ನಾನಾ ರೇಲ್ವೆ ನಿಲ್ದಾಣಗಳ ಪುನರಾಭಿವೃದ್ದಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ- ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ಮೂಲಕ ಅಮೃತ ಭಾರತ ಯೋಜನೆ ಮೂಲಕ ದೇಶದ ನಾನಾ ರೇಲ್ವೆ ನಿಲ್ದಾಣಗಳ ಪುನರಾಭಿವೃದ್ದಿ, ರಸ್ತೆ ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ಸಮರ್ಪಣೆ, ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದ್ದು, ದೇಶದ ರೈಲು ನಿಲ್ದಾಣಗಳು ಸಾರ್ವಜನಿಕರಿಗೆ ಅತ್ಯಾಧುನಿಕ, ಸುಂದರ, ಸ್ವಚ್ಚ ಹಾಗೂ ಅಂತಾರಾಷ್ಟ್ರೀಯ ಗುಣಮಟ್ಟದ ಸೇವೆಗಳನ್ನು ಒದಗಿಸಲಿವೆ ಎಂದು ಸಂಸದ ರಮೇಶ ಜಿಗಜಿಣಗಿ ಅವರು ಹೇಳಿದ್ದಾರೆ.  

ನಗರದ ರೈಲ್ವೇ ನಿಲ್ಧಾಣದಲ್ಲಿ ಆಯೋಜಿಸಲಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹುಬ್ಬಳ್ಳಿ ವಿಭಾಗದ ನವೀಕರಣಗೊಂಡಿರುವ ಏಳು ನಿಲ್ಧಾಣಗಳು ಮತ್ತು ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ಶಂಕುಸ್ಥಾಪನೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಮಂತ್ರಿಗಳು ಲೋಕಾರ್ಪಣೆ ಮಾಡಿದ್ದಾರೆ.  ಬಸವನಾಡಿನ ವಿಜಯಪುರ ಮತ್ತು ಆಲಮಟ್ಟಿ ರೇಲ್ವೆ ನಿಲ್ದಾಣಗಳ ಪುನರಾಭಿವೃದ್ದಿಗೆ ಶಂಕುಸ್ಥಾಪನೆ, ಮಿಂಚನಾಳ, ಕ್ಯಾತನಕೇರಿ ಹಾಗೂ ನಿಂಬಾಳ ರೇಲ್ವೆ ಅಂಡರ್‌ಪಾಸ್‌ಗಳನ್ನು ಜನರಿಗೆ ಸಮರ್ಪಿಸಿದ್ದಾರೆ ಎಂದು ಹೇಳಿದರು.

ವಿಜಯಪುರ ಜಿಲ್ಲೆಗೆ ಈಗಾಗಲೇ ಗದಗ ವರೆಗೆ ಜೋಡಿ ರಲುಮಾರ್ಗ ಜೋಡಣೆ ಹಾಗೂ ರೈಲ್ವೆ ವಿದ್ಯುದ್ದೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ.  ರೈಲುಗಳ ದಟ್ಟಣೆಯನ್ನು ಸರಳೀಕರಣ ಮಾಡಲು ಅಲಿಯಾಬಾದ ಹತ್ತಿರ ಗೂಡ್‌ಶೆಡ್‌ ನ್ನು ಪ್ರಾರಂಭಿಸಲಾಗಿದೆ.  ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಅಮೃತ್ ಭಾರತ ಯೋಜನೆಯಡಿ ರೈಲ್ವೆ ಸ್ಟೇಷನ ಸ್ಥಿತಿ ಗತಿ ಕುರಿತು ನಾನಾ ಶಾಲಾ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಪ್ರಬಂಧ ಮತ್ತೀತರ ಸ್ಪರ್ದೇಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ರೈಲ್ವೆ ಇಲಾಖೆ ಅಧಿಕಾರಿಗಳಾದ ಸೀನಿಯರ್ ಡಿವಿಜಿನಲ್ ಪರ್ಸನಲ್ ಆಫೀಸರ್ ಆಸೀಪ್ ಹಪೀಜ್, ಎಡಿಷನಲ್ ಡಿವಿಜನ್ ರೈಲ್ವೆ ಮ್ಯಾನೇಜರ್ ಸಂಜಯ ಕುಮಾರ ಸಿಂಗ್, ಸ್ಟೇಷನ್ ಮಾಸ್ಟರ್ ಪಿ. ಟಿ. ನಾಯಕ, ವಿ. ಬಿ. ಗ್ರಾಮಪುರೋಹಿತ, ರೈಲ್ವೆ ಸಿಬ್ಬಂದಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌