ವಿಜಯಪುರ: ಈ ಬಾರಿ ಭೀಕರ ಬರಗಾಲವಿದೆ. ಮುಂಬರುವ ಬೇಸಿಗೆಯಲ್ಲಿ ಜನ ಜಾನುವಾರಗಳಿಗೆ ನೀರಿನ ತೊಂದರೆ ಆಗದಂತೆ ಮುಂಜಾಗ್ರತೆ ವಹಿಸಿ, ಅಧಿಕಾರಿಗಳು ಪೂರ್ವ ಯೋಜನೆಯೊದಿಗೆ ಕಾರ್ಯ ನಿರ್ವಹಿಸಿ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಸಮಪರ್ಕವಾಗಿ ಕುಡಿಯುವ ನೀರು ಒದಗಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ಭೂತನಾಳ ಕೆರೆಯನ್ನು ತಿಡಗುಂದಿ ಅಕ್ವಾಡೆಕ್ಟ್ ಮೂಲಕ ನೀರು ತುಂಬಿಸುವ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ನೀರು ಹರಿಯುವ ಪ್ರಮಾಣ, ನೀರೆತ್ತುವ ಪಂಪ್, ವಿದ್ಯುತ್ ಪರಿಕರಗಳ ಸಾಮರ್ಥ್ಯ ಸೇರಿದಂತೆ ವಿವಿಧ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿದ ಮಾಹಿತಿ ಪಡೆದ ಸಚಿವರು, ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ಪ್ರಥಮಾದ್ಯತೆಯ ಮೇಲೆ ನೀಗಿಸಬೇಕು. ಮಳೆಯ ಅಭಾವದಿಂದ ಭೂತನಾಳ ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ವಿಜಯಪುರ ನಗರದ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಪರ್ಯಾಯ ಮಾರ್ಗದಿಂದ ತಿಡಗುಂದಿ ಅಕ್ವಾಡೆಕ್ಟ್ ಮೂಲಕ ಭೂತನಾಳ ಕೆರೆಗೆ ನೀರು ಹರಿಸಲಾಗುತ್ತಿದೆ. ಹೆಚ್ಚುವರಿಯಾಗಿ ಮೋಟರ್ ಅಳವಡಿಸಿ ಕೆರೆಗೆ ನೀರು ಹರಿಸಿ ಸಂಗ್ರಹಿಸಿಟ್ಟುಕೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ತಿಡಗುಂದಿ ಅಕ್ವಾಡೆಕ್ಟನಿಂದ ಪರ್ಯಾಯ ಮಾರ್ಗದ ಮೂಲಕ ಭೂತನಾಳ ಕೆರೆಗೆ ನೀರು ಹರಿಸಿ, ನಗರದ ಜನರಿಗೆ ಕುಡಿಯುವ ನೀರಿನ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಂಡು, ನೀರನ್ನು ಭೂತನಾಳ ಕೆರೆಯಲ್ಲಿ ಸಂಗ್ರಹಿಸಿಟ್ಟುಕೊಳ್ಳುವಂತೆಯೂ ಅಗತ್ಯ ಬಿದ್ದರೆ ಇನ್ನು ಹೆಚ್ಚುವರಿಯಾಗಿ ಮೋಟರ್ ಅಳವಡಿಸಿ ಪೂರ್ಣ ಪ್ರಮಾಣದಲ್ಲಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ಸೂಚನೆ ನೀಡಿದರು.
ಭೂತನಾಳ ಕೆರೆಗೆ ನೀರು ಸಂಗ್ರಹಿಸಲು ಅರಕೇರಿ ಶಾಖಾ ಕಾಲುವೆ ಮೂಲಕ ನೀರು ಹರಿಸುವ ಪರ್ಯಾಯ ಮಾರ್ಗದ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ನೀಡುವಂತೆ ಮಹಾನಗರ ಪಾಲಿಕೆ ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಭೂತನಾಳ ಕೆರೆಯಿಂದ ನಗರಕ್ಕೆ ಕುಡಿಯುವ ನೀರು ಒದಗಿಸಲು ಪಂಪ್ ಹೌಸ್ ಮೂಲಕ ಆರಂಭಿಸಲಾಗಿದೆ. ಇನ್ನು ಎರಡು ದಿನಗಳಲ್ಲಿ ಮತ್ತಷ್ಟು ನೀರು ಸಂಗ್ರಹವಾಗುವುದರಿಂದ ಇನ್ನೊಂದು ಪಂಪ್ ಆರಂಭಿಸಿ ನಗರಕ್ಕೆ ಸಮರ್ಪಕವಾಗಿ ನೀರು ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿರುವ ಐತಿಹಾಸಿಕ ಬಾವಿಗಳ ಪುನಃಶ್ಚೇತನಗೊಳಿಸಿ, ಸ್ವಚ್ಛಗೊಳಿಸಿ ಭಾವಿಯ ನೀರನ್ನು ಗೃಹ ಬಳಕೆಗಾಗಿ ಉಪಯೋಗಿಸುವಂತೆ ಕ್ರಮ ವಹಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಗರದಲ್ಲಿರುವ ಎರಡು ಭಾವಿಗಳ ಸ್ವಚ್ಛಗೊಳಿಸಲಾಗಿದ್ದು, ಈ ಭಾವಿಯ ನೀರನ್ನು ಗೃಹ ಬಳಕೆಗೆ ಉಪಯೋಗಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ನಗರದಲ್ಲಿನ 476 ಕೊಳವೆ ಬಾವಿಗಳಿಗೆ ಹಾಗೂ 27 ತೆರೆದ ಬಾವಿಗಳಿಗೆ ವಿದ್ಯುತ್ ಮೋಟರ್ ಅಳವಡಿಸಿದ್ದು, ಇವುಗಳಿಂದ ನಗರದ ಜನರ ದಿನಬಳಕೆಗಾಗಿ ಪ್ರತಿ ದಿನ ನೀರು ಪೂರೈಸಲು ಅಧಿಕಾರಿಗಳು ಕ್ರಮ ವಹಿಸಿದ್ದಾರೆ ಎಂದು ಹೇಳಿದರು.
ಬೇಸಿಗೆಯಲ್ಲಿ ನಗರದಾದ್ಯಂತ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ವಿಜಯಪುರ ನಗರಕ್ಕೆ ಭೂತನಾಳ ಕೆರೆಯ ನೀರು ಕುಡಿಯಲು ಬಳಸಲಾಗುತ್ತಿದೆ.ಮಳೆ ಕೊರತೆಯಿಂದ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ತಾತ್ಕಾಲಿಕವಾಗಿ ಕುಡಿಯುವ ನೀರಿನ ಸಮಸ್ಯೆಬಾರದಂತೆ ನೋಡಿಕೊಳ್ಳಲು ಅಕ್ವಾಡೆಕ್ಟ್ ಮೂಲಕ ನೀರು ತುಂಬಿಸಿ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಮಹಾನಗರ ಪಾಲಿಕೆ ಆಯುಕ್ತ ಬದ್ರೂದ್ದಿನ ಸೌದಾಗರ, ಬಸವನ ಬಾಗೇವಾಡಿ ವೃತ್ತದ ಕೆಬಿಜೆಎನ್‍ಎಲ್ ಅಧೀಕ್ಷಕ ಅಭಿಯಂತರರಾದ ಗೋವಿಂದ ರಾಠೋಡ, ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧಿಕಾರಿಗಳು ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.