ವಿಜಯಪುರ: ನಿಡಗುಂದಿ ತಾಲೂಕಿನ ಆಲಮಟ್ಟಿಯ ಜವಾಹರ ನವೋದಯ ವಿದ್ಯಾಲಯಕ್ಕೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ಕುರಿತು ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಿದರು.
ವಿದ್ಯಾಲಯದ ಸಲಹಾ ಸಮಿತಿ ಸಭೆ ನಡೆಸಿದ ಅವರು, ವಿದ್ಯಾಲಯದ ಬೋಧನಾ ಗುಣಮಟ್ಟವನ್ನು ಹೆಚ್ಚಿಸಿ ಫಲಿತಾಂಶ ಹೆಚ್ಚಳಕ್ಕೆ ಕ್ರಮ ವಹಿಸಬೇಕು. ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ಬೆಳವಣಿಗೆ ದೃಷ್ಟಿಯಿಂದ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಿ, ಮಕ್ಕಳ ಕೌಶಲ್ಯತೆಯನ್ನು ಹೆಚ್ಚಿಸಲು ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಸಾಮಾಜಿಕ ಸೇವೆಯಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಲು ಎನ್.ಸಿ.ಸಿ. ಹಾಗೂ ಎನ್‍ಎಸ್‍ಎಸ್ ಚಟುವಟಿಕೆಗಳ ಮೂಲಕ ಪ್ರೇರೆಪಿಸಬೇಕು. ವಿದ್ಯಾಲಯಕ್ಕೆ ಅಗತ್ಯವಿರುವ ಜನರೇಟರ್, ಸೋಲಾರ ವ್ಯವಸ್ಥೆ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದ ಅವರು, ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಗಾರ್ಡನ್ ಹಾಗೂ ಆಟದ ಮೈದಾನ ಅಭಿವೃದ್ದಿಪಡಿಸುವಂತೆ ಅವರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ವಿದ್ಯಾಲಯದ ಪ್ರಾಂಶುಪಾಲೆ ವಿ. ಶಾಂತಿ ಸೇರಿದಂತೆ ಇತರ ಅಧಿಕಾರಿಗಳು ಬೋಧಕ ಹಾಗೂ ಬೋಧಕರ ಹೊರತಾದ ಸಿಬ್ಬಂದಿ ಉಪಸ್ಥಿತರಿದ್ದರು.