ಬೆಂಗಳೂರು: ಗ್ರಾಮೀಣ ಪತ್ರಕರ್ತರಿಗೆ ಅವರ ಜಿಲ್ಲಾದ್ಯಂತ ಸರಕಾರಿ ಬಸ್ಸುಗಳಲ್ಲಿ ಉಚಿತ ಬಸ್ ಪಾಸ್ ಯೋಜನೆಯನ್ನು ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಅವರು ಈ ಬಾರಿಯ ಬಜೆಟ್ ನಲ್ಲಿ ಪ್ರಕಟಿಸಿದ್ದಾರೆ. ಇದರಿಂದಾಗಿ ಕೆಯುಡಬ್ಲ್ಯೂಜೆ ದಶಕಗಳ ಹೋರಾಟಕ್ಕೆ ಫಲ ಸಿಕ್ಕಂತಾಗಿದೆ.
ದಾವಣಗೆರೆಯಲ್ಲಿ ಇದೇ ಫೆ. 3 ಮತ್ತು 4 ರಂದು ನಡನೆದ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(ಕೆಯುಡಬ್ಲ್ಯೂಜೆ) 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಭರವಸೆಯನ್ನು ಈಗ ಈಡೇರಿಸಿದ್ದು, ಸರಕಾರದ ಈ ನಿರ್ಧಾರವನ್ನು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸ್ವಾಗತಿಸಿ ಧನ್ಯವಾದ ಸಲ್ಲಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಮಂಡ್ಯ ಮತ್ತು ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿಯೂ ಉಚಿತ ಬಸ್ ಪಾಸ್ ಬಗ್ಗೆ ಕೆಯುಡಬ್ಲ್ಯುಜೆ ಮಂಡಿಸಿದ್ದ ಹಕ್ಕೊತ್ತಾಯ ಬಗ್ಗೆ ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ನಡೆದುಕೊಂಡಿರುವುದನ್ನು ಕೆಯುಡಬ್ಲ್ಯುಜೆ ಸ್ಮರಿಸಿದ್ದು, ಅಭಿನಂದನೆ ಸಲ್ಲಿಸಿದ್ದಾರೆ.
ಬಸ್ ಪಾಸ್ ಬೇಡಿಕೆ ಈಡೇರಿಸಲು ಸ್ಪಂದಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಎಲ್ಲಾ ಹಂತದಲ್ಲಿಯೂ ಸಹಕಾರ ನೀಡಿದ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರಿಗೂ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘವು ವಿಶೇಷವಾಗಿ ಸ್ಮರಿಸಿರುವ ಅವರು ಕೆಯುಡಬ್ಲ್ಯೂಜೆ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.