ವಿಜಯಪುರ: ಗಾಂಧೀಜಿಯವರ ತತ್ವಗಳನ್ನು ಪಾಲಿಸಿದರೆ ನಮ್ಮ ವ್ಯಕ್ತಿತ್ವವನ್ನು ಉತ್ತಮವಾಗಿ ರೂಪಿಸಿಕೊಳ್ಳಬಹುದು ಎಂದು ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಶಂಕರಗೌಡ ಸೋಮನಾಳ ಹೇಳಿದ್ದಾರೆ.
ನಗರದ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬೆಂಗಳೂರು, ಗಾಂಧಿ ಅಧ್ಯಯನ ಕೇಂದ್ರ, ಎನ್.ಎಸ್.ಎಸ್ ಕೋಶ ಹಾಗೂ ಐಕ್ಯುಎಸಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ ವತಿಯಿಂದ ಗಾಂಧಿ ಸ್ಮಾರಕ ನಿಧಿಯ 75 ನೆಯ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಗಾಂಧಿ ಚಿಂತನೆಗಳ ಮೂಲಕ ಮಾನವೀಯ ಮೌಲ್ಯಗಳು” ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಾಂಧೀಜಿಯವರು ಭಾರತ ಮಾತ್ರವಲ್ಲದೇ ದಕ್ಷಿಣ ಆಫ್ರಿಕಾದಲ್ಲಿನ ವರ್ಣಬೇಧ ನೀತಿಯ ವಿರುದ್ಧ ಧ್ವನಿ ಎತ್ತಿದ್ದರು. ಅಲ್ಲಿ ನಡೆದ ಘಟನೆಗಳು ಅವರ ಮೇಲೆ ಪ್ರಭಾವ ಭಿರಿತ್ತು. ಅವರು ತಮ್ಮ ಜೀವನದುದ್ದಕ್ಕೂ ಸತ್ಯ, ಅಹಿಂಸೆ, ಸಮಾನತೆಯ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದಿದ್ದರು. ಪ್ರಸ್ತುತ ದಿನದಲ್ಲಿ ಮಹಾತ್ಮ ಗಾಂಧೀಜಿಯವರ ತತ್ವಗಳು ಯುವಜನತೆಗೆ ಬಹಳ ಅವಶ್ಯಕವಾಗಿದೆ ಎಂದು ಅವರು ಹೇಳಿದರು.
ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದ, ಸೋಲಾಪುರದ ಪುಣ್ಯಶ್ಲೋಕ ಅಹಲ್ಯಾದೇವಿ ಹೋಲ್ಕರ್ ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯ ಡಾ. ಧನ್ಯಕುಮಾರ್ ಜಿನ್‌ಪಾಲ್ ಬಿರಾಜ್ದಾರ್ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಗಾಂಧೀಜಿಯವರ ವಿಚಾರಧಾರೆಗಳಲ್ಲಿದೆ. ವ್ಯಕ್ತಿ ಯಾವಾಗ ತನಗಾಗಿ ಅಲ್ಲ ಇತರರಿಗಾಗಿ ಬದುಕುತ್ತಾರೆ, ಅದೇ ಮಾನವತಾವಾದ ಅದುವೇ ಗಾಂಧೀಜಿಯವರ ತತ್ವವಾಗಿತ್ತು. ಗಾಂಧೀಜಿಯವರ ತತ್ವ ಮತ್ತು ವಿಚಾರಗಳು ಕೇವಲ ಪುಸ್ತಕಕ್ಕೆ ಮಾತ್ರ ಸೀಮಿತವಾಗಿರದೆ ಅವುಗಳನ್ನು ಜೀವನ ಶೈಲಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಸಮಾರಂಭದ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ರಾಜ್ಯ ಸಂಯೋಜಕಿ, ಡಾ. ಅಬಿದಾ ಬೇಗಂ ಮಾತನಾಡಿ, ಗಾಂಧೀಜಿಯವರು ತಿಳಿಸಿದಂತೆ ಪ್ರತಿಯೊಬ್ಬರ ವಿಚಾರಧಾರೆಗಳು ಉನ್ನತಮಟ್ಟದಲ್ಲಿರಬೇಕು ಮತ್ತು ಜೀವನ ಶೈಲಿಯು ಸರಳವಾಗಿರಬೇಕು ಎಂದು ಹೇಳಿದರು.
ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್. ಎಂ. ಚಂದ್ರಶೇಖರ್ ಮಾತನಾಡಿ, ಗಾಂಧೀಜಿಯವರಿಗೆ ಮಹಾತ್ಮ ಎಂಬ ಹೆಸರು ಹೇಗೆ ಬಂದಿತು ಮತ್ತು ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ಕಳೆದ ದಿನಗಳು ಮತ್ತು ಅವರ ಮೇಲೆ ಹೇಗೆ ಪ್ರಭಾವ ಭೀರಿತು ಎಂದು ವಿದ್ಯಾರ್ಥಿನಿಯರಿಗೆ ತಿಳಿಸಿದರು.
ಈ ಉದ್ಘಾಟನೆ ಕಾರ್ಯಕ್ರಮದಲ್ಲಿ ವಿವಿಯ ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಅಮರನಾಥ ಪ್ರಜಾಪತಿ, ಎನ್.ಎಸ್.ಎಸ್ ಸಂಯೋಜಕಿ ಪ್ರೊ. ಶಾಂತಾದೇವಿ ಟಿ, ಐಕ್ಯುಎಸಿ ನಿರ್ದೇಶಕ ಪ್ರೊ. ಪಿ. ಜಿ. ತಡಸದ, ಕಾರ್ಯಕ್ರಮದ ಸಹ ಸಂಯೋಜಕರಾದ ಅಕ್ಷಯ ಯಾರ್ದಿ, ಉಪಸ್ಥಿತರಿದ್ದರು.
ಈ ವಿಚಾರ ಸಂಕಿರಣದಲ್ಲಿ ಗಾಂಧಿ ವಿಚಾರಧಾರೆಗಳ ಕುರಿತು ಮೂರು ತಾಂತ್ರಿಕ ಗೋಷ್ಠಿಗಳನ್ನು ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ವಿವಿಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ವಿ. ವಿ ಮಳಗಿ, ಡಾ. ಅಬಿದಾ ಬೇಗಂ, ಡಾ. ಓಂಕಾರ ಕಾಕಡೆ, ಉಪನ್ಯಾಸ ನೀಡಿದರು. ಹಿಂದಿ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ. ನಾಮದೇವ ಗೌಡ ಉಪಸ್ಥಿತರಿದ್ದರು.
ಸಿಕ್ಯಾಬ್ ಮಹಿಳಾ ಕಾಲೇಜಿನ ಅಧ್ಯಕ್ಷ ರಿಯಾಜ್ ಫಾರೂಖಿ ಸಮಾರೋಪ ಭಾಷಣ ಮಾಡಿದರು. ಕಾರ್ಯಕ್ರಮ ಸಹ ಸಂಯೋಜಕ ಅಕ್ಷಯ ಯಾರ್ದಿ ಕಾರ್ಯಕ್ರಮದ ವರದಿ ವಾಚಿಸಿದರು. ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಪಕ ಸಂದೀಪ ನಿರೂಪಿಸಿದರು.