ವಿಜಯಪುರ: ದೀಪ ಆರುವ ಮುಂಚೆ ದೊಡ್ಡದಾಗಿ ಉರಿಯುತ್ತದೆ ಎಂದು ಉತ್ತರ ಕನ್ನಡ ಸಂಸದ ಅನಂತಕುಮಾರ ವಿರುದ್ಧ ಬೆಳಗಾವಿ ಜಿಲ್ಲೆಯ ಅಥಣಿ ಶಾಸಕ ಲಕ್ಷ್ಮಣ ಸವದಿ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರದ ವಿರುದ್ಧ ಸಂಸದ ಅನಂತಕುಮಾರ ನೀಡಿರುವ ಹೇಳಿಕೆಯ ಕುರಿತು ಕೇಳಲಾದ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದರು.
ಅನಂತಕುಮಾರ ಹೆಗಡೆ ರಾಜಕೀಯವಾಗಿ ಕಳೆದು ಹೋಗುವ ಮುನ್ನ ಅವಾಚ್ಯ ಶಬ್ದಗಳಿಂದ ಮಾತನಾಡುತ್ತಿದ್ದಾರೆ. ತಮ್ಮ ಅಸ್ತಿತ್ವವನ್ನು ತಾವೇ ಕಳೆದುಕೊಳ್ಳುತ್ತಿರುವುದು ಪ್ರಾರಂಭವಾಗಿದೆ. ವಿನಾಶ ಕಾಲೇ ವಿಪರೀತ ಬುದ್ದಿ ಎಂಬಂತೆ ಅವರು ಮಾತನಾಡುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಕೂಡ ಆಗಿರುವ ಲಕ್ಷ್ಣಣ ಸವದಿ ವಾಗ್ದಾಳಿ ನಡೆಸಿದರು.
ದೇವಸ್ಥಾನದ ಹಣವನ್ನು ಸರಕಾರ ಬಳಕೆ ಮಾಡುವ ವಿಚಾರ ಬಿಜೆಪಿಗೆ ಅಸ್ತ್ರವಾಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯವರು ಹತಾಶರಾಗಿದ್ದಾರೆ. ರಾಜ್ಯದ 28 ಕ್ಷೇತ್ರಗಳನ್ನು ಗೆಲ್ಲಲು ಕೇಂದ್ರದವರು ರಾಜ್ಯದ ನಾಯಕರಿಗೆ ಟಾರ್ಗೆಟ್ ನೀಡಿದ್ದಾರೆ. ಈಗ ಚುನಾವಣೆಯಲ್ಲಿ ಗೆಲ್ಲಲು ಆಗುವುದಿಲ್ಲ ಎಂಬ ಭ್ರಮ ನಿರಸನದಿಂದ ಅವರು ಹೀಗೆ ಮಾತನಾಡುತ್ತಿದ್ದಾರೆ. ಎಲ್ಲ 28 ಸ್ಥಾನ ಗೆಲ್ಲುವ ಕುರಿತು ಮಾತನಾಡುತ್ತಾರೆ. ಪಕ್ಕದ ರಾಜ್ಯದ ಎರಡರಿಂದ ಮೂರು ಹಿಡಿದು ಮೂವತ್ತರವರೆಗೆ ಗೆಲ್ಲುವ ಬಗ್ಗೆ ಮಾತನ್ನಾಡುತ್ತಾರೆ ಎಂದು ಅವರು ಲೇವಡಿ ಮಾಡಿದರು.
28 ಸ್ಥಾನ ಗೆಲ್ಲದಿದ್ದರೆ ಬಿಜೆಪಿಯಲ್ಲಿ ಬದಲಾವಣೆ ಆಗುತ್ತಾ? ಪ್ರಶ್ನೆಗೆ ಉತ್ತರಿಸಿದ ಶಾಸಕರು, ಬದಲಾವಣೆ ಆಗುವ ಪ್ರಶ್ನೆ ಉದ್ಭವ ಆಗಲ್ಲ. ಈಗ ಎಲ್ಲಿ ಕೂಡಬೇಕೋ ಅಲ್ಲಿ ಕೂತಿದ್ದಾರೆ. ಬದಲಾವಣೆ ಆಗಿಯೇ ಈಗ ಅಲ್ಲಿ ಕುಳಿತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ಮೇಕೆದಾಟು ಯೋಜನೆ ಕುರಿತು ದೊರೈ ಮುರುಗನಗ್ ಹೇಳಿಕೆ ವಿಚಾರ
ಮೇಕೆದಾಟು ಯೋಜನೆ ಕುರಿತು ದೊರೇ ಮುರುಗನ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಸರಕಾರ ಅಧಿಕಾರಕ್ಕೆ ಈಗ ಬಂದು ಎಂಟು ತಿಂಗಳಾಗಿದೆ. ಇನ್ನೂ ನಾಲ್ಕು ವರ್ಷ ನಾಲ್ಕು ತಿಂಗಳ ಕಾಲಾವಕಾಶವಿದೆ. ಅಷ್ಟರಲ್ಲಿ ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆ ಮತ್ತು ಕೃಷ್ಣಾ ಮೇಲ್ದಂಟೆ ಯೋಜನೆಗಳನ್ನು ಹಂತ ಹಂತವಾಗಿ ಮಾಡಲಾಗುತ್ತದೆ. ಈ ನೀರಾವರಿಯ ಯೋಜನೆಗಳು ಪೂರ್ಣವಾಗಲಿವೆ ಎಂದು ಅವರು ತಿಳಿಸಿದರು.
ಲೋಕಸಭೆ ಚುನಾವಣೆಯಲ್ಲಿ ಸಚಿವರ ಸ್ಪರ್ದೆ ವಿಚಾರ
ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಕಾಂಗ್ರೆಸ್ ಸಚಿವರು ಸ್ಪರ್ಧಿಸುವ ವಿಚಾರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ರಾಷ್ಟ್ರೀಯ ಪಕ್ಷದಲ್ಲಿ ಅಂಥ ವಿಚಾರಗಳು ಸಹಜವಾಗಿ ಬರುತ್ತವೆ. ಯಾವ ಅಭ್ಯರ್ಥಿ ಸೂಕ್ತವಾಗುತ್ತಾರೆ ಅಂಥವರ ಸ್ಪರ್ಧೆ ಕುರಿತು ನಮ್ಮ ಹೈಕಮಾಂಡ ಮುಖಂಡರು ತೀರ್ಮಾನ ಮಾಡುತ್ತಾರೆ. ಆ ತೀರ್ಮಾನಕ್ಕೆ ನಾವೆಲ್ಲರೂ ಭದ್ದರಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ನಾನು ರಾಜ್ಯ ರಾಜಕಾರಣದಲ್ಲಿಯೇ ಇರುತ್ತೇನೆ ಎಂದು ಶಾಸಕ ಲಕ್ಷ್ಣಣ ಸವದಿ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.