ಕುಡಿಯುವ ನೀರು ಪೂರೈಸಲು 1.80 ಟಿಎಂಸಿ ನೀರು ಬಿಡುಗಡೆ- ಟೇಲ್ ಎಂಡ್ ವರೆಗೆ ತಲುಪಿಸಲು ಕ್ರಮ ಕೈಗೊಳ್ಳಿ- ಡಿಸಿ ಟಿ. ಭೂಬಾಲನ್

ವಿಜಯಪುರ: ಆಲಮಟ್ಟಿ ಜಲಾಶಯದಿಂದ ಫೆ.19ರಿಂದ ಮಾರ್ಚ 10ರವರೆಗೆ ಮುಳವಾಡ ಏತ ನೀರಾವರಿಯ ಹಾಗೂ ಚಿಮ್ಮಲಗಿ ಏತ ನೀರಾವರಿ ಕಾಲುವೆ ವ್ಯಾಪ್ತಿಯ 96 ಕೆರೆಗೆಳಿಗೆ 1.8 ಟಿಎಂಸಿ ನೀರು ಕುಡಿಯುವ ಉದ್ಧೇಶಕ್ಕಾಗಿ ನೀರು ಹರಿಸಲಾಗುತ್ತಿದ್ದು, ಕೊನೆಯಂಚಿನವರೆಗೆ ಸಮರ್ಪಕವಾಗಿ ನೀರು ಹರಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ್ ಕಚೇರಿಯಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ನಡೆದ ನೀರು ನಿರ್ವಹಣೆ ಸಭೆಯಲ್ಲಿ ಮಾತನಾಡಿದ ಅವರು, ಜನ-ಜಾನುವಾರುಗಳಿಗೆ ಕುಡಿಯುವ ಉದ್ದೇಶಕ್ಕಾಗಿ ನೀರು ಹರಿಸಲಾಗುತ್ತಿದ್ದು, ಅನ್ಯ ಉದೇಶಕ್ಕಾಗಿ ಬಳಸದೇ ಇರುವಂತೆ ನೋಡಿಕೊಂಡು ಕಾಲುವೆ ಜಾಲದ ವ್ಯಾಪ್ತಿಯಲ್ಲಿ ಬರುವ ಕೆರೆಗಳು ಪೂರ್ಣ ಭರ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಕಾಲುವೆಯ ಮಾರ್ಗಗಳ ನಿರ್ವಹಣೆಯನ್ನು ಆಯಾ ತಾಲೂಕಿನ ತಹಸೀಲ್ದಾರಗಳು ತಂಡಗಳನ್ನು ರಚಿಸಿಕೊಂಡು ನಿಗಾ ವಹಿಸಬೇಕು.  ಪ್ರತಿಯೊಂದು ಪಂಚಾಯಿತಿ ವ್ಯಾಪಿಯಲ್ಲಿ ಬರುವ ಹಳ್ಳಿಗಳಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ನೀರು ಹರಿಸಲಾಗಿದೆ. ಅನ್ಯ ಚಟುವಟಿಕೆಗಳಿಗೆ ಬಳಸದಂತೆ ಡಂಗೂರ ಸಾರಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು.  ಪಾಳಿಯಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಿ ನಿಗಾ ವಹಿಸಬೇಕು.  ಇದಕ್ಕಾಗಿ ತಂಡ ರಚಿಸಿಕೊಂಡು ಕೊನೆಯ ಭಾಗದವರೆಗೆ ನೀರು ತಲುಪಿಸಲು ಸಂಬಂಧಿಸಿದ ಇಲಾಖೆಯವರು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು.  ವಿಜಯಪುರ ನಗರಕ್ಕೆ ಕುಡಿಯುವ ನೀರು ಪೂರೈಸಲು ಆದ್ಯತೆ ಮೇಲೆ ಭೂತನಾಳ ಕೆರೆ ತುಂಬಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.

ವಿಜಯಪುರದಲ್ಲಿ ಡಿಸಿ ಟಿ. ಭೂಬಾಲನ್ ಅವರು ಕುಡಿಯುವ ನೀರು ಪೂರೈಕೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ನೀರು ಪೋಲಾಗದಂತೆ ಹಾಗೂ ಕೆರೆಯ ಕೊನೆ ಅಂಚಿಗೆ ನೀರು ತಲುಪುವಂತೆ ವಿಜಯಪುರ ಹಾಗೂ ಇಂಡಿ ವಿಭಾಗದ ಉಪ ವಿಭಾಗಧಿಕಾರಿಗಳು ಮೇಲುಸ್ತುವಾರಿ ನೋಡಿಕೊಳ್ಳÀಬೇಕು. ಪ್ರತಿ ದಿನದ ವರದಿಯನ್ನು ಚಿತ್ರ ಸಮೇತ ಜಿಲ್ಲಾಡಳಿತದ ಗಮನಕ್ಕೆ ತರಬೇಕು. ಒಟ್ಟು 96 ಕೆರೆಗಳಿಗೆ ನೀರಿನ ಅವಶ್ಯಕತೆ ಇದೆ. ಅವುಗಳನ್ನು ತುಂಬಿಸುವಲ್ಲಿ ಗ್ರಾಮ ಪಂಚಾಯತ್ ಅಧಿಕಾರಿ, ಸಣ್ಣ ನೀರಾವರಿ ಇಲಾಖೆ, ತಾಲೂಕು ಪಂಚಾಯತ್ ಇಓ, ಪೊಲೀಸ್ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಡಿಸಿ ಹೇಳಿದರು.

ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಆಯಾ ಪ್ರದೇಶದ ಮಾಹಿತಿ ಹೊಂದಿರುವ ಹಿನ್ನಲೆಯಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಬೇಕು. ಈ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಉದ್ಭವವಾದರೆ ಜಿಲ್ಲಾಡಳಿತವನ್ನು ಸಂಪರ್ಕಿಸಬೇಕು ಎಂದು ಅವರು ಹೇಳಿದರು.

ಈ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ, ಎಸ್ಪಿ ರಿಷಿಕೇಶ್ ಸೋನಾವಣೆ, ಪ್ರೋಬೇಷನರ್ ಐಪಿಎಸ್ ಅಧಿಕಾರಿ ಶಾಲೂ, ಡಿವೈಎಸ್ಪಿ ಬಸವರಾಜ ಎಲಿಗಾರ, ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ವಿಜಯಪುರ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಇಂಡಿ ಉಪಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಸೇರಿದಂತೆ ನಾನಾ ತಾಲೂಕಿನ ತಹಸೀಲ್ದಾರ, ತಾ. ಪಂ. ಕಾರ್ಯ ನಿರ್ವಹಣಾಧಿಕಾರಿಗಳು, ನಾನಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ನಿಷೇಧಾಜ್ಞೆ ಜಾರಿ ಮಾಡಿದ ಡಿಸಿ ಟಿ. ಭೂಬಾಲನ್

ಆಲಮಟ್ಟಿ ಜಲಾಶಯದಿಂದ ಫೆ. 19ರಿಂದ ಮಾರ್ಚ 10ರ ವರೆಗೆ ಕುಡಿಯಲು ನೀರು ಪೂರೈಸುವ ಉದ್ದೇಶದಿಂದ ಮುಳವಾಡ ಏತ ನೀರಾವರಿ ಮತ್ತು ಚಿಮ್ಮಲಗಿ ಏತ ನೀರಾವರಿ ಕಾಲುವೆ ವ್ಯಾಪ್ತಿಯ 96 ಕೆರೆಗೆಳಿಗೆ 1.80 ಟಿಎಂಸಿ ನೀರು ಹರಿಸಲಾಗುತ್ತಿದೆ.  ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕಾಲುವೆಗಳ ಎಡ ಮತ್ತು ಬಲ ಭಾಗದ 100 ಅಡಿ ವ್ಯಾಪ್ತಿಯಲ್ಲಿ ಕಲಂ144ರ ಅನ್ವಯ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಟಿ. ಭೂಬಾಲನ್ ಆದೇಶ ಹೊರಡಿಸಿದ್ದಾರೆ.

Leave a Reply

ಹೊಸ ಪೋಸ್ಟ್‌