ಡಾ. ಬಿದರಿಯವರ ಅಶ್ವಿನಿ ಆಸ್ಪತ್ರೆ ವೈದ್ಯರ ಸಾಧನೆ- ಒಂದೇ ದಿನ ಎಂಟು ಮಕ್ಕಳು ಸೇರಿ 13 ಜನರಿಗೆ ಹೃದಯ ಸಂಬಂಧಿ ಯಶಸ್ವಿ ಶಸ್ತ್ರಚಿಕಿತ್ಸೆ

ವಿಜಯಪುರ: ನಗರದ ಡಾ. ಬಿದರಿಯವರ ಅಶ್ವಿನಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ವೈದ್ಯರು ಬೆಂಗಳೂರಿನ ವೈದ್ಯರ ಜೊತೆ ಸೇರಿ ಒಂದೇ ದಿನ ಎಂಟು ಮಕ್ಕಳು ಸೇರಿ ಒಟ್ಟು 13 ಜನರಿಗೆ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆ ನೀಡಿ ಗಮನ ಸೆಳೆದಿದ್ದಾರೆ.

ಬೆಂಗಳೂರಿನ ನಾರಾಯಣ ಹೃದಯಾಲಯದ ಖ್ಯಾತ ಹೃದಯರೋಗ ತಜ್ಞ ಡಾ. ಪಿ. ವಿ. ಸುರೇಶ, ಅಶ್ವಿನಿ ಆಸ್ಪತ್ರೆಯ ಡಾ. ಗೌತಮ ವಗ್ಗರ, ಡಾ. ಗೋಪಾಲಕೃಷ್ಣ ದೇಶಪಾಂಡೆ, ಡಾ. ಬಸವರಾಜ ಉಟಗಿ ಸೇರಿಕೊಂಡು ಎಂಟು ಮಕ್ಕಳ ಡಿವೈಸ್ ಕ್ಲೋಸರ್ ಅಂದರೆ ಹೃದಯ ರಂಧ್ರ ಮುಚ್ಚುವ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿದ್ದಾರೆ.  ಇದೇ ವೇಳೆ ಬೆಂಗಳೂರಿನ ಖ್ಯಾತ ಫೋರ್ಟಿಸ್ ಆಸ್ಪತ್ರೆಯ ಕಾರ್ಡಿಯೋಥೊರಿಯಾಸಿಕ್ ಸರ್ಜನ್ ಡಾ. ಸುದರ್ಶನ ಜಿ. ಟಿ ಹಾಗೂ ತಂಡದವರು ಇಬ್ಬರು ಹಿರಿಯರ ಮತ್ತು 3 ಮಕ್ಕಳ ತೆರೆದ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ.  ಶಸ್ತ್ರಚಿಕಿತ್ಸೆಗೆ ಒಳಗಾದ ಎಲ್ಲ ರೋಗಿಗಳು ಆರೋಗ್ಯದಿಂದಿದ್ದು ವಾರಾಂತ್ಯದಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ.  ಈ ಎಲ್ಲಾ ಶಸ್ತ್ರಚಿಕಿತ್ಸೆಗಳನ್ನು ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಉಚಿತವಾಗಿ ಮಾಡಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾರ್ಡಿಯೋಥೊರಿಯಾಸಿಕ್ ಸರ್ಜನ್ ಡಾ. ಸುದರ್ಶನ ಜಿ. ಟಿ., ಡಾ. ಬಿದರಿಯವರ ಅಶ್ವಿನಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಕ್ಯಾಥ್‌ಲ್ಯಾಬ್ ಹಾಗೂ ಮಾರ್ಡನ್ ಆಪರೇಷನ್ ಥಿಯೇಟರ್‌ನಲ್ಲಿ ಮಕ್ಕಳು ಹಾಗೂ ದೊಡ್ಡವರ ಹೃದಯರೋಗದ ಸಮಸ್ಯೆಗಳಿಗೆ ಚಿಕಿತ್ಸೆ ಹಾಗೂ ಆ್ಯಂಜಿಯೋಗ್ರಾಫಿ, ಆ್ಯಂಜಿಯೋಪ್ಲಾಸ್ಟಿ, ಡಿವೈಸ್ ಕ್ಲೋಸರ್ ಹಾಗೂ ಓಪನ್ ಹಾರ್ಟ್ ಸರ್ಜರಿಗಳನ್ನು ಖಾಸಗಿ ಹಾಗೂ ಸರಕಾರಿ ಆರೋಗ್ಯ ಯೋಜನೆಗಳಡಿಯಲ್ಲಿ ಮಾಡಲಾಗುತ್ತಿದೆ.  ಉತ್ತರ ಕರ್ನಾಟಕದ ಹೃದಯರೋಗಿಗಳು ಇವುಗಳ ಪ್ರಯೋಜನ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

ಡಾ. ಬಿದರಿಯವರ ಅಶ್ವಿನಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಬೆಂಗಳೂರಿನ ನಾರಾಯಣ ಹೃದಯಾಲಯದ ಖ್ಯಾತ ಹೃದಯರೋಗ ತಜ್ಞರಾದ ಡಾ. ಪಿ. ವಿ. ಸುರೇಶ ಇವರು ಕಳೆದ 23 ವರ್ಷಗಳಿಂದ ಪ್ರತಿ ತಿಂಗಳು ತಪ್ಪದೆ ಬರುತ್ತಿದ್ದಾರೆ.  ಹೃದಯದ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳು ಹಾಗೂ ದೊಡ್ಡವರು ದೂರವಾಣಿ ಸಂಖ್ಯೆ: 08352-261128 ಗೆ ಕರೆ ಮಾಡಬಹುದಾಗಿದೆ ಎಂದು ಡಾ. ಬಿದರಿಯವರ ಅಶ್ವಿನಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಆಡಳಿತಾಧಿಕಾರಿ ಹಿರೇಮಠ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌