ದೇಶದ ಅಭ್ಯುದಯಕ್ಕಾಗಿ ಕಡ್ಡಾಯವಾಗಿ ಮತದಾನ ಮಾಡಿ- ಸಂತೋಶ ಕುಂದರ ಕರೆ

ವಿಜಯಪುರ: ದೇಶದ ಅಭ್ಯುದಯಕ್ಕೆ ಎಲ್ಲ ಅರ್ಹ ಮತದಾರರು ಮತದಾನದ ಹಕ್ಕನ್ನು ಚಲಾಯಿಸಬೇಕು. ಸಂವಿಧಾನ ಕಲ್ಪಿಸಿದ ಮತದಾನದಿಂದ ಯಾರೂ ವಂಚಿತರಾಗದೇ ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸುವಂತೆ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ ಕುಂದರ ಕರೆ ನೀಡಿದ್ದಾರೆ.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಅಭಿವೃದ್ದಿಯಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.  18 ವರ್ಷ ಪೂರೈಸಿದ ಮತದಾರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿದ ಪ್ರತಿಯೊಬ್ಬರು ಮತದಾನದಿಂದ ದೂರ ಉಳಿಯದೇ ಮತ ಚಲಾಯಿಸಬೇಕು. ನಗರ ಪ್ರದೇಶದ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚೆಚ್ಚು ಭಾಗವಹಿಸಬೇಕು. ಮತದಾರರಿಗೆ ಅರಿವು ಮೂಡಿಸುವ ಉದ್ದೇಶದಿಂದ ಮತದಾರರ ದಿನಾಚರಣೆ ಕಾರ್ಯಕ್ರಮ ಆಚರಿಸಲಾಗುತ್ತಿದ್ದು, ಸ್ವೀಪ್ ಸಮಿತಿ ವತಿಯಿಂದ ಮತದಾನದ ಮಹತ್ವ ಸಾರುವ ಹಾಗೂ ಮಹತ್ವ ತಿಳಿಸುವಂತಹ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಅರಿವು ಮೂಡಿಸಲಾಗುತ್ತಿದೆ ಎಂದು ಅವರು ಹೇಳಿದರು.

ವಿಜಯಪುರದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಡಿಸಿ ಟಿ. ಭೂಬಾಲನ ಪ್ರತಿಜ್ಞಾ ವಿಧಿ ಬೋಧಿಸಿದರು

ಜಿಲ್ಲಾಧಿಕಾರಿ ಟಿ. ಭೂಬಾಲನ್ ಮಾತನಾಡಿ, ಮತದಾರ ಪ್ರತಿಜ್ಞಾವಿಧಿಯನ್ನು ಬೋಧಿಸಿ ಮಾತನಾಡಿ, 2011ರಿಂದ ದೇಶಾದ್ಯಂತ ರಾಷ್ಟಿçÃಯ ಮತದಾನ ದಿನವನ್ನು ಆಚರಿಸಲಾಗುತ್ತಿದೆ. ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ ಎಂಬುದು ಧ್ಯೇಯವಾಕ್ಯದೊಂದಿಗೆ ಮತದಾರ ದಿನಾಚರಣೆ ಆಚರಿಸಲಾಗುತ್ತಿದೆ. ಮತದಾನ ಮಹತ್ವನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಹಲವು ಕಾರ್ಯಚಟುವಟಿಕೆಗಳ ಮೂಲಕ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. ವಿಶೇಷ ಸಂಕ್ಷಿಪ್ತ ಮತದಾರ ಪಟ್ಟಿ ಪರಿಷ್ಕರಣೆ 2024ರ ಅಂತಿಮ ಮತದಾರ ಪಟ್ಟಿಯಂತೆ ಜಿಲ್ಲೆಯಲ್ಲಿ 1919048 ಮತದಾರರಿದ್ದು, ತಮ್ಮ ಇದರಲ್ಲಿ 976073 ಪುರುಷ, 942757 ಮಹಿಳಾ ಮತದಾರರಿದ್ದಾರೆ ಎಂದು ಹೇಳಿದರು.

ಪ್ರಜಾಪ್ರಭುತ್ವದ ಹಬ್ಬದಲ್ಲಿ ಕುಟುಂಬ ಸಮೇತರಾಗಿ ಪ್ರತಿಯೊಬ್ಬರು ಭಾಗವಹಿಸಬೇಕು. ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ತಮ್ಮ ಸಂವಿಧಾನದ ಹಕ್ಕನ್ನು ಚಲಾಯಿಸಬೇಕು. ನಮ್ಮ ಜಿಲ್ಲೆಯಲ್ಲಿ 40 ಸಾವಿರ ಹಿರಿಯ ನಾಗರಿಕ ಮತದಾರರಿದ್ದಾರೆ. 20 ಸಾವಿರ ವಿಶೇಷ ಚೇತನ ಮತದಾರರಿದ್ದಾರೆ. ಯುವ ಅರ್ಹ ಮತದಾರರು ಮತದಾನದಿಂದ ವಂಚಿತರಾಗದೇ ಕಡ್ಡಾಯವಾಗಿ ತಮ್ಮ ಮತ ಚಲಾಯಿಸಬೇಕು.  ಈ ವರ್ಷ 37 ಸಾವಿರ ಯುವ ಮತದಾರರು ಜಿಲ್ಲೆಯ ಮತದಾನ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸುವ ಮೂಲಕ ಸೇರ್ಪಡೆಯಾಗಿದ್ದಾರೆ.  ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದಲ್ಲಿ ಟೋಲ್‌ಫ್ರೀ ಸಂಖ್ಯೆ 1950 ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.

ಎಸ್ಪಿ ರಿಷಿಕೇಶ ಸೋನಾವಣೆ ಮಾತನಾಡಿ, ನಮಗೆ ದೊರಕಿದ ಮತದಾನದ ಕರ್ತವ್ಯವನ್ನು ಮತದಾನ ಮಾಡುವ ಮೂಲಕ ನಿರ್ವಹಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಥಮವಾಗಿ ಮತದಾನದ ಹಕ್ಕನ್ನು ಪಡೆದ ಯುವ ಮತದಾರರಿಗೆ ಮತದಾರರ ಗುರುತಿನ ಚೀಟಿ ವಿತರಿಸಲಾಯಿತು. ಚುನಾವಣಾ ಪ್ರಕ್ರಿಯೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ವಿವಿಧ ಅಧಿಕಾರಿಗಳಿಗೆ ಸನ್ಮಾನಿಸಲಾಯಿತು. ಜಿಲ್ಲಾ ಮಟ್ಟದ ನಾನಾ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾದ ಪ್ರೌಢಶಾಲೆ, ಪದವಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ರಾಷ್ಟ್ರೀಯ ಮತದಾರ ದಿನಾಚರಣೆ ಕಾರ್ಯಕ್ರಮದ ಸಂಪೂರ್ಣ ವಿವರನ್ನು ವಿಶೇಷಚೇತನರಿಗೆ ಸಂಜ್ಞೆ ಭಾಷೆಯ ಮೂಲಕ ರಾಚಯ ಮಠಪತಿ ತಿಳಿಸಿಕೊಟ್ಟರು. ಎಂ.ಬಿ.ರಜಪೂತ ವಿಶೇಷ ಉಪನ್ಯಾಸ ನೀಡಿದರು.

ಪ್ರೊಬೆಷನರಿ ಐಪಿಎಸ್ ಅಧಿಕಾರಿ ಶಾಲು, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ವಿಜಯಪುರ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಮಹಾನಗರ ಪಾಲಿಕೆ ಆಯುಕ್ತ ಬದ್ರೂದ್ದಿನ ಸೌದಾಗರ ಸೇರಿದಂತೆ ಜಿಲ್ಲೆಯ ನಾನಾ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌