ವಿಜಯಪುರ: ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಉಳಿದಿರುವ ಮಧ್ಯೆಯೇ ಇಂಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಾಣಿಗ ಸಮಾಜದ ಶಕ್ತಿ ಪ್ರದರ್ಶನ ನಡೆದಿದೆ.
ಜ್ಞಾನಯೋಗಿ ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮೀಜಿ ಸಭಾ ಭವನದ ಭೂಮಿ ಪೂಜಾ ಕಾರ್ಯಕ್ರಮ ಹಾಗೂ ವಿಜಯಪುರ ಜಿಲ್ಲಾ ಗಾಣಿಗ ಸಮಾಜ ಬೃಹತ್ ಸಮಾವೇಶ ಗಾಣಿಗರ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ವಿಜಯಪುರ ಜಿಲ್ಲಾ ಗಾಣಿಗ ಸಮಾಜ ಸಂಘಗಳ ಸಂಯುಕ್ತಾಶ್ರಯದಲ್ಲಿ ನಡೆದ ಈ ಸಮಾವೇಶವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಶತಮಾನದ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿ ನಡೆದಾಡುವ ದೇವರಾಗಿದ್ದರು. ಅವರ ಸ್ಮರಣೆಯಲ್ಲಿ ಸಭಾಭವನ ಮಾಡಲಾಗುತ್ತಿದೆ. ಸಂತ ಪದದ ಅರ್ಥವೇ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು. ಇಂಥ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಬಾಲ್ಯದಲ್ಲೇ ಆಧ್ಯಾತ್ಮಿಕ ಭಾವ ಹೊಂದಿದ್ದರು. ನಮ್ಮ ಭೂಮಿಗೆ ಒಂದು ಬೊಗಸೆ ನೀರು ಕೊಡಿ ಎಂದು ಸಿದ್ದೇಶ್ವರ ಶ್ರೀಗಳ ಹೇಳಿದ್ದರು. ಅವರ ಆಶಯದಂತೆ ಜಲಸಂಪನ್ಮೂಲ ಸಚಿವನಾಗಿ ನೀರಾವರಿ ಮಾಡಿದ್ದೇನೆ ಎಂದು ಹೇಳಿದರು.
ವಿಜಯಪುರದ ವನಶ್ರಿ ಮಠವನ್ನು ಜಯದೇವ ಸ್ವಾಮೀಜಿಗಳು ಬಹಳ ಕಷ್ಟಪಟ್ಟು ಕಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ವನಶ್ರಿ ಮಠ ಉತ್ತಮವಾಗಿ ಬೆಳೆಯಲಿದೆ. ತಂತಮ್ಮ ಸಮುದಾಯ ಬೆಳವಣಿಗೆಗಾಗಿ ಎಲ್ಲರೂ ಸಂಘಟನೆ ಮಾಡುತ್ತಾರೆ. ಗಾಣಿಗ ಸಮುದಾಯದವರು ತಮಗೆ ನಿಗಮ ಬೇಕು ಎಂದು ಕೇಳಿದ್ದೀರಿ, ಕೇವಲ ನಿಗಮ ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಉತ್ತಮ ರಾಜಕೀಯ ಸ್ಥಾನ ದೊರೆಯಲಿ. ಗಾಣಿಗ ಸಮಾಜದ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ. ನಿಮ್ಮ ಸಮಾಜದ ಜೊತೆಗೆ ನಾನಿರುತ್ತೇನೆ ಎಂದು ಅವರು ಅಭಯ ನೀಡಿದರು.
ಅಥಣಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ರಾಜ್ಯದ ಶಾಸಕರಲ್ಲಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ನಮ್ಮ ಗಾಣಿಗ ಸಮಾಜಕ್ಕೆ ರೂ. 5 ಕೋ. ಅನುದಾನ ನೀಡಿದ್ದಾರೆ. ನಮ್ಮ ಜನಾಂಗ ಎಂದಿಗೂ ಬೆನ್ನಿಗೆ ಚೂರಿ ಹಾಕುವುದಿಲ್ಲ. ನಿಮ್ಮನ್ನು ಐದು ಸಲ ಶಾಸಕರನ್ನಾಗಿ ನಮ್ಮ ಸಮಾಜ ಮಾಡೇ ಮಾಡುತ್ತೆ. ಇದು ಕಟ್ಟಿಟ್ಟ ಬುತ್ತಿ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರ ಗುಣಗಾನ ಮಾಡಿ ಭರವಸೆ ನೀಡಿದರು.
ಗಾಣಿಗ ಸಮಾಜವು ಎಲ್ಲರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದೆ. ಬೇರೆ ಸಮಾಜಕ್ಕೆ ಅವಮಾನ ಮಾಡದಂತೆ ಸಮಾಜ ಸಂಘಟನೆ ಮಾಡಬೇಕು. ಬೇರೆ ಎಲ್ಲಾ ಸಮಾಜದವರು ನಮ್ಮನ್ನ ಗೌರವಿಸಬೇಕು. ಅದರಂತೆ ನಮ್ಮ ಕಾರ್ಯಗಳಿರಬೇಕು. ಗಾಣಿಗ ಸಮುದಾಯದ ಮತದಿಂದ ನಾನು ಗೆದ್ದಿದ್ದೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಅವರು ಹೇಳಿದ್ದಾರೆ. ಇಂಡಿಯಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಶವಂತರಾಯಗೌಡ ಪಾಟೀಲ್ ಪರವಾಗಿ ಶೇ. 90 ರಷ್ಟು ಗಾಣಿಗ ಸಮಾಜದ ಮತಗಳು ಬಂದಿವೆ ಎಂದು ಹೇಳಿದರು.
ನಾನು ಸಾಮಾನ್ಯವಾಗಿ ಯಾರನ್ನೂ ಹೊಗಳುವುದಿಲ್ಲ. ಆದರೆ, ಸಚಿವ ಎಂ. ಬಿ. ಪಾಟೀಲ ಅವರು, ಶ್ರೀ ಸಿದ್ದೇಶ್ವರ ಶ್ರೀಗಳ ಆಶಯದಂತೆ ಬರಪೀಡಿತ ವಿಜಯಪುರ ಜಿಲ್ಲೆಯಲ್ಲಿ ಜಲಕ್ರಾಂತಿ ಮಾಡಿದ್ದಾರೆ. ಈ ಮೂಲಕ ಪಕ್ಷಾತೀತವಾಗಿ ರೈತರಿಗೆ ಉಪಕಾರ ಮಾಡಿದ್ದಾರೆ. ನಮ್ಮ ಸಮಾಜ ಅವರ ಬೆನ್ನಿಗೆ ನಿಲ್ಲುತ್ತದೆ ಎಂದು ಹೇಳಿದರು.
ವಿಜಯಪುರದ ವನಶ್ರೀ ಸಂಸ್ಥಾನ ಮಠವನ್ನು ಅಭಿವೃದ್ಧಿ ಮಾಡಬೇಕಿದೆ. ಈ ಮಠದಲ್ಲಿ ಬಡಮಕ್ಕಳಿಗೆ ಶಿಕ್ಷಣ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಹಿರಿಯ ನಾಯಕರು ಕೆಲಸ ಮಾಡಬೇಕು. ಗಾಣಿಗ ಸಮುದಾಯವನ್ನು 2ಎ ಮೀಸಲಾತಿಯಿಂದ ತೆಗೆಯಲ್ಲ. ಬಿಜೆಪಿಯವರು ನನಗೆ ಅನ್ಯಾಯ ಮಾಡಿದಾಗ ರಾಜ್ಯದಲ್ಲಿ ನಮ್ಮ ಇಡಿ ಸಮಾಜ ನನ್ನ ಜೊತೆಗೆ ನಿಂತಿದೆ. ನನ್ನ ಕಣ್ಣಲ್ಲಿ ನೀರು ಬಂದಾಗ ನನ್ನ ಕಣ್ಣಿರು ಒರೆಸಿದೆ. ಗಾಣಿಗ ಸಮಾಜಕ್ಕೆ ಕಳಂಕ ಬಾರದಂತೆ ಕೆಲಸ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ನನ್ನ ಅಂತರಂಗದ ಮಾತುಗಳನ್ನ ಹೇಳುತ್ತೇನೆ ಎಂದು ಅವರು ಹೇಳಿದರು.
ಹುಬ್ಬಳ್ಳಿ ಅಖಿಲ ಭಾರತ ಗಾಣಿಗ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ಸ್ವಾತಂತ್ರ್ಯ ಬಂದಾಗಿನಿಂದ ಕಾಂಗ್ರೆಸ್ ಆಡಳಿತದಲ್ಲಿ ಇಲ್ಲಿಯವರೆಗೂ ಗಾಣಿಗ ಸಮಾಜದ ನಾಯಕರಾರೂ ಸಚಿವರಾಗಿಲ್ಲ, ಯಾವುದೇ ವಿಶ್ವವಿದ್ಯಾಲಯಗಳ ಉಪಕುಲಪತಿಗಳಾಗಿಲ್ಲ. ಕೆಪಿಎಸ್ಸಿ ಸದಸ್ಯರಾಗಲು ಸಾಧ್ಯವಾಗಿಲ್ಲ. ಸಮಾಜದ ಹಿರಿಯ ಶಾಸಕ ಲಕ್ಷ್ಮಣ ಸವದಿ ಅವರನ್ನು ಸಚಿವರನ್ನಾಗಿ ಮಾಡುವ ಮೂಲಕ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ಕೊಡುವ ಕೆಲಸವನ್ನು ಕಾಂಗ್ರೆಸ್ ವರಿಷ್ಠರು ಮಾಡಬೇಕು ಎಂದು ಹೇಳಿದರು.
ಸಚಿವ ಎಂ.ಬಿ.ಪಾಟೀಲರು ವಿಜಯಪುರ ಗಾಣಿಗ ಗುರುಪೀಠ ವನಶ್ರೀಮಠದ ಅಭಿವೃದ್ಧಿಗೆ ಸರಕಾರದಿಂದ ರೂ. 50 ಕೋ. ಅನುದಾನ ಒದಗಿಸಬೇಕು. ಗಾಣಿಗ ಸಮಾಜದ ಮೂಲ ವೃತ್ತಿ ಸಾಂಪ್ರಾದಾಯಿಕ ಗಾಣದೆಣ್ಣೆ ಉದ್ಯಮ ಉತ್ತೇಜನ ಪಡೆದು ಮತ್ತೆ ಮುನ್ನೆಲೆಗೆ ತರಲು ಗಾಣಿಗ ನಿಗಮ ಸ್ಥಾಪಿಸಿ ಅನುದಾನ ಒದಗಿಸಬೇಕು. ಹುಬ್ಬಳ್ಳಿಯಲ್ಲಿ ಸಮಾಜದ ಹಿರಿಯರು ಸ್ಥಾಪಿಸಿರುವ ಜ್ಯೋತಿ ಶಿಕ್ಷಣ ಸಂಸ್ಥೆ ಜಾಗದಲ್ಲಿ ಸಮಾಜದ ಹೆಮ್ಮೆಯಾಗಿರುವ ನಾಡಿನ ಖ್ಯಾತ ಎಂಜಿನಿಯರ್ ಎಸ್. ಜಿ. ಬಾಳೆಕುಂದ್ರಿ ಹೆಸರಿನಲ್ಲಿ ಸಮಾಜದ ಬಡ ಯುವಕ, ಯುವತಿಯರಿಗೆ ಸ್ಪರ್ಧಾತ್ಮಕ ತರಬೇತಿ ಶಾಲೆ ಪ್ರಾರಂಭಿಸಿ ಔದ್ಯೋಗಿಕವಾಗಿ ಸಶಕ್ತರನ್ನಾಗಿ ಮಾಡುವ ಕೆಲಸವನ್ನು ಸಚಿವರು ಮತ್ತು ಸರಕಾರ ಮಾಡಲು ಎಲ್ಲ ನಾಯಕರು ಕೈಜೋಡಿಸಬೇಕು ಎಂದು ಮೂರು ಪ್ರಮುಖ ಬೇಡಿಕೆಗಳನ್ನು ಸಭೆಯಲ್ಲಿ ಮಂಡಸಿದರು.
ಸಭಾ ಭವನಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಇಂಡಿ ಶಾಸಕ ಯಶವಂತರಾಯಗೌಡ ವಿ. ಪಾಟೀಲ, ಕಳೆದ ಚುನಾವಣೆಯಲ್ಲಿ ಇಂಡಿ ಮತಕ್ಷೇತ್ರದ ಗಾಣಿಗ ಸಮುದಾಯ ಒಗ್ಗಟ್ಟಿನಿಂದ ನನ್ನನ್ನು ಬೆಂಬಲಿಸಿ ಮೂರನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗಲು ಸಹಾಯ ಮಾಡಿದೆ. ಶ್ರೀ ಸಿದ್ದೇಶ್ವರ ಅಪ್ಪನವರ ಹೆಸರಿನಲ್ಲಿ ಸಭಾಭವನ ನಿರ್ಮಾಣಕ್ಕೆ ಅನುದಾನ ಒದಗಿಸುವ ಮೂಲಕ ಸಮಾಜದ ಋಣ ತೀರಿಸುವ ಕೆಲಸ ಮಾಡಿದ್ದೇನೆ. ಗಾಣಿಗ ಮತ್ತು ಇತರೆ ಎಲ್ಲಾ ಸಮಾಜಗಳ ಏಳಿಗೆಗಾಗಿ ಶ್ರಮಿಸುವ ಕೆಲಸ ಮಾಡುತ್ತೇನೆ. ಮಾನವೀಯ ಮೌಲ್ಯಗಳೊಂದಿಗೆ ಸರ್ವ ಸಮುದಾಯಗಳನ್ನು ಹೃದಯದಿಂದ ಪ್ರೀತಿಸುವ ಪ್ರಬುಧ್ದತೆ ನಾಯಕನಲ್ಲಿರಬೇಕು. ಅಂಥವವರನ್ನು ಸಮಾಜ ಎತ್ತಿ ಹಿಡಿಯುತ್ತದೆ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಹೇಳಿದರು.
ಬಾಗಲಕೋಟೆ ಸಂಸದ ಪಿ. ಸಿ. ಗದ್ದಿಗೌಡರ, ಚಿತ್ರದುರ್ಗ ನಗರ ಶಾಸಕ ಕೆ. ಸಿ. ವಿರೇಂದ್ರ(ಪಪ್ಪಿ), ಮಾಜಿ ಎಂ.ಎಲ್.ಸಿ ಬಿ. ಜಿ. ಪಾಟೀಲ ಹಲಸಂಗಿ, ಬಿಜೆಪಿ ಮುಖಂಡ ದಯಾಸಾಗರ ಪಾಟೀಲ ಹಾಗೂ ಸಿದ್ದಲಿಂಗ ಹಂಜಗಿ ಮಾತನಾಡಿದರು.
ಗಾಣಿಗ ಗುರುಪೀಠದ ಡಾ. ಜಯ ಬಸವಕುಮಾರ ಜಗದ್ಗುರುಗಳು ಆಶೀರ್ವಚನ ನೀಡಿದರು.
ಈ ಸಮಾವೇಶದಲ್ಲಿ ಚಳಕಾಪೂರ ಸಿದ್ದಾರೂಢ ಆಶ್ರಮದ ಶ್ರೀ ಶಂಕರಾನಂದ ಸ್ವಾಮೀಜಿ, ಹಿರೇರೂಗಿ ಮುಕ್ತಿಮಂದಿರದ ಸುಗಲಮ್ಮತಾಯಿ, ವಿಜಯಪುರ ಸಂಸದ ರಮೇಶ ಜಿಗಜಿಣಗಿ, ನಾಗಠಾಣ ಶಾಸಕ ವಿಠಲ ಧೋಂಡಿಬಾ ಕಟಕದೊಂಡ, ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ಸಿಂದಗಿ ಶಾಸಕ ಅಶೋಕ ಮನಗೂಳಿ, ಮಾಜಿ ಸಚಿವ ಎಸ್. ಕೆ. ಬೆಳ್ಳುಬ್ಬಿ, ಮಾಜಿ ಶಾಸಕರಾದ ಜಿ. ಎಸ್. ನ್ಯಾಮಗೌಡ, ರಮೇಶ ಭೂಸನೂರ, ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ಬಿ. ಬಿ. ಪಾಸೋಡಿ, ಇಂಡಿ ತಾಲೂಕು ಗಾಣಿಗ ಸಮಾಜದ ಅಧ್ಯಕ್ಷ ಎ. ಎಸ್. ಗಾಣಿಗೇರ ಸೇರಿದಂತೆ ಗಾಣಿಗ ಸಮಾಜದ ಜಿಲ್ಲಾ ಹಾಗೂ ತಾಲೂಕುಗಳ ನಾನಾ ಪದಾಧಿಕಾರಿಗಳು, ಮುಖಂಡರು, ಮುಂತಾದವರು ಉಪಸ್ಥಿತರಿದ್ದರು,