ಬಾಗಲಕೋಟೆ: 20 ವರ್ಷಗಳ ಹಿಂದೆ ತಮಗೆ ವಿದ್ಯೆ ಬೋಧಿಸಿದ ಶಿಕ್ಷಕರನ್ನು ಮೆರವಣಿಗೆಯಲ್ಲಿ ಕರೆತಂದ ಶಿಷ್ಯಂದಿರು ಗುರುವಂದನೆ ಸಲ್ಲಿಸಿದ ಕಾರ್ಯಕ್ರಮ ಬಾಗಲಕೋಟೆ ತಾಲೂಕಿನ ರಾಂಪೂರದಲ್ಲಿರುವ ಸರಕಾರಿ ಪ್ರೌಢಶಾಲೆ ಸೀತಿಮನಿ ಆರ್. ಎಸ್. ಶಾಲೆಯಲ್ಲಿ ನಡೆಯಿತು.
ಈ ಶಾಲೆಯಲ್ಲಿ 2003-04ರಲ್ಲಿ ಎಸ್.ಎಸ್.ಎಲ್.ಸಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಈ ಅರ್ಥಪೂರ್ಣ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಆಯೋಜಿಸಿ ಗಮನ ಸೆಳೆದರು. ಕಾರ್ಯಕ್ರಮ ಪ್ರಾರಂಭಕ್ಕೂ ಮುಂಚೆ ಊರಿನ ಪ್ರಮುಖ ಬೀದಿಗಳಲ್ಲಿ ಶಿಕ್ಷಕರನ್ನು ಅದ್ಧೂರಿಯಾಗಿ ಮೆರವಣಿಗೆ ಮೂಲಕ ಶಾಲೆಗೆ ಕರೆತರಲಾಯಿತು. ಈ ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳ ಸಂಭ್ರಮ ಇಮ್ಮಡಿಗೊಳಿಸಿತ್ತು.
ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಬಾಗಲಕೋಟೆಯ ಮಾಜಿ ಬಿಇಓ ಎನ್. ಬಿ. ಗೊರವರ, ಸಾಧನೆಗೆ ಗುರಿಯ ಜೊತೆಗೆ ಸೂಕ್ತವಾಗಿ ಮಾರ್ಗದರ್ಶನ ಮಾಡಲು ಗುರುವಿನ ಅಗತ್ಯವಿದೆ. ಇವೆರಡೂ ಕೂಡಿದಾಗ ಅಂದುಕೊಂಡಿದ್ದನ್ನು ಸಾಧಿಸುವುದು ಕಷ್ಟವಾಗಲಾರದು. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಗುರುವಿನ ಪಾತ್ರ ಮಹತ್ವದ್ದಾಗಿದೆ. ಸಹಾಯ ಮಾಡಿದವರನ್ನು ಮರೆಯುವವರು ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಹಳೆಯ ವಿದ್ಯಾರ್ಥಿಗಳೆಲ್ಲರೂ ಒಂದೆಡೆ ಸೇರಿ ಇಂಥ ಕಾರ್ಯಕ್ರಮ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಎಸ್. ಎಚ್. ಗಣತಿ ಮಾತನಾಡಿ, ಕಲಿತ ಶಾಲೆ, ಕಲಿಸಿದ ಗುರುಗಳು, ವಿದ್ಯೆ ನೀಡಿದ ತಂದೆ, ತಾಯಿ, ಕಷ್ಟದಲ್ಲಿ ಜೊತೆ ನಿಲ್ಲುವ ಸ್ನೇಹಿತ ಇವರನ್ನು ಜೀವನದಲ್ಲಿ ಮರೆಯಬಾರದು ಎಂದು ಹೇಳಿದರು.
ಉಪನ್ಯಾಸಕಿ ಎಸ್. ಕೆ. ನಾಯನೇಗಲಿ ಮಾತನಾಡಿ, ಶಿಕ್ಷಕರಿಗೆ ಅವರ ಶಿಷ್ಯಂದಿರು ತೋರುವ ಪ್ರೀತಿ, ಆದರದ ವಿಶ್ವಾಸಗಳೇ ಸರ್ವಶ್ರೇಷ್ಠ ಪ್ರಶಸ್ತಿಗಳು. ಶಿಷ್ಯರು ಗುರುವನ್ನು ಮೀರಿಸುವ ಮಟ್ಟಕ್ಕೆ ಬೆಳೆದಾಗ ಶಿಕ್ಷಕರ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕ ಕೆ. ಬಿ. ಕುಲಕರ್ಣಿ, ಆರ್. ಕೆ. ಗೋಗಿ, ಜಿ. ಎಚ್. ಹಿರೇಮಠ, ಎಸ್. ಬಿ. ಹುಲ್ಯಾಳ, ಆರ್. ಟಿ. ಬಾಳಕನ್ನವರ, ಎಲ್. ಸಿ. ಮುಂಡೆವಾಡಿ, ಆರ್. ಜಿ. ಕುರಹಟ್ಟಿ, ಎಂ. ವೈ. ವಾಸನದ, ಆರ್. ಜಿ. ಬಂಟನೂರ, ಜಿ. ಎಚ್. ಮುಂಡೆವಾಡಿ, ಆರ್. ಎಸ್. ನಾಯಕ, ಆರ್. ಆರ್. ಚವ್ಹಾಣ, ವೈ. ಕೆ. ಲಮಾಣಿ, ಶರಣಮ್ಮ ಎಂ. ಬಸರಕೋಡ, ಪರ್ವತೇಶ ಪರ್ವತಿಕರ ಸೇರಿದಂತೆ ಇತರ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಗೂಳೇಶ ಕೋತಿನ, ರೇಣುಕಾ ಅಂಗಡಿ, ಜಗದೀಶ ಲಮಾಣಿ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಶಾಲೆಯ ಹಳೆಯ ವಿದ್ಯಾರ್ಥಿ ಮತ್ತು ಈಗಿನ ಶಿಕ್ಷ ಶಿಕ್ಷಕ ಗಿರೀಶ ಕೊಣ್ಣೂರ ನಿರೂಪಿಸಿದರು.