ವಿಜಯಪುರ: ಬಸವನಾಡಿನ ಯುವಕ ಸುದರ್ಶನ ಯಡಹಳ್ಳಿ ಎನ್ಇಟಿ ಪಾಸಾಗುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ಡಿಸೆಂಬರ್ 2023ರಲ್ಲಿ ನಡೆಸಿದ ಜೆ ಆರ್ ಎಫ್- ಮತ್ತು ಅಸಿಸ್ಟಂಟ ಪ್ರೊಫೆಸರ್ ಪರೀಕ್ಷೆಯಲ್ಲಿ ಸುದರ್ಶನ ಯಡಹಳ್ಳಿ ಅವರು ಅಸಿಸ್ಟಂಟ್ ಪ್ರೊಫೆಸರ್ ಪರೀಕ್ಷೆ ಪಾಸಾಗಿದ್ದಾರೆ. ಯುಜಿಸಿ ಪ್ರತಿ ವರ್ಷ ಎರಡು ಬಾರಿ ಆನ್ ಲೈನ್ ಮೂಲಕ ನೆಟ್ ಮತ್ತು ಜೆ ಆರ್ ಎಫ್ ಪರೀಕ್ಷೆ ನಡೆಸುತ್ತದೆ. ಕಳೆದ ಡಿಸೆಂಬರ್ ನಲ್ಲಿ ನಡೆಸಿದ ಈ ಪರೀಕ್ಷೆಯಲ್ಲಿ ಒಟ್ಟು 9.50 ಲಕ್ಷ ಅಭ್ಯರ್ಥಿಗಳು 84 ನಾನಾ ವಿಷಯಗಳಲ್ಲಿ ಪರೀಕ್ಷೆ ಬರೆದಿದ್ದರು. ಈ ಪೈಕಿ ಮನೋವಿಜ್ಞಾನ ವಿಷಯದಲ್ಲಿ ಒಟ್ಟು 18000 ಸ್ನಾತಕೋತ್ತರ ಪದವೀಧರರು ಅರ್ಹತಾ ಪರೀಕ್ಷೆಯನ್ನು ಬರೆದಿದ್ದರು. ಇವರಲ್ಲಿ ಕೇವಲ 1300 ಅಭ್ಯರ್ಥಿಗಳು ಸಹಾಯಕ ಪ್ರಾಧ್ಯಾಪಕ ಮತ್ತು ಕಿರಿಯ ಸಂಶೋಧನಾ ಫೆಲೋಶಿಪ್ಗಾಗಿ ಆಯ್ಕೆಯಾಗಿದ್ದಾರೆ. ಒಟ್ಟು 650 ಅಭ್ಯರ್ಥಿಗಳು ಸಾಮಾನ್ಯ ವರ್ಗದಲ್ಲಿ ಮನೋವಿಜ್ಞಾನ ವಿಷಯದಲ್ಲಿ ಅರ್ಹತೆಯನ್ನು ಪಡೆದಿದ್ದಾರೆ.
ಸುದರ್ಶನ ಯಡಹಳ್ಳಿ ಅವರು ವಿಜಯಪುರ ನಗರದ ಸಿಕ್ಯಾಬ್ ಸಂಸ್ಥೆಯ ಎ. ಅರ್. ಎಸ್. ಇನಾಮದಾರ ಮಹಿಳಾ ಮಹಾವಿದ್ಯಾಲಯದ ಮನೋವಿಜ್ಞಾನ ಪ್ರಾಧ್ಯಾಪಕ ಡಾ. ಎಚ್ ಕೆ ಯಡಹಳ್ಳಿ ಮತ್ತು ಪಾರ್ವತಿ ದಂಪತಿಯ ಪುತ್ರರಾಗಿದ್ದಾರೆ. ಒಂದರಿಂದ 10ನೇ ತರಗತಿವರೆಗೆ ನಗರದ ಹೇಮರೆಡ್ಡಿ ಮಲ್ಲಮ್ಮ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿರುವ ಅವರು, ಬಾಗಲಕೋಟೆಯ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಪಿಯುಸಿ ಹಾಗೂ ಬಿಎ ಪದವಿ ಪೂರ್ಣಗೊಳಿಸಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ಪಡೆದಿರುವ ಅವರು, ಈಗ ಧಾರವಾಡ ಕರ್ನಾಟಕ ವಿವಿಯ ಮನೋವಿಜ್ಞಾನ ವಿಭಾಗದಲ್ಲಿ ಪಿ.ಎಚ್.ಡಿ ಸಂಶೋಧನೆಯಲ್ಲಿ ತೊಡಗಿದ್ದಾರೆ.
ಬಾಲ್ಯದಿಂದಲೂ ಪ್ರತಿಭಾವಂತ ವಿದ್ಯಾರ್ಥಿಯಾಗಿರುವ ಸುದರ್ಶನ ಯಡಹಳ್ಳಿ ಅವರು ಹೈಸ್ಕೂಲ್ ಓದುವಾಗ ಪತ್ರಿಕೆಗಳಿಗೆ ಲೇಖನ ಬರೆಯುವ ಮೂಲಕ ಸಾರ್ವಜನಿಕರ, ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಗಮನ ಸೆಳೆಯುತ್ತಿದ್ದರು. ಈಗ ಎನ್.ಇ.ಟಿ ಪಾಸಾಗುವ ಮೂಲಕ ಪೋಷಕರು ಮತ್ತು ಬಸವನಾಡು ವಿಜಯಪುರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.