ಪತ್ರಕರ್ತರಿಗೆ ಆರೋಗ್ಯ ಸೇವೆ ಕಲ್ಪಿಸಲು ಬಿಎಲ್ ಡಿ ಇ ಆಸ್ಪತ್ರೆ ಬದ್ಧವಾಗಿದೆ- ಸಚಿವ ಎಂ. ಬಿ. ಪಾಟೀಲ

ವಿಜಯಪುರ: ಸದಾ ಒತ್ತಡದಲ್ಲೇ ಕಾರ್ಯನಿರ್ವಹಿಸುವ ಪತ್ರಕರ್ತರು ಸಮಯಕ್ಕೆ ಸರಿಯಾಗಿ ಆಹಾರ, ನಿದ್ರೆ ಮಾಡಲ್ಲ. ಅಂಥ ಪತ್ರಕರ್ತರಿಗೆ ಆರೋಗ್ಯ ಸೇವೆ ಕಲ್ಪಿಸಲು ಬಿಎಲ್ ಡಿಇ ಆಸ್ಪತ್ರೆ ಬದ್ಧವಾಗಿದೆ ಎಂದು ಬಿಎಲ್ ಡಿ ಸಂಸ್ಥೆಯ ಅಧ್ಯಕ್ಷರೂ‌ ಆಗಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದರು.‌

ನಗರದ ಬಿಎಲ್ ಡಿಇ ಆಸ್ಪತ್ರೆಯ ಟ್ರಾಮಾ ಸೆಂಟರ್ ಸಭಾಂಗಣದಲ್ಲಿ ಸೋಮವಾರ ಬಿಎಲ್ ಡಿಇ ಆಸ್ಪತ್ರೆಯ ಆರೋಗ್ಯ ಭಾಗ್ಯ ಯೋಜನೆಯಡಿ ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಫ್ಯಾಮಿಲಿ ಹೆಲ್ತ್ ಕಾರ್ಡ್ ವಿತರಿಸಿ ಅವರು ಮಾತನಾಡಿದರು.

ಅದೆಷ್ಟೋ ಪತ್ರಕರ್ತರು ವಿಶ್ರಾಂತಿ ತೆಗೆದುಕೊಳ್ಳದೇ, ಸಮಾಜಕ್ಕಾಗಿ ಹಗಲಿರುಳು ಶ್ರಮಿಸುತ್ತಾರೆ. ಅಂಥ ಪತ್ರಕರ್ತರು ಹಾಗೂ ಅವರ ಕುಟುಂಬ ಸದಸ್ಯರ ಆರೋಗ್ಯ ರಕ್ಷಣೆಗೆ ಸೇವಾ ಸೌಲಭ್ಯಗಳನ್ನು ಒದಗಿಸಲು ಬಿಎಲ್ ಡಿಇ ಆಸ್ಪತ್ರೆ ಮುಂದಾಗಿದೆ ಎಂದರು.

ಪತ್ರಕರ್ತರ ಕಷ್ಟದ ಜೀವನ ಕಂಡಿದ್ದೇವೆ. ಅವರ ಆರ್ಥಿಕ ಪರಿಸ್ಥಿತಿಯೂ ಅಷ್ಟಕ್ಕಷ್ಟೇ‌ ಇರುತ್ತದೆ ಎಂಬುದನ್ನು ಮನಗಂಡು ನಾನು ಪತ್ರಿಕಾ ದಿನಾಚರಣೆಯಲ್ಲಿ ಹೆಲ್ತ್ ಕಾರ್ಡ್ ನೀಡುವುದಾಗಿ ಭರವಸೆ ನೀಡಿದ್ದೆ. ಈಗ ಅದು ಸಾಕಾರಗೊಂಡಿದೆ.  ಈ ಕಾರ್ಡ್ ನಡಿ ಪತ್ರಕರ್ತರಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೂ ನಮ್ಮ‌ ಬಿಎಲ್ ಡಿ ಈ ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಕಲ್ಪಿಸಲಾಗುವುದು.  ಪತ್ರಕರ್ತರು ಯಾವುದೇ ಸಂದರ್ಭದಲ್ಲಿ ಅನಾರೋಗ್ಯ ಸಮಸ್ಯೆಗಳಿಗಾಗಿ ಈ ಕಾರ್ಡ್ ಬಳಸಿಕೊಂಡು ಆರೋಗ್ಯ ಸೇವೆ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ಬಿ ಎಲ್ ಡಿ ಇ ಸಂಸ್ಥೆಯ ಸಂಸ್ಥಾಪಕ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿಯವರು ಸಹ ಮಾಧ್ಯಮದಲ್ಲಿದ್ದವರು.  ಇವರೊಂದಿಗೆ ಬಂಥನಾಳ ಶಿವಯೋಗಿಗಳು ಮತ್ತು ತಂದೆಯವರಾದ ಬಿ. ಎಂ. ಪಾಟೀಲರು ಜನರಿಗೆ ಉತ್ತಮ ಶಿಕ್ಷಣ ಹಾಗೂ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಬಿ.ಎಲ್.ಡಿ.ಇ ಈ ಸಂಸ್ಥೆಯಡಿ ಹಂತಹಂತವಾಗಿ ಹಲವಾರು ಶೈಕ್ಷಣಿಕ ಕೇಂದ್ರಗಳನ್ನು ಮೆಡಿಕಲ್ ಕಾಲೇಜು, ಆಸ್ಪತ್ರೆಯನ್ನು ಸ್ಥಾಪಿಸಿ ಜನರಿಗೆ ಅರ್ಪಿಸಿದ್ದು ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ.  ಈ ಮೂವರು ಮಹನೀಯರನ್ನು ಬಿ.ಎಲ್.ಡಿ.ಇ ಸಂಸ್ಥೆ ಎಂದಿಗೂ‌ ಸ್ಮರಿಸುತ್ತದೆ ಎಂದು ಅವರು ಹೇಳಿದರು.

ಇಂಡಿಯಾ ಟುಡೇ ರ್ಯಾಂಕಿಂಗ್‌ನಲ್ಲಿ‌ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ 14ನೇ ಸ್ಥಾನದಲ್ಲಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಶೈಕ್ಷಣಿಕ‌ ಗುಣಮಟ್ಟ ಕಾಯ್ದು ಕೊಂಡಿದ್ದೇವೆ.  ಆಸ್ಪತ್ರೆಯಲ್ಲಿ ಅತ್ಯಾಧುನಿಕ‌ ಸೇವಾ ಸೌಲಭ್ಯಗಳ ಮೂಲಕ ಈಗಾಗಲೇ ಯಶಸ್ವಿಯಾಗಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ಹಾಗೂ ಕಿಡ್ನಿ‌ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಗಿದೆ.  ಈಗಿರುವ 80 ಹಾಸಿಗೆಯ ಆಸ್ಪತ್ರೆಯನ್ನು ಇನ್ನೂ 200 ಬೆಡ್ ಗಳಿಗೆ ಮೇಲ್ದರ್ಜೆಗೇರಿಸಿ 300 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಜೊತೆಗೆ ಕ್ಯಾನ್ಸರ್ ಆಸ್ಪತ್ರೆ ಸಹ ನಿರ್ಮಿಸಲಾಗುತ್ತಿದ್ದು, ಎರಡು ವರ್ಷದಲ್ಲಿ ಪೂರ್ಣಗೊಳಿಸಿ‌ ಜನಾರ್ಪಣೆ ಮಾಡಿಸುವ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಮಾತನಾಡಿ, ಜಿಲ್ಲೆಯ ಪತ್ರಕರ್ತರಿಗೆ ಪಾಲಿಗೆ ಇಂದು ಐತಿಹಾಸಿಕ ದಿನ. ಜಿಲ್ಲೆಯ ಪ್ರತಿಷ್ಠಿತ ಬಿಎಲ್ ಡಿ ಇ ಸಂಸ್ಥೆಯ ಅಧ್ಯಕ್ಷರಾಗಿರುವ ಸಚಿವ ಎಂ. ಬಿ. ಪಾಟೀಲರು ವಾಗ್ದಾನ ಮಾಡಿದಂತೆ ತ್ವರಿತವಾಗಿ ಪತ್ರಕರ್ತರಿಗೆ ಆರೋಗ್ಯ ಕಾರ್ಡ್ ನೀಡಿ, ನುಡಿದಂತೆ‌ ನಡೆದುಕೊಂಡಿದ್ದಾರೆ ಎನ್ನುವ ಮೂಲಕ ಸಚಿವರನ್ನು ಸಂಘದ ಸದಸ್ಯರ ಪರವಾಗಿ ಅಭಿನಂದನೆ ಸಲ್ಲಿಸಿದರು.

ಕಳೆದ ವರ್ಷ ಮೃತಪಟ್ಟ‌ ಪತ್ರಕರ್ತರಾದ ಶರಣು ಪಾಟೀಲ ಹಾಗೂ ಅಬ್ದುಲ್‌ರಜಾಕ್ ಶಿವಣಗಿ ಅವರ ಕುಟುಂಬ ಸದಸ್ಯರ‌ ಪರಿಸ್ಥಿತಿ ಚಿಂತಾಜನಕವಾಗಿದೆ. ಹಾಗಾಗಿ ಇವರ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿ ಮಂಜೂರು ಮಾಡಿಸಬೇಕೆಂದು ಮನವಿ ಮಾಡಿದರು.

ನಗರದ ಪತ್ರಕರ್ತರಿಗೆ ನಿವೇಶನ ಕೊಡಿಸುವ ನಿಟ್ಟಿನಲ್ಲಿ ಖಾಲಿ ಬಿದ್ದಿರುವ ಹೌಸಿಂಗ್ ಬೋರ್ಡ್ ಜಾಗೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಅಲ್ಲಿ ಸೂಕ್ತವೆನಿಸಿದರೆ ನಗರದ ಪತ್ರಕರ್ತರಿಗೆ ಹಣ ನಿಗದಿ ಮಾಡಿ ನಿವೇಶನ ಒದಗಿಸಲು ಸಚಿವರಿಗೆ ಮನವಿ ಮಾಡಿದರು. ಬಿಎಲ್ ಡಿ ಇ ಫೆಮಿಲ್ ಹೆಲ್ತ್ ಕಾರ್ಡ್ ಗೆ ಇನ್ನೂ‌ ಅರ್ಜಿ‌ ಸಲ್ಲಿಸದಿರುವ ಪತ್ರಕರ್ತರು ಈಗಲೂ‌ ಅರ್ಜಿ ಸಲ್ಲಿಸಿದರೆ ಕಾರ್ಡ್ ಮಾಡಿಸಿಕೊಡಲಾಗುವುದು ಎಂದು ಅವರು ಹೇಳಿದರು.

ಸಚಿವ ಎಂ. ಬಿ. ಪಾಟೀಲರು ಜಿಲ್ಲಾ ಕಾನಿಪ ಸಂಘದ ಪದಾಧಿಕಾರಿಗಳಿಗೆ ಹಾಗೂ ತಾಲೂಕು ಘಟಕಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳಿಗೆ ಬಿ.ಎಲ್. ಡಿ.ಇ  ಆಸ್ಪತ್ರೆಯ ಫ್ಯಾಮಿಲ್ ಹೆಲ್ತ್ ಕಾರ್ಡ್ ಆರೋಗ್ಯ ಕಾರ್ಡ್ ಗಳನ್ನು ಸಾಂಕೇತಿಕವಾಗಿ ವಿತರಿಸಿದರು.

ಇದೇ ವೇಳೆ ಸಚಿವರಿಗೆ ಜಿಲ್ಲಾ ಕಾನಿಪ ಸಂಘದಿಂದ ಸನ್ಮಾನಿಸಿ‌ ಗೌರವಾಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿವಿಯ ಕುಲಪತಿ ಡಾ. ಆರ್. ಎಸ್. ಮುಧೋಳ, ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಸಮಕುಲಾಧಿಪತಿ ಡಾ. ವೈ‌. ಎಂ. ಜಯರಾಜ, ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಮಹೇಶ ವಿ. ಶಟಗಾರ, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಿ.ಬಿ.ವಡವಡಗಿ, ಉಪಾಧ್ಯಕ್ಷರಾದ ಇಂದುಶೇಖರ‌ ಮಣೂರ, ಫಿರೋಜ್ ರೋಜಿಂದಾರ, ಕಾರ್ಯದರ್ಶಿ ಶಕೀಲ್ ಬಾಗಮಾರೆ, ಕಾರ್ಯಕಾರಿಣಿ ಬಸವರಾಜ ಉಳ್ಳಾಗಡ್ಡಿ, ಗುರು ಗದ್ದನಕೇರಿ, ವಿಜಯ ಸಾರವಾಡ, ಸುರೇಶ ತೇರದಾಳ, ಸುನೀಲ ಗೋಡೆನ್ನವರ, ಶಶಿಕಾಂತ‌ ಮೆಂಡೆಗಾರ, ನಾಗು ನಾಗೂರ, ಪತ್ರಕರ್ತರಾದ ಅಶೋಕ ಯಡಳ್ಳಿ, ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ದೀಪಕ ಶಿಂತ್ರೆ, ಜಿ. ಎಸ್. ಕಮತರ, ಬಸವನ ಬಾಗೇವಾಡಿ ತಾಲೂಕು ಅಧ್ಯಕ್ಷ ಅಜೀಜ ಬಳಬಟ್ಟಿ, ಪ್ರಧಾನ ಕಾರ್ಯದರ್ಶಿ ಬಾಬು ವಾಡೇದ, ಆಲಮೇಲ ಪ್ರಧಾನ ಕಾರ್ಯದರ್ಶಿ ಭಂಡಗಾರ, ಸಿಂದಗಿ ಅಧ್ಯಕ್ಷ ಆನಂದ ಶಾಬಾದಿ, ದೇವರ ಹಿಪ್ಪರಗಿ ತಾಲೂಕು ಅಧ್ಯಕ್ಷ ಸಂಗಮೇಶ ಉತ್ನಾಳ, ಪ್ರಧಾನ ಕಾರ್ಯದರ್ಶಿ ಶಿವಾನಂದ ಕಂಬಾರ, ತಿಕೋಟಾ ತಾಲೂಕು ಅಧ್ಯಕ್ಷ ಸಿ. ಬಿ. ಹಿರೇಮಠ, ಪ್ರಧಾನ ಕಾರ್ಯದರ್ಶಿ ಸಾತಲಿಂಗಯ್ಯ ಹಿರೇಮಠ, ಇಂಡಿ ತಾಲೂಕು ಅಧ್ಯಕ್ಷ ಅಬುಶಾಮ ಹವಾಲ್ದಾರ, ಕೊಲ್ಹಾರ ಪ್ರಧಾನ ಕಾರ್ಯದರ್ಶಿ ಅರುಣ ಔರಸಂಗ, ಚಡಚಣ ತಾಲೂಕು ಅಧ್ಯಕ್ಷ ರಮೇಶ ಬಿರಾದಾರ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಡೊಣಜಮಠ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು, ತಾಲೂಕು ಘಟಕಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿ‌ದಂತೆ ಸದಸ್ಯರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌