ವಿಜಯಪುರ: ನಾನು ಈಗ ಸಂಪೂರ್ಣ ಆರೋಗ್ಯವಾಗಿದ್ದು, ಕೆಲವು ವಿಕ್ಷಿಪ್ತ ಮನಸ್ಸುಗಳು ನನ್ನ ಆರೋಗ್ಯದ ಬಗ್ಗೆ ಅಪಪ್ರಚಾರ ನಡೆಸುತ್ತಿರುವುದು ನೋವುಂಟು ಮಾಡಿದೆ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಸಹಜವಾದ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದೆ. ಆದರೆ ಕೆಲವೊಂದು ವಿಕ್ಷಿಪ್ತ ಮನಸ್ಸುಗಳು ತಮ್ಮ ಸ್ವಾರ್ಥ ರಾಜಕಾರಣದ ಬೆಳೆ ಬೇಯಿಸಿಕೊಳ್ಳಲು ಸಾಮಾಜಿಕ ಜಾಲತಾಣಗಳ ಮೂಲಕ ಅಪಪ್ರಚಾರ ಮಾಡುತ್ತಿರುವುದು ನನ್ನ ಮನಸ್ಸಿಗೆ ನೋವು ಉಂಟು ಮಾಡಿದೆ ಎಂದು ತಿಳಿಸಿದ್ದಾರೆ.
ನನ್ನ ಆರೋಗ್ಯದ ವಿಷಯವನ್ನು ರಾಜಕಾರಣಕ್ಕೆ ಬಳಸುವುದು ಎಷ್ಟು ಸರಿ? ಇಂಥ ಪರಿಸ್ಥಿತಿಯಲ್ಲಿ ಸೌಜನ್ಯ ತೋರುವ ಬದಲು ಕೆಟ್ಟ ರೀತಿಯಲ್ಲಿ ವರ್ತಿಸುತ್ತಿರುವುದು ಸರಿಯಲ್ಲ. ನಾನು ಈಗ ಆರೋಗ್ಯವಾಗಿದ್ದೇನೆ. ಸಂಪೂರ್ಣ ಗುಣಮುಖನಾಗಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನವದೆಹಲಿಗೆ ಪ್ರಯಾಣ ಮಾಡುವಾಗ ಅನಾರೋಗ್ಯದ ಹಿನ್ನೆಲೆಯಲ್ಲಿ ಮಾರ್ಗಮಧ್ಯೆ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದೆ. ಈಗ ಆಸ್ಪತ್ರೆಯಿಂದ ಗುಣಮುಖರಾಗಿ ವಿಜಯಪುರಕ್ಕೆ ವಾಪಾಸ್ಸಾಗುತ್ತಿದ್ದೇನೆ. ನನ್ನ ಆರೋಗ್ಯದ ವಿಷಯವನ್ನು ರಾಜಕಾರಣದೊಂದಿಗೆ ತಳಕು ಹಾಕುವುದು ಸರಿಯಲ್ಲ. ಸಾಮಾನ್ಯವಾಗಿ ಕಾಣುವ ಸಮಸ್ಯೆ ನನಗೂ ಕಾಣಿಸಿದೆ. ಈ ಬಾರಿ ಅನಾರೋಗ್ಯದ ನಡುವೆಯೂ ವಿಶ್ರಾಂತಿ ತೆಗೆದುಕೊಳ್ಳದ ಹಿನ್ನೆಲೆ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾಗಿತ್ತು. ಜನೇವರಿ 19 ರಿಂದ ನನಗೆ ಆರೋಗ್ಯ ಸಮಸ್ಯೆ ಕಾಡಿತ್ತು. ವಾತಾವರಣದಲ್ಲಿ ಬದಲಾವಣೆ ಅದರಲ್ಲೂ ಶೀತಮಯ ವಾತಾವರಣ ಉಂಟಾದಾಗ ನನಗೆ ನ್ಯೂಮ್ಯೂನಿಯಾ ಕಾಡುವುದು ಮಾಮೂಲು. ಮನೆಯಲ್ಲಿದ್ದು ವಿಶ್ರಾಂತಿ ಪಡೆದದರೆ ಎಲ್ಲವೂ ಸರಿ ಹೋಗುತ್ತಿತ್ತು. ಈ ಬಾರಿಯೂ ಸಹ ಶೀತ ವಾತಾವರಣದಲ್ಲಿ ನ್ಯೂಮೋನಿಯಾ ಉಂಟಾಯಿತು. ಆದರೆ ಸ್ವಲ್ಪ ಹೆಚ್ಚಿನ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜ. 21 ರಂದು ವಿಜಯಪುರ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದೆ ಎಂದು ಅವರು ತಿಳಿಸಿದ್ದಾರೆ.
ಆದರೆ, ಜ. 22 ರಂದು ರಾಮಮಂದಿರ ಲೋಕಾರ್ಪಣೆಯ ಸುಸಂದರ್ಭ ಹಬ್ಬಕ್ಕೂ ಮಿಗಿಲಾದ ವಾತಾವರಣ ಸೃಷ್ಠಿಸಿತ್ತು. ಈ ಅಪೂರ್ವ ಸಂದರ್ಭದಲ್ಲಿ ಲೋಕಸಭೆಯ ಓರ್ವ ಸದಸ್ಯನಾಗಿ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕು. ಇಲ್ಲವಾದರೆ ಅಪರಾಧವಾಗುತ್ತದೆ ಎಂಬ ಮನೋಭಾವನೆಯಿಂದ ರಾಮಮಂದಿರ ಲೋಕಾರ್ಪಣೆಯ ಅಂಗವಾಗಿ ನಡೆಯುವ ನಾನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದೆ. ರಾಮಮಂದಿರ ಲೋಕಾರ್ಣೆ ನಂತರ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿಯೂ ಭಾಗಿಯಾಗಿದ್ದೆ. ಸ್ವಲ್ಪವೂ ವಿಶ್ರಾಂತಿ ತೆಗೆದುಕೊಳ್ಳದ ಕಾರಣ ಪುನ: ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತು. ಈಗ ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ. ಯಾವ ಆರೋಗ್ಯ ಸಮಸ್ಯೆಯೂ ಇಲ್ಲ ಎಂದು ಸಂಸದರು ಸ್ಪಷ್ಟಪಡಿಸಿದ್ದಾರೆ.
ಅದೇ ರೀತಿ ನನ್ನ ಆರೋಗ್ಯದ ಕುರಿತು ರಾಜಕಾರಣ ಮಾಡುತ್ತಿರುವುದು ನೋವು ತಂದಿದೆ. ಇಂಥ ಸಂದರ್ಭದಲ್ಲಿ ಸೌಜನ್ಯ ತೋರುವ ಬದಲು ಕೆಲವು ಮನಸ್ಸುಗಳು ರಾಜಕೀಯ ಮಾಡುತ್ತಿವೆ. ಸಾಮಾಜಿಕ ಜಾಲತಾಣಗಳ ಮೂಲಕ ಅಪಪ್ರಚಾರ ಮಾಡುತ್ತಿರುವುದು ಅಸಹ್ಯಕರವಾಗಿದೆ ಎಂದು ಎಂದು ರಮೇಶ ಜಿಗಜಿಣಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.