ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ: ಸರಕಾರದ ನಿರ್ಧಾರಕ್ಕೆ ಕೃತಜ್ಞತೆ ಸಲ್ಲಿಸಿದ ಸಂಗಮೇಶ ಬಬಲೇಶ್ವರ

ವಿಜಯಪುರ: 12ನೇ ಶತಮಾನದ ಸಮಾಜ ಸುಧಾರಕ, ವಿಶ್ವದ ಪ್ರಥಮ ಪ್ರಜಾಪ್ರಭುತ್ವ ಸ್ಥಾಪಕ ಅಣ್ಣ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರಕಾರ ಘೋಷಣೆ ಮಾಡಿರುವುದಕ್ಕೆ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಮುಖ್ಯ ವಕ್ತಾರ ಸಂಗಮೇಶ ಬಬಲೇಶ್ವರ ಕೃತಜ್ಞತೆ ಸಲ್ಲಿಸಿದ್ದಾರೆ. 

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ರಾಜ್ಯ ಸರಕಾರ ಐತಿಹಾಸಿಕ ತೀರ್ಮಾನ ಮಾಡಿದೆ.  ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ, ಸಚಿವರಾದ ಶರಣ ಎಂ. ಬಿ. ಪಾಟೀಲ, ರಾಜ್ಯ ಸಚಿವ ಸಂಪುಟದ ಎಲ್ಲ ಸಚಿವರು, ಶಾಸಕರು ಮತ್ತು ನಾಡಿನ ಸಮಸ್ತ ಮಠಾಧೀಶರಿಗೆ ಬಸವಾಭಿಮಾನಿಗಳ ಪರವಾಗಿ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

ಈ ಘೋಷಣೆಯ ಜೊತೆಗೆ ಬಸವಣ್ಣನವರ ವಚನ ಸಾಹಿತ್ಯ ಚಿಂತನೆಗಳನ್ನು ಮನೆ ಮನಗಳಿಗೆ ತಲುಪಿಸುವ ಕೆಲಸವನ್ನು ಸರಕಾರ ಮಾಡಲಿದೆ ಎಂದು ಹೇಳಿರುವ ಸಿಎಂ ನೈಜ ಬಸವಾನುಯಾಯಿಯಾಗಿದ್ದಾರೆ.  ವಿಶ್ವಗುರು ಬಸವಣ್ಣನವರು ಕಲೆ, ಸಾಹಿತ್ಯ, ಸಂಗೀತ, ರಾಜಕೀಯ, ಸಾಮಾಜಿಕ, ಆರ್ಥಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ.  ಅವರು ಬರೀ ಕರ್ನಾಟಕದ ಸಾಂಸ್ಕೃತಿಕ ನಾಯಕರಲ್ಲ, ವಿಶ್ವದ ಸಾಂಸ್ಕೃತಿಕ ನಾಯಕರು ಎನ್ನುವುದರಲ್ಲಿ ಎರಡು ಮಾತಿಲ್ಲ.  ಜಗತ್ತಿನ ಎಲ್ಲಾ ಸಂವಿಧಾನಗಳು ವಚನ ಸಾಹಿತ್ಯದ ಮೇಲೆ ನಿಂತಿವೆ.  ನಾವು ಬಸವ ನಾಡಿನಲ್ಲಿ ಹುಟ್ಟಿದವರು, ಬಸವಣ್ಣನವರು ನಡೆದಾಡಿದ ಭೂಮಿಯಲ್ಲಿ ಬದುಕು ಕಟ್ಟಿಕೊಂಡವರು ಎನ್ನುವುದು ನಾವೆಲ್ಲ ಸದಾಕಾಲ ಅಭಿಮಾನ ಪಡುವ ಸಂಗತಿ ಎಂದು ಅವರು ತಿಳಿಸಿದ್ದಾರೆ.

ಪ್ರಾಥಮಿಕ ಶಾಲಾ ಹಂತದಿಂದ ಪದವಿಯವರೆಗೆ ಬಸವಣ್ಣನವರ ವಚನ ಸಾಹಿತ್ಯವನ್ನು ವಿದ್ಯಾರ್ಥಿಗಳ ಪಾಠಗಳಲ್ಲಿ ಅಳವಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ.  ಅದನ್ನು ಎಲ್ಲಾ ಹಂತದಲ್ಲಿಯೂ ಕರ್ನಾಟಕ ಸರಕಾರ ಮಾಡಲು ಮುಂದಾಗಿರುವುದು ನಮ್ಮೆಲ್ಲರಿಗೂ ಸಂತೋಷವನ್ನುಂಟು ಮಾಡಿದೆ ಎಂದು ಸಂಗಮೇಶ ಬಬಲೇಶ್ವರ ಹೇಳಿದ್ದಾರೆ.

Leave a Reply

ಹೊಸ ಪೋಸ್ಟ್‌