ವಿಜಯಪುರ: ಸ್ವಾತಂತ್ರ್ಯ ಯೋಧರ ತ್ಯಾಗ ಬಲಿದಾನ ಹೋರಾಟ ನಮ್ಮೆಲ್ಲರಿಗೂ ಮಾರ್ಗದರ್ಶನ ಪ್ರತಿದಿನ ಆ ಹೋರಾಟಗಾರರ ತ್ಯಾಗ ಮತ್ತು ಬಲಿದಾನವನ್ನು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.
ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ ಭಾರತೀಯ ಸೇವಾದಳ, ಭಾರತೀಯ ಸ್ಕೌಟ್ಸ್ ಹಾಗೂ ಗೈಡ್ಸ್ ಹಾಗೂ ನೆಹರು ಯುವ ಕೇಂದ್ರ ಇವರ ಸಹಯೋಗದಲ್ಲಿ ಹುತಾತ್ಮ ದಿನಾಚರಣೆ ಅಂಗವಾಗಿ ನಗರದ ಹುತಾತ್ಮರ (ಮೀನಾಕ್ಷಿ ಚೌಕ್) ವೃತ್ತದಲ್ಲಿರುವ ಸ್ಮಾರಕಕ್ಕೆ ಹಾಗೂ ಮಹಾತ್ಮ ಗಾಂಧಿಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣ ತೆತ್ತು ಹುತಾತ್ಮರಾದವರ ಸ್ಮರಣಾರ್ಥವಾಗಿ ಮೌನಾಚರಣೆ ಮಾಡಿ, ನಮನ ಸಲ್ಲಿಸಲಾಯಿತು.
ನಮ್ಮದು ಹೆಮ್ಮೆಯ ದೇಶವಾಗಿದೆ. ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರು ಸತ್ಯ ಅಹಿಂಸಾ ಮಾರ್ಗದಿಂದ ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಸತ್ಯಾಗ್ರಹ, ಉಪವಾಸ ಕೈಗೊಂಡರು. ಮಹಾತ್ಮಾ ಗಾಂಧಿಜಿವರ ವಿಚಾರಧಾರೆಗಳು ವಿಶ್ವದ ನಾಯಕರನ್ನು ಪ್ರಭಾವಿಸಿ, ಅವರ ಮೇಲೆ ಪ್ರಭಾವ ಬೀರಿ,ಅವರ ವಿಚಾರಧಾರೆಗಳನ್ನು ಆಯಾ ದೇಶದ ನಾಯಕರು ಅನುಸರಿಸಿದ್ದಾರೆ. ಅವರಲ್ಲಿ ನೆಲ್ಸನ್ ಮಂಡೆಲಾ, ಮಾರ್ಟಿನ್ ಲೂಥರ್ ಕಿಂಗ್ ಮುಂತಾದವರಿದ್ದಾರೆ. ಮಹಾತ್ಮ ಗಾಂಧಿ ಅವರು ವಿಶ್ವಕ್ಕೆ ಮಾದರಿ ಎನಿಸಿದ್ದಾರೆ. ಪಂಚಾಯಿತಿ ರಾಜ್ಯ, ಗ್ರಾಮ ಸ್ವರಾಜ್ಯ ಕಲ್ಪನೆ ನೀಡಿದರು. ಈ ದೇಶಕ್ಕಾಗಿ ಹುತಾತ್ಮರಾದ ಅನೇಕ ಧೀರ ಸೈನಿಕರು, ಪೊಲೀಸರು ಅವರ ಕೊಡುಗೆ ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು. ತಮ್ಮ ಜೀವ ತ್ಯಾಗ ಮಾಡಿ ಗಳಿಸಿದ ಸ್ವಾತಂತ್ರ್ಯವನ್ನು ಉಳಿಸಿ, ಸಂರಕ್ಷಿಸುವುದರ ಜೊತೆಗೆ ಶ್ರೀಮಂತಗೊಳಿಸುವುದು ನಮ್ಮ ಯುವ ಜನರು ಅರಿತುಕೊಳ್ಳಬೇಕು ಎಂದು ಹೇಳಿದರು.
ಬಾಲಕೀಯರ ಪದವಿ ಪೂರ್ವ ಕಾಲೇಜಿನ ಆರ್.ಸಿ ಹಿರೇಮಠ ಅವರು ಉಪನ್ಯಾಸ ನೀಡಿ, ಮಹಾತ್ಮ ಗಾಂಧಿ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನ ಮುಡುಪಾಗಿಟ್ಟಿದ್ದರು. ಅನೇಕ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದ ಫಲವಾಗಿ ದೇಶ ಸ್ವಾತಂತ್ರ್ಯ ಹೊಂದಿದೆ. ಸ್ವಚ್ಛ ಸುಂದರ ಸಮಾಜ ನಿರ್ಮಾಣ ಮಾಡೋಣ. ನಮ್ಮ ಪಾಲಿನ ಕರ್ತವ್ಯ ಮರೆಯೋಣ ಎಂದರು. ನಂತರ ಹುತಾತ್ಮರ ಚೌಕದಿಂದ ಮಹಾತ್ಮ ಗಾಂಧಿ ಚೌಕಿಗೆ ತೆರಳಿ ಮಹಾತ್ಮಾ ಗಾಂಧಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪಾಲಿಕೆಯ ಮೇಯರ್ ಮಹೇಜಬಿನ್ ಹೊರ್ತಿ,ಉಪ ಮೇಯರ್ ದಿನೇಶ ಹಳ್ಳಿ, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ,ವಿಜಯಪುರ ಉಪ ವಿಭಾಗಾಧಿಕಾರಿ ಬಸಣೆಪ್ಪ ಕಲಶೆಟ್ಟಿ, ಡಿವೈಎಸ್‍ಪಿ, ಬಸವರಾಜ್ ಎಲಿಗಾರ, ವಿಜಯಪುರ ತಹಶೀಲ್ದಾರರಾದ ಶ್ರೀಮತಿ ಕವಿತಾ,ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.