ಕೇಂದ್ರ ಜಲ ಶಕ್ತಿ ತಂಡದಿಂದ ಜಿಲ್ಲೆಯ ನಾನಾ ಗ್ರಾಮ ಪಂಚಾಯಿತ್ಗಿಳಿಗೆ ಭೇಟಿ, ಪರಿಶೀಲನೆ

ವಿಜಯಪುರ: ಗಣಿ ಸಚಿವಾಲಯದ ನಿರ್ದೇಶಕರು ಹಾಗೂ ಕೇಂದ್ರ ಜಲ ಶಕ್ತಿ ತಂಡದ ಕೇಂದ್ರ ನೋಡಲ್ ಅಧಿಕಾರಿಗಳಾದ ವಿವೇಕ ಕುಮಾರ ಶರ್ಮಾ ಮತ್ತು ವಿಜ್ಞಾನಿಗಳು, ಜಲವಿಜ್ಞಾನ, ಕೇಂದ್ರ ಅಂತರ್ಜಲ ಮಂಡಳಿ ಆಯುಷ್ ಕೇಶರ್ವಾಣಿ ಅವರನ್ನೊಳಗೊಂಡ ತಂಡ ವಿಜಯಪುರ ತಾಲೂಕಿನ ಹೆಗಡಿಹಾಳ, ಐನಾಪುರ ಹಾಗೂ ಹಡಗಲಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ಪರಿಶೀಲನೆ ನಡೆಸಿತು.

ಹೆಗಡಿಹಾಳ ಗ್ರಾಮ ಅಮೃತ ಸರೋವರ, ಬೋರ್ ವೆಲ್ ಮರು ಪೂರಣ ಘಟಕ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿಗಳನ್ನು ಪರಿಶೀಲನೆ ಮಾಡಿದರು. ನಂತರ ಅಮೃತ ಸರೋವರ ಒಳಹರಿವು ಹಾಗೂ ಹೊರಹರಿವುಗಳ ಕುರಿತು ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸಿದರು.  ಬಳಿಕ ಐನಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ ಬದಿ ಇರುವ ಬೋರ್ ವೆಲ್ ಮರು ಪೂರಣ ಘಟಕ ಮತ್ತು ಸರಕಾರಿ ಶಾಲಾ ಕಟ್ಟಡದ ಮಳೆ ನೀರು ಕೊಯ್ಲು ಘಟಕ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು. ಇದೇ ವೇಳೆ ಹಡಗಲಿ ಗ್ರಾಮದ ಸರಕಾರಿ ಜಾಗದಲ್ಲಿ ನಿರ್ಮಿಸಿರುವ ನೆಡು ತೋಪು, ಸಾಮಾಜಿಕ ಅರಣ್ಯ ಇಲಾಖೆಯ ನರ್ಸರಿ ಕಾಮಗಾರಿಗಳಿಗೆ ಭೇಟಿ ನೀಡಿ ಅಲ್ಲಿನ ಸಸಿಗಳಿಗೆ ಸಮಯಕ್ಕೆ ತಕ್ಕಂತೆ ನೀರು ಪೂರೈಸಿ ಗಿಡಗಳು ನಾಶವಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಕೇಂದ್ರ ಅಧಿಕಾರಿಗಳ ತಂಡ ವಿಜಯಪುರ ತಾಲೂಕಿನ ನಾನಾ ಗ್ರಾಮಗಳಿಗೆ ಭೇಟಿ ನೀಡಿ ಕುಡಿಯುವ ನೀರು ಪೂರೈಕೆ ಕುರಿತು ಪರಿಶೀಲನೆ ನಡೆಸಿತು

 

 

ಹಡಗಲಿ ಕೆರೆಯಿಂದ ಹಡಗಲಿ ಎಲ್.ಟಿ 2 ತಾಂಡಾದ ಜನರಿಗೆ ನೀರು ಸರಬರಾಜಾಗುತ್ತಿರುವ ಕುರಿತು ಮಾಹಿತಿ ಪಡೆದ ಅಧಿಕಾರಿಗಳು, ತಾಂಡಾದ ಜನರೊಂದಿಗೆ ಕುಡಿಯುವ ನೀರಿನ ಕುರಿತು ಸಂವಾದ ನಡೆಸಿದರು. ಸಾರ್ವಜನಿಕರಿಗೆ ಸರಬಾರಾಜು ಆಗುವ ಕುಡಿಯುವ ನೀರಿನ ಗುಣಮಟ್ಟವನ್ನು ಕಡ್ಡಾಯವಾಗಿ ಪರಿಶೀಲಿಸಿ ಸರಬರಾಜು ಮಾಡಲು ಸ್ಥಳದಲ್ಲಿನ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ವಿಜಯಪುರ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ. ಹೊಂಗಯ್ಯ, ಚಡಚಣ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂಜಯ ಖಡಗೇಕರ, ನಿಡುಗುಂದಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಾದ ವೀರೇಶ ಹಿರೇಮಠ, ಜಿಲ್ಲಾ ಪಂಚಾಯಿತಿಯ ಅಧಿಕಾರಿಗಳು, ಅನುಷ್ಠಾನ ಇಲಾಖೆಗಳ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌