Rajeshwari Gayakwad: ಸತತ ಪರಿಶ್ರಮ, ಶ್ರದ್ಧೆ, ಶಿಸ್ತಿನಿಂದ ಕ್ರೀಡೆಗಳಲ್ಲಿ ಉನ್ನತ ಸಾಧನೆ ಮಾಡಬಹುದು- ಅಂತಾರಾಷ್ಟ್ರೀಯ ಕ್ರಿಕೆಟ್ ಮಹಿಳಾ ಆಟಗಾರ್ತಿ ರಾಜೇಶ್ವರಿ ಗಾಯಕವಾಡ

ವಿಜಯಪುರ: ಸತತ ಪರಿಶ್ರಮ, ಶ್ರದ್ಧೆ ಮತ್ತು ಶಿಸ್ತಿನಿಂದ ಕ್ರೀಡೆಗಳಲ್ಲಿ ಉನ್ನತ ಸಾಧನೆ ಮಾಡಬಹುದು.  ಇಲ್ಲಿ ಯಾವುದೇ ಶಾರ್ಟ್ ಕಟ್ ಇರುವುದಿಲ್ಲ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಮಹಿಳಾ ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಗಾಯಕವಾಡ ಹೇಳಿದ್ದಾರೆ.

ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ಮೆಡಿಕಲ್ ಕಾಲೇಜಿನ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಅಥ್ಲೀಟ್ ಮತ್ತು ಖ್ಯಾತ ವೈದ್ಯ ದಿ. ಡಾ. ಸಿ. ಆರ್. ಬಿದರಿಯವರ ಪುಣ್ಯಸ್ಮರಣೆ ಅಂಗವಾಗಿ ಇಂದು ರವಿವಾರ ಆಯೋಜಿಸಲಾಗಿದ್ದ ಬಿ. ಎಲ್. ಡಿ. ಇ ಸಂಸ್ಥೆಯ 9ನೇ ಅಂತರ ಶಾಲಾ ಕಾಲೇಜುಗಳ ಅಥ್ಲೇಟಿಕ್ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡಾಪಟುಗಳು ತಾವು ಇಷ್ಟಪಡುವ ಕ್ರೀಡೆಯಲ್ಲಿ ಯಶಸ್ವಿಯಾಗಬೇಕಾದರೆ ಕಠಿಣ ಪರಿಶ್ರಮ, ಸಮರ್ಪಣೆ ಮನೋಭಾವ, ಕ್ರೀಡಾಸ್ಪೂರ್ತಿ ಮುಖ್ಯವಾಗಿದೆ.  ಇಲ್ಲಿ ಯಾವುದೇ ಅಡ್ಡಮಾರ್ಗಗಳ ಮೂಲಕ ಸಾಧನೆ ಮಾಡಲು ಸಾಧ್ಯವಿಲ್ಲ.  ಶ್ರಮಪಟ್ಟರೆ ಅದಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ.  ಫೆಬ್ರವರಿ 23ರಿಂದ ಬೆಂಗಳೂರಿನಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್(ಡಬ್ಲ್ಯೂಪಿಎಲ್) ಪ್ರಾರಂಭವಾಗುತ್ತಿದೆ.  ವಿಜಯಪುರ ಜಿಲ್ಲೆಯ ಜನ ನನಗೆ ಬೆಂಬಲ ನೀಡಬೇಕು ಎಂದು ರಾಜೇಶ್ವರ ಗಾಯಕವಾಡ ಮನವಿ ಮಾಡಿದರು.

ವಿಜಯಪುರ ನಗರದ ಬಿ.ಎಲ್.ಡಿ.ಇ ವೈದ್ಯಕೀಯ ಕಾಲೇಜಿನ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಉದ್ಘಾಟಿಸಿ ರಾಜೇಶ್ವರಿ ಗಾಯಕವಾಡ ಮಾತನಾಡಿದರು

ಬಿ.ಎಲ್.ಡಿ.ಇ ಡೀಮ್ಡ್ ವಿವಿಯ ಉಪಕುಲಪತಿ ಡಾ. ಆರ್. ಎಸ್. ಮುಧೋಳ ಮಾತನಾಡಿ, ಕ್ರೀಡಾಕೂಟಗಳು ವಿದ್ಯಾರ್ಥಿಗಳಿಗೆ ಸ್ನೇಹ ಬೆಳೆಸಿಕೊಳ್ಳಲು, ನಾಯಕತ್ವ ಗುಣ ಅಳವಡಿಸಿಕೊಳ್ಳಲು ಹಾಗೂ ಸಾಧನೆ ಮಾಡಲು ಅವಕಾಶ ಕಲ್ಪಿಸುತ್ತವೆ.  ಬಿ.ಎಲ್.ಡಿ.ಇ ಸಂಸ್ಥೆ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ಮಾನವೀಯತೆ ನಿಲುವಿನ ಶಿಕ್ಷಣ ನೀಡುತ್ತಿದೆ.  ವಿದ್ಯಾರ್ಥಿಗಳು ಮತ್ತು ಕ್ರೀಡಾಪಟುಗಳು ಎಲ್ಲ ಕ್ಷೇತ್ರಗಳಲ್ಲಿ ಕ್ರೀಡಾಸ್ಪೂರ್ತಿ ಮತ್ತು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು ಉತ್ತಮ ಸಾಧನೆ ಮಾಡಬೇಕು.  ಸಂಸ್ಥೆಯ ಅಧ್ಯಕ್ಷ ಮತ್ತು ಸಚಿವ ಎಂ. ಬಿ. ಪಾಟೀಲ ಅವರು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಪಠ್ಯ ಮತ್ತು ಪಠ್ಯಕ್ಕೆ ಪೂರಕವಾದ ಎಲ್ಲ ಚಟುವಟಿಕೆಗಳಿವೆ ಉತ್ತೇಜನ ನೀಡುತ್ತಿದ್ದಾರೆ ಎಂದು ಹೇಳಿದರು.

ಬಿ.ಎಲ್.ಡಿ.ಇ ಸಂಸ್ಥೆಯ ಕ್ರೀಡಾ ನಿರ್ದೇಶಕ ಎಸ್. ಎಸ್. ಕೋರಿ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ರೀಡಾ ಸಂಸ್ಕೃತಿಗೆ ಉತ್ತೇಜನ ನೀಡಲು ಡಾ. ಸಿ. ಆರ್. ಬಿದರಿ ಸ್ಮರಣೆಯಲ್ಲಿ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ.  ಈ ವರ್ಷ ಬಿ.ಎಲ್.ಡಿ.ಇ ಸಂಸ್ಥೆಯ 17 ಕ್ರೀಡಾಪಟುಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಿದ್ದಾರೆ.  ರಾಜೇಶ್ವರಿ ಗಾಯಕವಾಡ ಕೂಡ ಬಿ.ಎಲ್.ಡಿ.ಇ ಸಂಸ್ಥೆಯ ಹಳೆಯ ವಿದ್ಯಾರ್ಥಿನಿಯಾಗಿರುವುದು ಎಲ್ಲರಿಗೂ ಹೆಮ್ಮೆ ತಂದಿದೆ ಎಂದು ಹೇಳಿದರು.

ಬಿ.ಎಲ್.ಡಿ.ಇ ಸಂಸ್ಷೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ, ಆಡಳಿತಾಧಿಕಾರಿ ಐ. ಎಸ್. ಕಾಳಪ್ಪನವರ ಕ್ರೀಡಾ ಧ್ವಜಾರೋಹಣ ಮಾಡಿದರು.  ರಾಜೇಶ್ವರಿ ಗಾಯಕವಾಡ ಬಲೂನು ಗಾಳಿಯಲ್ಲಿ ಹಾರಿ ಬಿಡುವ ಮೂಲಕ ಕ್ರೀಡಾಪಟುಗಳಿಗೆ ಶುಭ ಕೋರಿದರು.  ಕ್ರೀಡಾಪಟುಗಳಾದ ಗೌರಿ ಹಿರೇಮಠ ಮತ್ತೀತರು ಕ್ರೀಡಾ ಜ್ಯೋತಿಯನ್ನು ರಾಜೇಶ್ವರಿ ಗಾಯಕವಾಡ ಅವರಿಗೆ ನೀಡಿದರು.

 

ಈ ಸಂದರ್ಭದಲ್ಲಿ ಡಾ. ಸಿ. ಆರ್. ಬಿದರಿ ಕುಟುಂಬದ ಪರವಾಗಿ ಅವರ ಸೊಸೆ ಮತ್ತು ಖ್ಯಾತ ವೈದ್ಯೆ ಡಾ. ಶೈಲಜಾ ಆರ್. ಬಿದರಿ, ಉಪಕುಲಪತಿ ಡಾ. ಆರ್. ಎಸ್. ಮುಧೋಳ ಹಾಗೂ ಮುಖ್ಯ ಆಡಳಿತಾಧಿಕಾರಿ ಆರ್. ಬಿ. ಕೊಟ್ನಾಳ ಅವರು ರಾಜೇಶ್ವರಿ ಗಾಯಕವಾಡ ಅವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ವಿ. ಜಿ. ಸಂಗಮ, ಬಿ.ಎಲ್.ಡಿ.ಇ ಡೀಮ್ಡ್ ವಿವಿ ರಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ, ಸಂಸ್ಥೆಯ ಆಡಳಿತಾಧಿಕಾರಿ ಬಿ. ಆರ್. ಪಾಟೀಲ, ಎಸ್. ಎಚ್. ಲಗಳಿ, ದೈಹಿಕ ಉಪನಿರ್ದೇಶ ಕೈಲಾಸ ಹಿರೇಮಠ, ಭಾರತಿ ಪಾಟೀಲ, ರಾಜೇಶ್ವರಿ ಗಾಯಕವಾಡ ಕುಟುಂಬ ಸದಸ್ಯರು, ಎಂಜಿನಿಯರಿಂಗ್ ಕಾಲೇಜಿನ ಪಿ. ವಿ. ಮಾಗಿ, ಉಮೇಶ ದೀಕ್ಷಿತ, ರಮೇಶ ಜೀರಗಾಳ, ಡಾ. ನವೀನ ದೇಸಾಯಿ, ಪ್ರೊ. ಗಿರೀಶ ಕುಲಕರ್ಣಿ, ಐ. ಎಸ್. ಇಕ್ಕಳಕಿ, ಡಾ. ಎ. ಎಸ್. ಜಾಧವ, ವೈ. ಎ. ಕುಲಕರ್ಣಿ, ಪ್ತೊ. ಎಸ್. ಎಸ್. ಚಪ್ಪಾರ, ಪ್ರೊ. ಶಿಲ್ಪಾ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ಬಿ.ಎಲ್.ಡಿ.ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳು ಪ್ರಾರ್ಥಿಸಿದರು.  ಕಾಲೇಜಿನ ಉಪಪ್ರಾಚಾರ್ಯೆ ಗೀತಾಂಜಲಿ ಪಾಟೀಲ ಸ್ವಾಗತಿಸಿದರು.  ಕ್ರೀಡಾಪಟು ನೀಲಮ್ಮಾ ರಾಠೋಡ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.  ಕಾಲೇಜಿನ ಕ್ರೀಡಾ ನಿರ್ದೇಶಕ ಐ. ಎಸ್. ಇಕ್ಕಳಕಿ ವಂದಿಸಿದರು.  ಆಶಾ ಎಂ. ಪಾಟೀಲ ನಿರೂಪಿಸಿದರು.

ದಿನವಿಡೀ ನಾನಾ ಅಥ್ಲೇಟಿಕ್ ಸ್ಪರ್ಧೆಗಳು ನಡೆದವು.

Leave a Reply

ಹೊಸ ಪೋಸ್ಟ್‌