ವ್ಯಾನಿಟಿ ಬ್ಯಾಗ್ ಗಳಿಗೆ ಕನ್ನ ಹಾಕುತ್ತಿದ್ದ ಮೂರು ಜನ ಕಳ್ಳಿಯರ ಬಂಧಿಸಿದ ಗಾಂಧಿಚೌಕ್ ಪೊಲೀಸರು- ಚಿನ್ನಾಭರಣ ವಶ

ವಿಜಯಪುರ: ನಗರ ಕೇಂದ್ರ ಮತ್ತು ಸೆಟಲೈಟ್ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ವ್ಯಾನಿಟಿ ಬ್ಯಾಗ್ ಗೆ ಕನ್ನ ಹಾಕಿ ಚಿನ್ನಾಭರಣ ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಗಾಂಧಿಚೌಕ್ ಪೊಲೀಸರು ಮೂರು ಜನ ಅಂತರ್ ಜಿಲ್ಲಾ ಕಳ್ಳಿಯರನ್ನು ಬಂಧಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಎಸ್ಪಿ ಋಷಿಕೇಶ ಸೋನಾವಣೆ, ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್ಸುಗಳನ್ನು ಹತ್ತುವಾಗ ಅವರ ವ್ಯಾನಿಟಿ ಬ್ಯಾಗಗಳಲ್ಲಿನ ಚಿನ್ನಾಭರಣ ಕಳ್ಳತನವಾದ ಕುರಿತು ಐದು ಪ್ರಕರಣಗಳು ದಾಖಲಾಗಿದ್ದವು.  ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ, ವಿಜಯಪುರ ನಗರ ಡಿವೈಎಸ್ಪಿ ಬಸವರಾಜ ಯಲಿಗಾರ ಅವರ ಮಾರ್ಗದರ್ಶನದಲ್ಲಿ ಗಾಂಧಿಚೌಕ್ ಸಿಪಿಐ ಮಹಾಂತೇಶ ಕೆ. ದಾಮಣ್ಣನವರ ನೇತೃತ್ವದಲ್ಲಿ ಒಂದು ತನಿಖಾ ತಂಡ ರಚಿಸಲಾಗಿತ್ತು.  ಈ ಪೊಲೀಸ್ ಅಧಿಕಾರಿಗಳ ತಂಡ ಅಂತಾರಾಜ್ಯ ಕಳ್ಳರ ಮಾಹಿತಿ ಸಂಗ್ರಹಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಫೆ. 22 ರಂದು ವಿಜಯಪುರ ನಗರದ ಸೆಟಲೈಟ್ ಬಸ್ ನಿಲ್ದಾಣದಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಮೂರು ಜನ ಮಹಿಳೆಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ನಡೆಸಿರುವ ಕುರಿತು ಮಾಹಿತಿಯನ್ನು ಬಾಯಿಬಿಟ್ಟಿದ್ದಾರೆ.  ಅಲ್ಲದೇ, ವಿಜಯಪುರ ಕೇಂದ್ರ ಬಸ್ ನಿಲ್ದಾಣ, ಸೆಟಲೈಟ್ ಬಸ್ ನಿಲ್ದಾಣ ಮತ್ತು ಗೋದಾವರಿ ತರಕಾರಿ ಬಜಾರನಲ್ಲಿ ವ್ಯಾನಿಟಿ ಬ್ಯಾಗ್ ತೆಗೆದು ಐದು ಕಳ್ಳತನ ಪ್ರಕರಣಗಳಲ್ಲಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಬಂಧಿತ ಆರೋಪಿಗಳೆಲ್ಲರೂ ಕಲಬುರಗಿ ನಗರದವರಾಗಿದ್ದು, ಕಲಬುರಗಿಯ ಬಾಪು ನಗರದ ತರಕಾರಿ ವ್ಯಾಪಾರಿ ಗಂಗುಬಾಯಿ ನಾರಾಯಣ ಕಾಳೆ(56) ಒಟ್ಟು ನಾಲ್ಕು ಪ್ರಕರಣ, ಬಾಪು ನಗರದವಳೇ ಆದ ಸ್ವೇಟರ್ ವ್ಯಾಪಾರ ಮಾಡುವ ನರಸಮ್ಮ ಅಮೀತಕುಮಾರ ಪಾಟೀಲ ಉರ್ಫ್ ಸಕಟ(44) ಒಟ್ಟು ನಾಲ್ಕು ಪ್ರಕರಣ ಹಾಗೂ ಮೆಹರ ತಾಂಡಾದ ಕೂಲಿ ಕಾರ್ಮಿಕ ಮಹಿಳೆ ಕರಿಷ್ಮಾ ಸಹದೇವ ಉಪಾದ್ಯೆ(35) ಒಂದು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.  ಬಂಧಿತರಿಂದ ರೂ. 8.70 ಲಕ್ಷ ಮೌಲ್ಯದ 146 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಗಾಂಧಿಚೌಕ ಸಿಪಿಐ ಮಹಾಂತೇಶ ದಾಮಣ್ಣನವರ, ಪಿ.ಎಸ್.ಐ ಎಸ್. ಕೆ. ಮನ್ನಿಕೇರಿ, ಎಸ್. ಬಿ. ಖೋತ್, ಆರ್. ಕೆ. ಗವಾರ, ಸಿಬ್ಬಂದಿಯಾದ ಬಾಬು ಕೆ. ಗುಡಿಮನಿ, ಶಿವಾನಂದ ಅಳ್ಳಿಗಿಡದ, ಅನೀಲ ಎಲ್. ದೊಡಮನಿ, ಆರ್. ವಿ. ನಾಯಕ, ಎಸ್. ಎಚ್. ಜಮಾದಾರ, ಆಸೀಫ್ ರಿಸಾಲ್ದಾರ, ಬಿ. ಎಂ. ಹಡಲಗೇರಿ, ಬಶೀರಅಹ್ಮದ ಎಂ. ಶೇಖ, ರಾಮನಗೌಡ ಬಿ. ಬಿರಾದಾರ, ಚಿದಾನಂದ ಗಿಡಗಿಂಚಿ, ಸುಧೀರ ಗದ್ಯಾಳ, ವಿನಾಯಕ ಕಡ್ಲಿಬಾಳು, ಮಾಯಪ್ಪ ಟೋಪನಗೋಳ, ಮತ್ತು ಗಣಕಯಂತ್ರ ವಿಭಾಗದ ಸಿಬ್ಬಂದಿ ಸುನೀಲ ಗೌಳಿ, ಗುಂಡಣ್ಣ ಗಿರಣಿವಡ್ಡರ, ಮತೀನ ಬಾಗವಾನ ಪಾಲ್ಗೊಂಡಿದ್ದರು.  ಇವರೆಲ್ಲರಿಗೂ ಎಸ್ಪಿ ಋಷಿಕೇಶ  ಸೋನಾವಣೆ ಬಹುಮಾನ ಘೋಷಿಸಿದ್ದಾರೆ.

Leave a Reply

ಹೊಸ ಪೋಸ್ಟ್‌