ವಿಜಯಪುರ-ಬೆಂಗಳೂರು, ಮುಂಬೈಗೆ ವಂದೇ ಭಾರತ ರೈಲು ಪ್ರಾರಂಭಿಸಿ- ಸುನೀಲಗೌಡ ಪಾಟೀಲ ಆಗ್ರಹ

ವಿಜಯಪುರ: ಭಾರತದ ಸ್ವಾತಂತ್ರ‍್ಯ ಸುವರ್ಣ ಮಹೋತ್ಸವದ ಅಂಗವಾಗಿ ಪ್ರಾರಂಭಿಸಲಾಗಿರುವ ವಂದೇ ಭಾರತ ರೈಲು ಸೇವೆಯನ್ನು ವಿಜಯಪುರದಿಂದ ಬಾಗಲಕೋಟೆ ಮಾರ್ಗವಾಗಿ ಬೆಂಗಳೂರಿಗೆ ಮತ್ತು ಮುಂಬೈ- ಸೋಲಾಪುರ ರೈಲನ್ನು ವಿಜಯಪುರದ ವರೆಗೆ ವಿಸ್ತರಿಸುವಂತೆ ಆಗ್ರಹಿಸಿ ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಕೇಂದ್ರ ಅಶ್ವಿನಿ ವೈಷ್ಣವ ಅವರಿಗೆ ಪತ್ರ ಬರೆದಿದ್ದಾರೆ.

ಭಾರತದ ಸ್ವಾತಂತ್ರ‍್ಯ ಸುವರ್ಣ ಮಹೋತ್ಸವದ ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು ಜನತೆ ಒಂದು ಸ್ಥಳದಿಂದ ಮತ್ತೋಂದು ಸ್ಳಳಕ್ಕೆ ಸಂಚರಿಸಲು ಹೆಚ್ಚುವರಿಯಾಗಿ ರೈಲುಗಳನ್ನು ಓಡಿಸುವುದರ ಜೊತೆಗೆ ರೈಲಿನಲ್ಲಿ ಸ್ವಚ್ಚತೆ ಸೇರಿದಂತೆ ನಾನಾ ರೀತಿಯ ಆಧುನಿಕ ಸೌಲಭ್ಯಗಳನ್ನು ಒದಗಿಸಿರುವುದು ಸಂತಸದ ಸಂಗತಿಯಾಗಿದೆ.

ವಿಜಯಪುರದಿಂದ ಬಾಗಲಕೋಟೆ ಮಾರ್ಗವಾಗಿ ಬೆಂಗಳೂರಿಗೆ ಹೋಗಲು ರೈಲು ಸೇವೆ ಇದ್ದರೂ ಈ ರೈಲುಗಳ ಸಂಚಾರದ ಸಮಯ ಅನುಕೂಲವಾಗಿಲ್ಲ. ಅಲ್ಲದೇ, ಈ ರೈಲುಗಳು ಸರಿಯಾದ ಸಮಯಕ್ಕೆ ನಿಗದಿತ ಸ್ಥಳಗಳನ್ನು ತಲುಪುತ್ತಿಲ್ಲ. ಇದರಿಂದ ಕೆಲಸ ಕಾರ್ಯಗಳಿಗಾಗಿ ಮತ್ತು ದಿನನಿತ್ಯದ ವ್ಯವಹಾರ ಸಂಬಂಧಿ ಕೆಲಸಗಳಿಗಾಗಿ ಹಾಗೂ ಸರಕಾರಿ ಕಚೇರಿ ಕೆಲಸಗಳಿಗಾಗಿ ಬೆಂಗಳೂರಿಗೆ ಹೋಗಿ- ಬರುವ ಜನರಿಗೆ ತೊಂದರೆಯಾಗಿದೆ. ಅಲ್ಲದೇ, ಬೆಂಗಳೂರಿನಿಂದ ವಿಜಯಪುರಕ್ಕೆ ಬರುವ ರೈಲುಗಳ ಸಂಚಾರ ಸಮಯವೂ ಸಹ ಹೆಚ್ಚಾಗಿದೆ. ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಿಂದ ಸಾಕಷ್ಟು ಜನ ಯುವಕರು ಉದ್ಯೋಗ ಅರಸಿ ಬೆಂಗಳೂರಿನಲ್ಲಿ ನೆಲಸಿರುತ್ತಾರೆ. ಹಬ್ಬಗಳು ಮತ್ತು ಸಾಲುಸಾಲು ರಜೆಗಳ ಬಂದಂಥ ಸಂದರ್ಭಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವುದರಿಂದ ಕೆಲವು ಖಾಸಗಿ ಸಾರಿಗೆ ಸಂಸ್ಥೆಗಳು ಪ್ರಯಾಣ ದರವನ್ನು ಎರಡರಿಂದ ಮೂರು ಪಟ್ಟು ಹೆಚ್ಚಳ ಮಾಡುತ್ತಾರೆ. ಇದರಿಂದ ಬೆಂಗಳೂರಿನಲ್ಲಿ ಕೆಲಸ ಮಾಡುವ ಯುವಕರು, ಕಾರ್ಮಿಕರು ಮತ್ತು ಇತರೆ ಸಾರ್ವಜನಿಕರಿಗೆ ತುಂಬಾ ಹೊರೆಯಾಗುತ್ತದೆ. ಜೊತೆಗೆ ಜನರ ಹಬ್ಬದ ಸಂಭ್ರಮದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ತಿಳಿಸಿದ್ದಾರೆ.

ಶಾಸಕ‌ ಸುನೀಲಗೌಡ ಪಾಟೀಲ‌ ಅವರು ರೇಲ್ವೆ ಸಚಿವ ಅಶ್ವಿನಿ‌ ವೈಷ್ಣವ ಅವರಿಗೆ ಬರೆದಿರುವ ಪತ್ರ

ಹೀಗಾಗಿ ವಿಜಯಪುರದಿಂದ ಪ್ರತಿದಿನ ರಾತ್ರಿ 9 ಗಂಟೆಗೆ ರೈಲು ಸಂಚಾರ ಪ್ರಾರಂಭಿಸಿ ಮರುದಿನ ಬೆಳಿಗ್ಗೆ 6 ಗಂಟೆಗೆ ಬೆಂಗಳೂರು ತಲುಪುವಂತಾಗಬೇಕು. ಅದೇ ರೀತಿ ಬೆಂಗಳೂರಿನಿಂದಲೂ ಪ್ರತಿದಿನ ರಾತ್ರಿ 9 ಗಂಟೆಗೆ ರೈಲು ಹೊರಟು ಮರುದಿನ ಬೆಳಿಗ್ಗೆ 6 ಗಂಟೆಗೆ ವಿಜಯಪುರ ತಲುಪುವ ವ್ಯವಸ್ಥೆ ಮಾಡಬೇಕು. ವಿಜಯಪುರ ಜಿಲ್ಲೆ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿದ್ದು, ಮುಂಬೈ ಮತ್ತು ಕರ್ನಾಟಕಕ್ಕೆ ಮಧ್ಯೆ ಸುಮಾರು 500 ವರ್ಷಗಳಿಂದಲೂ ಅವಿನಾಭಾವ ಸಂಬAಧವಿದೆ. ಭಾವನಾತ್ಮಕವಾಗಿ ವಿಜಯಪುರ ಜಿಲ್ಲೆಯ ಜನರು ಮುಂಬೈ ಮತ್ತು ಸೋಲಾಪೂರ ಜನರೊಂದಿಗೆ ಬಾಂಧವ್ಯವನ್ನು ಬೆಸೆದುಕೊಂಡಿದ್ದಾರೆ. ಗಡಿ ಭಾಗದ ಜನರು ಮುಂಬೈ ಮತ್ತು ಸೋಲಾಪೂರ ಪಟ್ಟಣಗಳಿಗೆ ಉದ್ಯೋಗ ಹಾಗೂ ವ್ಯಾಪಾರ ವಹಿವಾಟುಗಳಿಗಾಗಿ ಸಂಚರಿಸುತ್ತಾರೆ. ಈ ಭಾಗದ ರೈತರು ಬೆಳೆದಿರುವ ಉತ್ಪನ್ನಗಳನ್ನೂ ಸಾಗಿಸುತ್ತಾರೆ. ಜನರ ವಹಿವಾಟುಗಳು ಸಾಕಷ್ಟು ಸಂಖ್ಯೆಯಲ್ಲಿ ಇರುವುದರಿಂದ ಮುಂಬೈ- ಸೋಲಾಪೂರ ನಡುವೆ ಸಂಚರಿಸುವ ಒಂದೇ ಭಾರತ ರೈಲನ್ನು ವಿಜಯಪುರದವರೆಗೂ ವಿಸ್ತರಿಸಿದರೆ ಈ ಭಾಗದ ರೈತರಿಗೆ, ಉದ್ಯ್ಯಮಿಗಳಿಗೆ, ವ್ಯಾಪಾರ ವಹಿವಾಟುದಾರರಿಗೆ ಮತ್ತು ಉದ್ಯೋಗಸ್ಥರಿಗೆ ಬಹಳಷ್ಟು ಅನಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಮುಂಬೈ- ಸೋಲಾಪೂರ ವರೆಗೆ ಸಂಚರಿಸುವ ವಂದೇ ಭಾರತ ರೈಲನ್ನು ವಿಜಯಪುರ ವರೆಗೆ ಓಡಿಸಲು ಆದೇಶ ಹೊರಡಿಸಬೇಕು.

ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳು ಹಲವಾರು ಪ್ರಾಚೀನ ಸ್ಮಾರಕಗಳನ್ನು ಹೊಂದಿರುವ ಜಿಲ್ಲೆಗಳಾಗಿವೆ. ಅಲ್ಲದೇ, ದೇಶ- ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ವಿಜಯಪುರ ನಗರ, ಆಲಮಟ್ಟಿ, ಕೂಡಲ ಸಂಗಮ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಮಹಾಕೂಟ ಸೇರಿದಂತೆ ಅನೇಕ ಪ್ರವಾಸಿ ತಾಣಗಳಿಗೆ ಪ್ರತಿದಿನ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಅಲ್ಲದೇ, ಈ ಭಾಗದಲ್ಲಿ ದ್ರಾಕ್ಷಿ, ದಾಳಿಂಬೆ, ಸಪೋಟಾ, ಬಾರೆಹಣ್ಣು ಮುಂತಾದ ಉತೃಕ್ಷ್ಯ ಗುಣಮಟ್ಟದ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತದೆ. ಉತ್ತಮ ಗುಣಮಟ್ಟದ ಜೋಳವನ್ನೂ ಇಲ್ಲಿನ ರೈತರು ಬೆಳೆಯುತ್ತಿದ್ದಾರೆ. ಅಲ್ಲದೇ, ಇತ್ತೀಚೆಗೆ ರೇಷ್ಮೆ ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಅಲ್ಲದೇ, ಕೂಡಗಿ ಎನ್.ಟಿ.ಪಿ.ಸಿ ಯಲ್ಲಿಯೂ ಸಹ ಸಾವಿರಾರು ಜನರು ಕೆಲಸ ಮಾಡುತ್ತಿದ್ದು, ವಂದೇ ಭಾರತ ರೈಲು ಸೇವೆ ಪ್ರಾರಂಭಿಸುವುದರಿAದ ಈ ಭಾಗದ ಎಲ್ಲ ರೈತರು, ಜನಸಾಮಾನ್ಯರು, ಅಧಿಕಾರಿಗಳು, ಕಾರ್ಮಿಕರು ಬೆಂಗಳೂರಿಗೆ ಪ್ರಯಾಣಿಸಲು ವರದಾನವಾಗಲಿದೆ.

ಈ ಹಿನ್ನೆಲೆಯಲ್ಲಿ ರೈಲ್ವೆ ಸಚಿವರಾದ ತಾವು ವಿಜಯಪುರ- ಬಾಗಲಕೋಟೆ- ಬೆಂಗಳೂರು ಮಧ್ಯೆ ವಂದೇ ಭಾರತ ರೈಲು ಸೇವೆಯನ್ನು ಪ್ರಾರಂಭಿಸಬೇಕು. ಅಲ್ಲದೇ, ಮುಂಬೈ- ಸೋಲಾಪುರ ಮಧ್ಯೆ ಸಂಚರಿಸುವ ವಂದೇ ಭಾರತ ರೈಲು ಸೇವೆಯನ್ನು ವಿಜಯಪುರ ವರೆಗೆ ವಿಸ್ತರಿಸಲು ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸುತ್ತಿರುವುದಾಗಿ ಸುನೀಲಗೌಡ ಪಾಟೀಲ ಅವರು ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌