ವಿಜಯಪುರ: ಬಸವಾದಿ ಶರಣರ ಸಮಕಾಲಿನ ಶರಣರಾದ ಅಂಬಿಗರ ಚೌಡಯ್ಯನವರು ಅಂದಿನ ಸಮಾಜದಲ್ಲಿನ ಮೌಢ್ಯಗಳ ನಿರ್ಮೂಲನೆಗಾಗಿ ಶ್ರಮಿಸಿದವರು. ಮಹಿಳೆಯರು ಮತ್ತು ಪುರುಷ ಸಮಾನರೆಂದು ಪ್ರತಿಪಾದಿಸಿದ ತತ್ವನಿಷ್ಟ ಶ್ರೇಷ್ಟ ತತ್ವಜ್ಞಾನಿ, ವಚನಕಾರರಾಗಿದ್ದರು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಹೇಳಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಿಜ ಶರಣ ಅಂಬಿಗರ ಚೌಡಯ್ಯ ಅವರ ಜಯಂತಿ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕಾಯಕ ದಾಸೋಹ,ಶಿವಯೋಗ ಸಾಧನೆಯ ಮೂಲಕ ವಚನಗಳನ್ನು ಕಟ್ಟಿ ಕೊಟ್ಟಿದ್ದಾರೆ. ಅವರ 274 ವಚನಗಳು ದೊರಕಿದ್ದು, ಅವರ ವಚನಗಳಲ್ಲಿ ವೈಚಾರಿಕತೆ, ಇಷ್ಟಲಿಂಗ, ನಿಷ್ಟೆ, ಕಾಲಜ್ಞಾನ, ಸಂಕೀರ್ಣ ವಚನಗಳು, ಜೀವನ್ಮುಕ್ತಿ ಸ್ಥಿತಿ, ಆಧ್ಯಾತ್ಮಕತೆ ವಿಡಂಬನೆ, ಸೃಷ್ಟಿಯ ಕ್ರಮ ಸೇರಿದಂತೆ ಹಲ ವಿಶೇಷತೆಗಳನ್ನು ಅವರ ವಚನಗಳಲ್ಲಿ ಕಾಣಬಹುದಾಗಿದೆ. ಅವರ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ ಅವರ ಕುರಿತು ಉಪನ್ಯಾಸ ನೀಡಿದ ಉಪನ್ಯಾಸಕರಾದ ಮಹಾದೇವ ರೆಬಿನಾಳ ಮಾತನಾಡಿ, ಅಂಬಿಗರ ಚೌಡಯ್ಯ ಅವರು ಅನುಭವ ಮಂಟಪದಲ್ಲಿ ಬಸವಣ್ಣನವರ ಅನುಯಾಯಿಗಳಾಗಿ ನಿಜ ಶರಣರಾಗಿದ್ದರು. ಅಂಬಿಗರ ಚೌಡಯ್ಯನವರು ತುಂಬಾ ಸ್ವಾಭಿಮಾನಿ, ಜೊತೆಗೆ ಸ್ವಾವಲಂಬಿಯಾಗಿ ಸ್ವತಂತ್ರ ನಿಷ್ಟೆಯ ಶರಣರಾಗಿದ್ದರು. ಅವರು ರಚಿಸಿದ ವಚನಗಳು ಸಾಮಾಜಿಕ ಕಾಳಜಿ ಹೊಂದಿದವುಗಳಾಗಿವೆ. ಅವರ ಎಲ್ಲ ವಚನಗಳು ತತ್ವ ಸಿದ್ಧಾಂತಗಳು ಇಂದಿಗೂ ನಮಗೆ ದಾರಿ ದೀಪವಾಗಿವೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ತಹಶೀಲ್ದಾರರಾದ ಶ್ರೀಮತಿ ಕವಿತಾ, ಜಿಲ್ಲಾ ಪಂಚಾಯತ ಉಪ ಯೋಜನಾ ವಿಭಾಗದ ಅಧಿಕಾರಿ ಎ.ಬಿ ಅಲ್ಲಾಪುರ, ಭರತ ಕೋಳಿ, ಪಾಯಣ್ಣ ತಳವಾರ, ವಿದ್ಯಾವತಿ ಅಂಕಲಗಿ, ಶಿವಾನಂದ ಅಂಬಿಗೇರ, ಅಂಬಣ್ಣ ನಾಟೀಕಾರ, ಡಾ.ಪಿ.ಕೆ ಚೌಧರಿ, ಎಸ್.ಎಮ್ ಕಣಬೂರ, ಪ್ರವೀಣ ಗಣಿ, ಚಂದ್ರಕಾAತ ಕೋಳಿ, ವಸಂತ ನಾಯಕ, ಗಂಗುಬಾಯಿ ಧುಮಾಳೆ, ದಾನಮ್ಮ ಕೋಳಿ, ಮಹಾದೇವ ಗದ್ಯಾಳ, ಪ್ರಕಾಶ ವಾಲಿಕಾರ, ಭೀಮಪ್ಪ ವಾಲಿಕಾರ, ಸಂತೋಷ ತಟಗಾರ, ಗುರುನಾಥ ವಾಲಿಕಾರ, ಬಸವರಾಜ ಆಹೇರಿ, ಶರಣಪ್ಪ ಝಳಕಿ,ಭೀಮರಾಯ ಜಿಗಜಿಣಗಿ ಹಾಗೂ ಇತರರು ಉಪಸ್ಥಿತರಿದ್ದರು.
ಕಲಾವಿದರಾದ ಶ್ರೀಮಂತ ಮಾದರ ಹಾಗೂ ತಂಡದವರು ನಿಜ ಶರಣ ಅಂಬಿಗರ ಚೌಡಯ್ಯನವರ ಭಕ್ತಿಗೀತೆ ಹಾಗೂ ನಾಡ ಗೀತೆ ನಡೆಸಿಕೊಟ್ಟರು.