ವಿಜಯಪುರ: ಬಹು ನಿರೀಕ್ಷಿತ ಅಯೋಧ್ಯೆ ರಾಮ ಮಂದಿರದಲ್ಲಿ ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದ್ದು, ಬಸವನಾಡು ವಿಜಯಪುರ ಜಿಲ್ಲೆಯಲ್ಲಿಯೂ ಸಂಭ್ರಮದ ವಾತಾವರಣ ಮನೆ ಮಾಡಿದೆ.
ಜನೇವರಿ 22 ರಂದು ಸೋಮವಾರ ಗುಮ್ಮಟ ನಗರಿ ವಿಜಯಪುರದಲ್ಲಿ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರಗಳು ಕಣ್ಮನ ಸೆಳೆಯುತ್ತಿವೆ. ನಗರ ಕಲರ್‌ಪುಲ್ ಲೈಟಿಂಗ್ ಮೂಲಕ ಜಗಮಗಿಸುತ್ತಿದೆ.
ನಗರದ ಶಿವಾಜಿ ವೃತ್ತದಲ್ಲಿ ಕೇಸರಿ ಬಾವುಟಗಳನ್ನು ಕಟ್ಟಿ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಗಾಂಧಿಚೌಕ್, ಬಸವೇಶ್ವರ ಚೌಕ್ ಮತ್ತು ಅಂಬೇಡ್ಕರ್ ಚೌಕ್ ಗಳಲ್ಲಿಯೂ ವಿದ್ಯುತ್ ದೀಪಾಲಂಕಾರ ಬಣ್ಣದ ವಾತಾವರಣ ಸೃಷ್ಠಿ ಮಾಡಿದ್ದು, ಎಲ್ಲ ಕಡೆ ಕೇಸರಿ ಬಾವುಟಗಳು ರಾರಾಜಿಸುತ್ತಿವೆ.
ಸರಾಪ್ ಬಜಾರ್ ಸಂಪೂರಣ ವಿದ್ಯುತ್ ದೀಪಗಳಿಂದ ಮತ್ತು ಬಾವುಟಗಳಿಂದ ಅಲಂಕಾರಗೊಂಡಿದೆ. ಶ್ರೀರಾಮನ ಭಾವಚಿತ್ರದ ಜೊತೆಗೆ ಕಲರ್‌ಪುಲ್ ಲೈಟಿಂಗ್ ಅಳವಡಿಕೆ ಮಾಡಲಾಗಿದ್ದು, ರಾಮ ಮಂದಿರ ರಸ್ತೆ ತುಂಬವೂ ಕೇಸರಿ ಧ್ವಜಗಳು, ಬ್ಯಾನರ್ ಹಾಗೂ ಲೈಟಿಂಗ್ಸ್ ಮನಸೂರೆಗೊಳ್ಳುತ್ತಿವೆ. ರಾಮ ಮಂದಿರದಲ್ಲಿಯೂ ಸಡಗರ, ಸಂಭ್ರಮ ಮನೆ ಮಾಡಿದೆ.
ರಾಮ ಮಂದಿರಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಭಕ್ತರು ಈ ದೇವಸ್ಥಾನದ ಬಳಿ ದೀಪ ಹಚ್ಚಿ ಸಂಭ್ರಮ ಪಡುತ್ತಿದ್ದಾರೆ. ರಾಮ ಮಂದಿರ ಲೋಕಾರ್ಪಣೆಯಾಗಲಿರುವ ಸೋಮವಾರ ಕೂಡ ನಗರಾದ್ಯಂತ ಮತ್ತು ಜಿಲ್ಲಾದ್ಯಂತ ಹತ್ತಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.
ಬಸವ ನಾಡಿನ ಜನತೆ ರಾಮ ಮಂದಿರ ಉದ್ಘಾಟನೆಗೆ ಅಣಿಯಾಗುತ್ತಿದ್ದು, ಎಲ್ಲ ಕಡೆ ಹಬ್ಬದ ವಾತಾವರಣ ಸೃಷ್ಠಿಯಾಗಿದೆ.