ವಿಜಯಪುರ: ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಮಂಡಿಸಿರುವ ಬಜೆಟ್ ನಲ್ಲಿ ಬಸವನಾಡು ವಿಜಯಪುರ ಜಿಲ್ಲೆಗೂ ಭರಪೂರ ಕೊಡುಗೆ ಸಿಕ್ಕಿದೆ.
ವಿಜಯಪುರ ಜಿಲ್ಲೆಗೆ ಸಿಎಂ ನೀಡಿರುವ ಕೊಡುಗೆಗಳು ಏನು ಎಂಬುದರ ಕುರಿತg ಬಜೆಟ್ ನಲ್ಲಿ ನಮೂದಿಸಲಾಗಿರುವ ಅನುಕ್ರಮ ಸಂಖ್ಯೆ ಸಹಿತ ಮಾಹಿತಿ ಇಲ್ಲಿದೆ.
- ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ರಫ್ತನ್ನು ಉತ್ತೇಜಿಸಲು ರಾಜ್ಯದಲ್ಲಿರುವ ವಿಮಾನ ನಿಲ್ದಾಣಗಳ ಹತ್ತಿರದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಇಟ್ಟಂಗಿಹಾಳ ಬಳಿ ಆಹಾರ ಪಾರ್ಕ್ ಸ್ಥಾಪನೆ.
- ತೋಟಗಾರಿಕೆ ಬೆಳೆಗಳಿಗೆ ವಿಜಯಪುರ ಜಿಲ್ಲೆಯು ಹೆಸರುವಾಸಿಯಾಗಿದೆ. ಈ ಭಾಗದಲ್ಲಿ ತೋಟಗಾರಿಕೆ ಬೆಳೆಗಳಿಗೆ ಇನ್ನಷ್ಟು ಉತ್ತೇಜನ ನೀಡಲು ವಿಜಯಪುರ ಜಿಲ್ಲೆಯ ಆಲಮೇಲದಲ್ಲಿ ತೋಟಗಾರಿಕೆ ಕಾಲೇಜನ್ನು ಸ್ಥಾಪಿಸಲಾಗುವುದು.
- ಮೀನುಗಾರಿಕೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಮುಂದಿನ ವರ್ಷಗಳಲ್ಲಿ 3,000 ಕೋಟಿ ರೂ.ಗಳಷ್ಟು ಬೃಹತ್ ಗಾತ್ರದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು;
ವಿಜಯಪುರದ ಆಲಮಟ್ಟಿಯಲ್ಲಿ ಒಳನಾಡು ಮೀನುಗಾರಿಕೆ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆ.
- ಕೃಷಿ ಉತ್ಪನ್ನ ಸಂಸ್ಕರಣೆ, ಮಾರುಕಟ್ಟೆ ಸಂಪರ್ಕ ಮತ್ತು ಮೌಲ್ಯವರ್ಧನೆಯಲ್ಲಿಯೂ ಸಹಕಾರ ವಲಯವು ಪ್ರಮುಖ ಪಾತ್ರ ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೃಷಿ ಮಾರಾಟ ಇಲಾಖೆಯ ಮೂಲಕ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗುವುದು;
ಬಸವನ ಬಾಗೇವಾಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಶೀತಲಗೃಹ ನಿರ್ಮಿಸಲಾಗುವುದು.
- ಉತ್ತರ ಕರ್ನಾಟಕದ ಪ್ರಮುಖ ಯೋಜನೆಯಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಯೋಜನೆಯಡಿಯ ಉಪ ಯೋಜನೆಗಳನ್ನು ಪೂರ್ಣಗೊಳಿಸಲು ಹಾಗೂ ಇದರಡಿ ಭೂಸ್ವಾಧೀನ ಮತ್ತು ಪುನರ್ ವಸತಿ ಹಾಗೂ ಪುನರ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಕೃಷ್ಣಾ ನ್ಯಾಯಾಧಿಕರಣ-2ರ ಅಂತಿಮ ತೀರ್ಪಿನ ಬಾಕಿಯಿರುವ ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದರೊಂದಿಗೆ ಅಗತ್ಯವಿರುವ ಕಾನೂನಾತ್ಮಕ ಕ್ರಮಗಳನ್ನು ಮುಂದುವರೆಸಲಾಗುವುದು.
- ಪ್ರಗತಿಯಲ್ಲಿರುವ ಏತ ನೀರಾವರಿ ಯೋಜನೆ ಬೂದಿಹಾಳ್-ಪೀರಾಪುರ ಹಂತ-1, ಯೋಜನೆಗಳನ್ನು ಈ ವರ್ಷದಲ್ಲಿ ಪೂರ್ಣಗೊಳಿಸಲಾಗುವುದು.
- ಕೃಷ್ಣಾ ಭಾಗ್ಯ ಜಲ ನಿಗಮದಡಿ ಏತ ನೀರಾವರಿ ಯೋಜನೆಗಳಾದ ವಿಜಯಪುರ ಜಿಲ್ಲೆಯ ಹೊರ್ತಿ-ರೇವಣಸಿದ್ದೇಶ್ವರ, ಚಿಮ್ಮಲಗಿ, ಮುಳವಾಡ, ಅನುಷ್ಠಾನಗೊಳಿಸಲಾಗುವುದು. ಈ ಯೋಜನೆಗಳಿಂದ ಬಾಧಿತ ಅಚ್ಚುಕಟ್ಟು ಪ್ರದೇಶವೂ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ.
- ರಾಜ್ಯದಲ್ಲಿ ತೀವ್ರ ಅಸ್ವಸ್ಥತೆಯಿಂದ ಬಳಲುತ್ತಿರುವ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಿ ಪ್ರಾಣ ಉಳಿಸುವ ಉದ್ದೇಶದಿಂದ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಆಧುನಿಕ ಕ್ರಿಟಿಕಲ್ ಕೇರ್ ಬ್ಲಾಕ್ಗಳನ್ನು ಸ್ಥಾಪಿಸಲಾಗುವುದು. ಈಗಾಗಲೇ 15 ಜಿಲ್ಲೆಗಳಲ್ಲಿ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲಾಗಿದ್ದು, ಈ ವರ್ಷದಲ್ಲಿ ವಿಜಯಪುರದಲ್ಲಿ ಕಟ್ಟಡ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು.
- ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳೊಂದಿಗೆ ಸಂಪರ್ಕ ಸಾಧಿಸುವ ದೃಷ್ಟಿಯಿಂದ 1600 ಕೋಟಿ ರೂ. ವೆಚ್ಚದಲ್ಲಿ ವಿವಿಧ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ವಿಜಯಪುರದಲ್ಲಿ ರೂ. 350 ಕೋ. ವೆಚ್ಚದಲ್ಲಿ ವಿಮಾನ ನಿಲ್ದಾಣ ಕಾಮಗಾರಿಯು ಮುಕ್ತಾಯ ಹಂತದಲ್ಲಿದ್ದು, ಶೀಘ್ರವೇ ಕಾರ್ಯಾಚರಣೆ ಪ್ರಾರಂಭವಾಗಲಿದೆ. ಸಿಎಂ ಎಸ್. ಸಿದ್ಧರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ಈ ಯೋಜನೆಗೆ ರೂ. 94 ಕೋ. ಬಿಡುಗಡೆ ಮಾಡಿದೆ.
- 12ನೇ ಶತಮಾನದಲ್ಲಿ ಸಾಮಾಜಿಕ ಮತ್ತು ಲಿಂಗ ಸಮಾನತೆಗಾಗಿ ಮತ್ತು ವರ್ಗಬೇಧ ಹಾಗೂ ವರ್ಣಬೇಧ ವಿರುದ್ಧವಾಗಿ ಶೋಷಿತ ವರ್ಗದ ಜನರಲ್ಲಿ ಆತ್ಮಸ್ಥೈರ್ಯವನ್ನು ತುಂಬಿ, ಸಮಾಜೋಧಾರ್ಮಿಕ ಕ್ರಾಂತಿಯನ್ನು ಮಾಡಿದ ಶ್ರೇಯಸ್ಸು ವಿಶ್ವಗುರು ಬಸವಣ್ಣನವರಿಗೆ ಸಲ್ಲುತ್ತದೆ. ಜಗತ್ತಿನಲ್ಲಿ ಪ್ರಜಾಪ್ರಭುತ್ವಕ್ಕೆ ಅನುಭವ ಮಂಟಪ ಸ್ಥಾಪನೆ ಮೂಲಕ ಬುನಾದಿಯನ್ನು ಶ್ರೀ ಬಸವೇಶ್ವರರು ಹಾಕಿರುವುದು ಕನ್ನಡಿಗರು ಮತ್ತು ಭಾರತೀಯರ ಹೆಮ್ಮೆಯಾಗಿದೆ. ಇಂತಹ ಅಪೂರ್ವ ವ್ಯಕ್ತಿತ್ವದ ವಿಶ್ವಗುರು ಜಗಜ್ಯೋತಿ ಬಸವಣ್ಣನವರನ್ನು ರಾಜ್ಯ ಸರಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಎಲ್ಲಾ ಸರ್ಕಾರಿ ಕಛೇರಿಗಳಲ್ಲಿರುವ ವಿಶ್ವಗುರು ಜಗಜ್ಯೋತಿ ಬಸವಣ್ಣನವರ ಭಾವ ಚಿತ್ರದಲ್ಲಿ ವಿಶ್ವಗುರು ಬಸವಣ್ಣ – ಸಾಂಸ್ಕೃತಿಕ ನಾಯಕ ಎಂದು ಮುದ್ರಿಸಲಾಗುವುದು.
- 12ನೇ ಶತಮಾನದಲ್ಲಿ ಬಸವಾದಿ ಶರಣರು ಸಮ ಸಮಾಜದ ನಿರ್ಮಾಣಕ್ಕೆ ಬುನಾದಿ ಹಾಕಿದರು. ಇವರು ತಮ್ಮ ವಚನ ಸಾಹಿತ್ಯದ ಮೂಲಕ ಕಾಯಕ – ದಾಸೋಹದ ತತ್ವವನ್ನು ಪ್ರಸಾರ ಮಾಡಿದರು. ಈ ಹಿನ್ನೆಲೆಯಲ್ಲಿ ಶರಣರ ಜೀವನ ಚರಿತ್ರೆ, ಅವರು ನಡೆದು ಬಂದ ದಾರಿ ಮತ್ತು ವಚನ ಸಾಹಿತ್ಯ ಕುರಿತು ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
- ಬಸವಣ್ಣನವರ ಬದುಕು, ಸಂದೇಶ, ಚಿಂತನೆಯನ್ನು ವ್ಯಾಪಕವಾಗಿ ಪ್ರಚುರಪಡಿಸುವ ನಿಟ್ಟಿನಲ್ಲಿ ಸರ್ವ ಧರ್ಮ ಸಂಸತ್ತನ್ನು ಬಸವ ಜಯಂತಿಯಂದು ಆಯೋಜಿಸಲಾಗುವುದು.
- ಬಸವಣ್ಣನವರ ಜನ್ಮಸ್ಥಳವಾದ ಬಸವನಬಾಗೇವಾಡಿಯ ಅಭಿವೃದ್ಧಿಗೆ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗುವುದು.
- ರಾಜ್ಯದಲ್ಲಿ ನಾನಾ ಕ್ರೀಡೆಗಳನ್ನು ಪ್ರೋತ್ಸಾಹಿಸಲು ಹಾಗೂ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ವಿಜಯಪುರದಲ್ಲಿ ಸೈಕ್ಲಿಂಗ್ ಅಕ್ಯಾಡೆಮಿ ಸೇರಿದಂತೆ ರೈಫಲ್ ಶೂಟಿಂಗ್ ಅಸೋಸಿಯೇಷಶ್, ಹಾಕಿ ಕರ್ನಾಟಕ, ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಶನ್, ಎಥ್ಲೆಟಿಕ್ ಅಸೋಸಿಯೇಷನ್, ಕಾಯ್ಕಿಂಗ್ ಮತ್ತು ಕ್ಯಾನೊಯಿಂಗ್ ಅಕ್ಯಾಡೆಮಿ, ಫೆನ್ಸಿಂಗ್ ಅಸೋಸಿಯೇಷನ್ ಗಳಿಗೆ ಒಟ್ಟು ರೂ. 12 ಕೋ. ಅನುದಾನ ನೀಡಲಾಗುವುದು.
- ವಿಜಯಪುರದಲ್ಲಿ ಕರೇಜ್ ಎಂದು ಪ್ರಸಿದ್ಧವಾಗಿರುವ ಪುರಾತನ ನೀರು ಸರಬರಾಜು ವ್ಯವಸ್ಥೆಯನ್ನು ನುರಿತ ಸಂಸ್ಥೆಗಳ ತಾಂತ್ರಿಕ ನೆರವಿನೊಂದಿಗೆ ಬೀದರ ಜಿಲ್ಲೆಯೂ ಸೇರಿದಂತೆ ಒಟ್ಟು ರೂ. 15 ಕೋ. ವೆಚ್ಚದಲ್ಲಿ ಪುನಶ್ಚೇತನಗೊಳಿಸಲಾಗುವುದು.
ಇವು ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ 2024-25ನೇ ಆರ್ಥಿಕ ವರ್ಷದ ಬಜೆಟ್ ನಲ್ಲಿ ಘೋಷಣೆ ಮಾಡಿರುವ ಪ್ರಮುಖ ಯೋಜನೆಗಳಾಗಿವೆ.