾಡಬಹುದಾಗಿದೆ. ಈ ಯುವಕನ ಪ್ರಕರಣದಲ್ಲಿ ಆತನ ತಾಯಿಯೇ ಕಿಡ್ನಿದಾನ ಮಾಡಿದ್ದರಿಂದ ಬಹಳ ಅನುಕೂಲವಾಗಿದೆ ಎಂದು ತಿಳಿಸಿದರು.
ಕಿಡ್ನಿಕಸಿ ಶಸ್ತ್ರಚಿಕಿತ್ಸೆ ಬಗ್ಗೆ ಪ್ರತಿಕ್ರಿಯೆ ನೀಡಿದ ಶಸ್ತ್ರಚಿಕಿತ್ಸೆಗೊಳಗಾದ ಯುವಕ ತನಗೆ ವೈದ್ಯರು ಮರುಜೀವ ನೀಡಿದಂತಾಗಿದೆ. ನಮ್ಮ ಬಿಹಾರ ಮತ್ತು ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಇಲ್ಲಿನ ಶಸ್ತ್ರಚಿಕಿತ್ಸೆ, ಆಸ್ಪತ್ರೆಯಲ್ಲಿ ಆರೋಗ್ಯ ಸೇವೆ ಅತ್ಯುತ್ತಮವಾಗಿದ್ದು ತುಂಬ ಸಂತಸವಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾನೆ.