ವಿಜಯಪುರ: ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಮಂಡಿಸಿರುವ ಆಯವ್ಯಯ ಶ್ವೇತಪತ್ರವನ್ನೊಳಗೊಂಡ ಬಜೆಟ್ ಆಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ವಿಜಯಪುರ ನಗರದ ಹೊರವಯದಲ್ಲಿ ಭೂತ್ನಾಳ ಕೆರೆ ಬಳಿ ಇರುವ ತಿಡಗುಂದಿ ವಯಾಡಕ್ಟ್ ಮೂಲಕ ಕೆರೆಗೆ ನೀರು ಹರಿಸುವ ಸಿದ್ಧತೆ ಪರಿಶೀಲಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಸಿಎಂ ತಮ್ಮ 15 ನೇ ಬಾರಿ ಬಜೆಟ್ ಮಂಡಿಸಿದ್ದಾರೆ. ಇದು ಸಾಮಾಜಿಕ ಹಾಗೂ ಅಭಿವೃದ್ದಿ ಸರಿದೂಗಿಸುವ ಬಜೆಟ್ ಆಗಿದೆ. ಐದು ಗ್ಯಾರಂಟಿಗಳು ಸೇರಿದಂತೆ ಎಲ್ಲಾ ಇಲಾಖೆಗಳಿಗೆ ಹಣ ಒದಗಿಸಲಾಗಿದೆ. ಕೇಂದ್ರ ಸರಕಾರದ ಅನ್ಯಾಯದ ಮಧ್ಯೆ ಉತ್ತಮ ಬಜೆಟ್ ನೀಡಲಾಗಿದೆ. ನಾವು ರಾಜ್ಯಕ್ಕೆ ಆದ ಅನ್ಯಾಯದ ವಿರುದ್ದ ದೆಹಲಿಗೆ ಹೋಗಿ ಪ್ರತಿಭಟನೆ ಮಾಡ ಬಂದಿದ್ದೇವೆ. 14ನೇ ಹಣಕಾಸು ಆಯೋಗದಿಂದ 15ನೇ ಹಣಕಾಸು ಆಯೋಗದಲ್ಲಿ ಅನುದಾನ ಹೆಚ್ಚಾಗಬೇಕಿತ್ತು. ರೂ. 62000 ಕೋ. ಕಡಿಮೆ ಬಂದಿದೆ. ಈ ಬಾರಿ ಬಜೆಟ್ ಗಾತ್ರ ಹೆಚ್ಚಾಗಿದ್ದರೂ ಕೂಡ ಕೇಂದ್ರದಿಂದ ಹಣ ಬಂದಿಲ್ಲ. ಸಿಎಂ ಬಜೆಟ್ ಮೂಲಕ ಶ್ವೇತ ಪತ್ರ ಹೊರಡಿಸಿದ್ದಾರೆ. ಹೀಗಾಗಿ ಬಜೆಟ್ ಮಂಡನೆಯಲ್ಲಿ ಬಿಜೆಪಿಯವರು 10 ನಿಮಿಷ ಕೂಡಲಿಲ್ಲ. ಕೇಂದ್ರದ ಬಂಡವಾಳ ಹೊರ ಬರುತ್ತದೆ ಎಂದು ಪಲಾಯನ ಮಾಡಿ ಓಡಿ ಹೋದರು ಎಂದು ಸಚಿವರು ವಾಗ್ದಾಳಿ ನಡೆಸಿದರು.
ಬಿಜೆಪಿ ವಿರುದ್ಧ ವಾಗ್ದಾಳಿ
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿಯ ಸಂಸದರು ಕೇಂದ್ರಕ್ಕೆ ಹೋಗಿ ಬಾಯಿ ತೆಗೆಯುವ ತಾಕತ್ತಿಲ್ಲ. ಇತ್ತ ವಿಧಾನ ಸಭೆಯಲ್ಲಿ ಬಿಜೆಪಿ ಶಾಸಕರಿಗೆ ಕುಳಿತು ಕೇಳುವ ತಾಳ್ಮೆಯಿಲ್ಲ. ಪಲಾಯನವಾದ ಮಾಡಿದ್ದಾರೆ. ವಿಧಾನ ಸಭೆಯ ಹೊರಗೆ ಹಾಡುವ ಬದಲು ಒಳಗೆ ಹಾಡಬೇಕಿತ್ತು. ಅದನ್ನು ಬಿಟ್ಟು ಹೊರಗಡೆ ಹೋಗಿ ಏನಿಲ್ಲ ಏನಿಲ್ಲ ಎಂದು ಹಾಡು ಹಾಡಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
ಬಜೆಟ್ ನಲ್ಲಿ ಬೆಂಗಳೂರು ಅಭಿವೃದ್ದಿ ಹಿಡಿದು ಸಮಗ್ರ ಅಭಿವೃದ್ದಿಗೆ ಒತ್ತು ನೀಡಲಾಗಿದೆ. ವಿಜಯಪುರ ಜಿಲ್ಲೆಗೂ ಬಜೆಟ್ ನಲ್ಲಿ ಕೊಡುಗೆ ನೀಡಲಾಗಿದೆ. ಧಾರವಾಡದಲ್ಲಿ ರೂ. 6000 ಕೋ. ವೆಚ್ಚದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ವತಿಯಿಂದ ಜಂಟಿಯಾಗಿ ಕೈಗಾರಿಕೆ ವಲಯ ಸ್ಥಾಪನೆ ಮಾಡಲಾಗುತ್ತದೆ. ಈ ಬಾರಿಯ ಬಜೆಟ್ ಆರ್ಥಿಕ ಶಿಸ್ತನನ್ನು ಮೀರಿಲ್ಲ. ಕೇಂದ್ರದ ಹಣ ರಾಜ್ಯಕ್ಕೆ ಬರದ ಕಾರಣ ಕೊರತೆ ಬಜೆಟ್ ಆಗಿದೆ. ಸಾಲ ಆಗಲೂ ಸಹ ಕೇಂದ್ರ ಹಣ ನೀಡದ ಕಾರಣ ಹೀಗಾಗಿದೆ. ಈ ಎಲ್ಲದಕ್ಕೂ ಕೇಂದ್ರ ಸರಕಾರ, ನರೇಂದ್ರ ಮೋದಿ ಕಾರಣ ಎಂದು ಅವರು ವಾಗ್ದಾಳಿ ನಡೆಸಿದರು.
ಬಿ. ಎಸ್. ಯಡಿಯೂರಪ್ಪ ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಳ್ಳಲಿ
ಸಿಎಂ ಮಂಡಿಸಿದ ಬಜೆಟ್ ಕಳಪೆ ಬಜೆಟ್ ಯಾಗಿದೆ ಎಂದು ಹೇಳಿಕೆ ನೀಡಿರುವ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಯಡಿಯೂರಪ್ಪ ಸಿಎಂ ಆಗಿದ್ದಾಗ 606 ಭರವಸೆ ನೀಡಿದ್ದರು. ಅದರಲ್ಲಿ 50 ಭರವಸೆಗಳನ್ನು ಮಾತ್ರ ಅಂದರೆ ಶೇ. 10ಕ್ಕಿಂತಲೂ ಕಡಿಮೆ ಭರವಸೆ ಈಡೇರಿಸಿದ್ದಾರೆ. 2013ರಲ್ಲಿ ಎಸ್. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನೀಡಿದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಲಾಗಿದೆ. ಅಲ್ಲದೇ, 30 ಯೋಜನೆ ಜಾರಿ ಮಾಡಿದ್ದೇವೆ. ಈಗ ಐದು ಗ್ಯಾರಂಟಿಗಳ ಭರವಸೆ ನೀಡಿ ಅವುಗಳನ್ನು ಈಡೇರಿಸಿದ್ದೇವೆ. ಅದನ್ನು ತಿಳಿದುಕೊಳ್ಳುವ ಬದಲು ಟೀಕೆ ಮಾಡುತ್ತಿರುವ ಯಡಿಯೂರಪ್ಪ ಕನ್ನಡಿಯಲ್ಲಿ ಮೊದಲು ತಮ್ಮ ಮುಖ ನೋಡಿಕೊಳ್ಳಲಿ ಎಂದು ಅವರು ಖಾರವಾಗಿ ಪ್ರತಿಕ್ರಿಯೆ ನೀಡಿದರು.
ಬಿ. ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾಗ ರೂ. 1.50 ಲಕ್ಷ ಕೋ. ಹಣವನ್ನು ಕೃಷ್ಣಾ ಮೇಲ್ದಂಡೆ ಯೋಜನೆಗೆ ನೀಡುವುದಾಗಿ ರಕ್ತದಲ್ಲಿ ಬರೆದು ಕೊಡುವೆ ಎಂದು ಹುಬ್ಬಳ್ಳಿಯಲ್ಲಿ ಹೇಳಿದ್ದರು. ಆದರೆ, ಎಲ್ಲಿ ಕೊಟ್ಟರು? ಎಂದು ಪ್ರಶ್ನಿಸಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್ವಸತಿ ಮತ್ತು ಪುನರ್ ರ್ನಿರ್ಮಾಣ ವಿಚಾರದಲ್ಲಿ ಸಿಎಂ ಜೊತೆಗೆ ಸಭೆ ನಡೆಸುತ್ತೇವೆ. ಈ ನಿಟ್ಟಿನಲ್ಲಿ ಸಿಎಂ ಸಭೆ ಕರೆಯುತ್ತಾರೆ. 5 ವರ್ಷ 8 ವರ್ಷ ಹಂತದ ಯೋಜನೆ ಮಾಡುತ್ತೇವೆ. ಅದಕ್ಕೂ ಮುನ್ನ ಕೇಂದ್ರ ಸರಕಾರ ಕೃಷ್ಣಾ ನ್ಯಾಯಾಧೀಕರಣದ ಐ-ತೀರ್ಪಿನ ಕುರಿತು ಗೆಜೆಟ್ ನೊಟೀಫಿಕೇಷನ್ ಮಾಡಿಸಲಿ ಎಂದು ಅವರು ಕೇಂದ್ರ ಸರಕಾರವನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ಮಹಾನಗರಪಾಲಿಕೆ ಉಪಮೇಯರ್ ದಿನೇಶ ಹಳ್ಳಿ, ಮುಖಂಡರಾದ ಅಬ್ದುಲ್ ರಜಾಕ್ ಹೊರ್ತಿ ಮುಂತಾದವರು ಉಪಸ್ಥಿತರಿದ್ದರು.