ವಿಜಯಪುರ: ಗಣರಾಜ್ಯೋತ್ಸವ ಧ್ವಜಾರೋಹಣ ಸಂದರ್ಭದಲ್ಲಿ ಅಚಾನಕ್ಕಾಗಿ ಹಾರಿದ ಗುಂಡು ಗ್ರಾ. ಪಂ. ಅಧ್ಯಕ್ಷೆಯ ಕಾಲಿಗೆ ತಾಗಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇರೂಗಿ ಗ್ರಾಮದಲ್ಲಿ ನಡೆದಿದೆ.
75ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೋಮವ್ವ ಹೊಸಮನಿ ಧ್ವಜಾರೋಹಣ ಮಾಡಿ ನಿಂತಿದ್ದರು. ಆಗ ಕಾಲಿಗೆ ಏಕಾಏಗ ಏನೋ ಬಡಿದಂತಾಗಿ ಕೆಳಗೆ ಕುಳಿತಿದ್ದಾರೆ. ನಂತರ ಪರಿಶೀಲಿಸಿದಾಗ ಗುಂಡು ತಗುಲಿರುವುದು ಪತ್ತೆಯಾಗಿದೆ.
ಇದೀಗ ಗ್ರಾ. ಪಂ. ಅಧ್ಯಕ್ಷೆ ಸೋಮವ್ವ ಹೊಸಮನಿ ಅವರನ್ನು ವಿಜಯಪುರದ ಖಾಸಗಿ ವೇದಾಂತ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ಘಟನೆಯ ಕುರಿತು ಮಾಹಿತಿ ನೀಡಿರುವ ಹಿರೇರೂಗಿ ಗ್ರಾ. ಪಂ. ಅಧ್ಯಕ್ಷೆ ಸೋಮವ್ವ ಹೊಸಮನಿ, ಬೆಳಿಗ್ಗೆ ನಾನು ಧ್ವಜಾರೋಹಣ ಮಾಡುವಾಗ ಕಾಲಿಗೆ ಏನೋ ಬಡಿದಂತಾಯಿತು. ಕೂಡಲೇ ಕೆಳಗೆ ಕುಳಿತುಕೊಂಡೆ. ಏಕಾಏಕಿ ಆದ ಈ ಘಟನೆಯಿಂದ ಗಾಬರಿಯಾದೆ. ನಂತರ ಇದು ಗುಂಡು ತಗುಲಿದೆ ಎಂದು ಖಚಿತವಾಯ್ತು ಎಂದು ತಿಳಿಸಿದ್ದಾರೆ.
ಅಚಾನಕ್ಕಾಗಿ ಈ ಘಟನೆ ನಡೆದಿದೆ. ಗುಂಡು ಹಾರಿಸಿರುವ 33 ವರ್ಷದ ಯುವಕ ನನ್ನ ಮಗನಿದ್ದಂತೆ. ನಮ್ಮ ಮತ್ತು ಅವರ ಮಧ್ಯೆ ಯಾವುದೇ ದ್ವೇಷವೂ ಇಲ್ಲ. ಊರಿನಲ್ಲಿ ನಾವೆಲ್ಲರೂ ಒಂದೇ ತಾಯಿಯ ಮಕ್ಕಳಿದ್ದಂತೆ ಬದುಕುತ್ತಿದ್ದೇವೆ. ಇದನ್ನು ದೊಡ್ಡದಾಗಿ ಮಾಡುವ ಅಗತ್ಯವೂ ಇಲ್ಲ. ಕಾಲಿಗೆ ಗಾಯವಾಗಿದೆ. ಗುಂಡು ತಗುಲಿ ಹೋರಕ್ಕೆ ಹೋಗಿದೆ. ಅದಕ್ಕೆ ಡ್ರೆಸ್ಗಿಂಗ್ ಮಾಡಿದ್ದಾರೆ. ಯಾವುದೇ ಶಸ್ತ್ರಚಿಕಿತ್ಸೆ ನಡೆಸಿಲ್ಲ. ಪ್ರತಿವರ್ಷ ಈ ರೀತಿ ಗುಂಡು ಹಾರಿಸುತ್ತಾನೆ ಎಂದು ಅವರು ತಿಳಿಸಿದ್ದಾರೆ.
ಗ್ರಾ. ಪಂ. ಅಧ್ಯಕ್ಷೆಯ ಪುತ್ರ ಶಿವಾನಂದ ಹೊಸಮನಿ ಮಾತನಾಡಿ ಧ್ವಜಾರೋಹಣ ಸಂದರ್ಭದಲ್ಲಿ ಗಾಳಿಯಲ್ಲಿ ಗುಂಡು ಹಾರಿಸುವುದು ನಮ್ಮ ಕಡೆ ಪದ್ಧತಿಯಿದೆ. ಬೆಳಿಗ್ಗೆ 7.30ರ ಸುಮಾರಿಗೆ ಧ್ವಜಾರೋಹಣ ಸಂದರ್ಭದಲ್ಲಿ ಮೊದಲಿಗೆ ಗಾಳಿಯಲ್ಲಿ ಒಂದು ಗುಂಡು ಹಾರಿಸಿದ್ದಾರೆ. ನಂತರ ಬಂದೂಕನ್ನು ಕೆಳಕ್ಕೆ ಇಳಿಸುವಾಗ ತಪ್ಪಾಗಿ ಎರಡನೇ ಗುಂಡು ಹಾರಿದೆ. ಮೊಣಕಾಲ ಕೆಳಗೆ ಗುಂಡು ಹೊಕ್ಕಿತ್ತು. ಈಗ ಅದನ್ನು ಹೊರಗೆ ತೆಗೆಯಲಾಗಿದೆ. ವೈದ್ಯರು ಈಗ ಯಾವುದೇ ಅಪಾಯವಿಲ್ಲ ಎಂದು ಹೇಳಿದ್ದಾರೆ.
ಘಟನೆಯ ಹಿನ್ನೆಲೆ
ಹಿರೇರೋಗಿ ಗ್ರಾಮದಲ್ಲಿ ಬೆಳಿಗ್ಗೆ ಧ್ವಜಾರೋಹಣ ನಡೆಸುವಾಗ ಕನ್ನಡ ಪರ ಸಂಘಟನೆಯ ಮುಖಂಡ ಮಲ್ಲು ಗಿನ್ನಿ ಎಂಬಾತ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ನಂತರ ಬಂದೂಕನ್ನು ಕೆಳಗೆ ಇಳಿಸುವಾಗ ಮತ್ತೋಂದು ಸುತ್ತು ಗಂಡು ಹಾರಿ ಸೋಮವ್ವ ಹೊಸಮನಿ ಅವರಿಗೆ ಗಾಯವಾಗಿದೆ. ಈ ಏಕಾಏಕಿ ನಡೆದ ಈ ಘಟನೆಯಿಂದಾಗಿ ಗೊಂದಲದ ವಾತಾವರಣ ಉಂಟಾಗಿದೆ. ಆಗ ಸ್ಥಳದಲ್ಲಿದ್ದ ಇತರರು ಗ್ರಾ. ಪಂ. ಅಧ್ಯಕ್ಷೆ ಸೋಮವ್ವ ಹೊಸಮನಿ ಅವರನ್ನು ಅಲ್ಲಿಂದ ಕೂಡಲೇ ಚಿಕಿತ್ಸೆಗಾಗಿ ವಿಜಯಪುರದ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ. ಅಷ್ಟೇ ಅಲ್ಲ, ಗುಂಡು ಹಾರಿಸಿದ ಮಲ್ಲು ಗಿನ್ನಿ ಎಂಬ ಯುವಕನೂ ಕೂಡ ಇವರ ಜೊತೆಗೆ ಆಸ್ಪತ್ರೆಗೆ ಬಂದಿದ್ದಾನೆ.
ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಯಾವ ಕಾರಣಕ್ಕೆ ಗುಂಡು ಹಾರಿದೆ ಎಂಬುದರ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ತನಿಖೆಯ ಬಳಿಕ ಸ್ಪಷ್ಟ ಮಾಹಿತಿ ಸಿಗಲಿದೆ.