ಕಾಖಂಡಕಿಯಲ್ಲಿ ಫೆ. 28 ರಂದು ಶ್ರೀಶೈಲ ಶ್ರೀ ಮಲ್ಲಿಕಾರ್ಜುನ ದೇವಸ್ಧಾನದ ನವೀಕರಣವಾದ ಬೆಳ್ಳಿ ಕಂಬಿಯ ಲೋಕಾರ್ಪಣೆ

ವಿಜಯಪುರ: ಬಬಲೇಶ್ವರ ತಾಲೂಕಿನ ಕಾಖಂಡಕಿಯ ಗ್ರಾಮದಲ್ಲಿ ಫೆ. 28 ರಂದು ಶ್ರೀಶೈಲ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ನವೀಕರಣಗೊಂಡಿರುವ ಬೆಳ್ಳಿಯ ಕಂಬಿ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.

ಅಲ್ಲದೇ, 20 ನೆಯ ವರ್ಷದ ಶ್ರೀಶೈಲ ಪಾದಯಾತ್ರೆ ಅಂಗವಾಗಿ ಸುಕ್ಷೇತ್ರ ಗುಡ್ಡಾಪುರ ದಾನಮ್ಮದೇವಿಯ ಜೀವನ ದರ್ಶನ ಪ್ರವಚನ ಕಾರ್ಯಕ್ರಮ ಕೂಡ ನಡೆಯಲಿದೆ.  ಈ ಪ್ರವಚನ ಕಾರ್ಯಕ್ರಮದಲ್ಲಿ ಗುಣದಾಳದ ಕಲ್ಯಾಣ ಮಠದ ಡಾ. ವಿವೇಕಾನಂದ ದೇವರು ಮತ್ತು ಸಂಗೀತ ಸೇವೆ ಕೂಡ ಆಯೋಜಿಸಲಾಗಿದೆ.

ಫೆ. 28ರಂದು ಗ್ರಾಮದ ಹೊರವಲಯದಲ್ಲಿರುವ ಪರಮಹಂಸ ಪೂರ್ವ ಪ್ರಾಥಮಿಕ ಶಾಲೆ ಆವರಣದಲ್ಲಿ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಉತ್ಸವ ಮತ್ತು ಧರ್ಮಸಭೆ ನಡೆಯಲಿದೆ.

ಕಾಖಂಡಕಿಯಲ್ಲಿ ನವೀಕರಣ ಮಾಡಲಾಗಿರುವ ಶ್ರೀಶೈಲ ಮಲ್ಲಯ್ಯನ ಬೆಳ್ಳಿಯ ಕಂಬಿ.

ಈ ಕಾರ್ಯಕ್ರಮದಲ್ಲಿ ಬಬಲೇಶ್ವರದ ಬೃಹನ್ಮಠದ ಡಾ. ಮಹದೇವ ಶಿವಾಚಾರ್ಯರು, ಗಿರಿಸಾಗರದ ಶ್ರೀ ರುದ್ರಮುನಿ ಶಿವಾಚಾರ್ಯರು, ಮಸೂತಿಯ ಶ್ರೀ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಮಮದಾಪುರದ ಶ್ರೀ ಅಭಿನವ ಮುರಗೇಂದ್ರ ಸ್ವಾಮೀಜಿ. ಕಾಖಂಡಕಿ ಗುರುದೇವ ಆಶ್ರಮದ ಶ್ರೀ ಶಿವಯೋಗೇಶ್ವರ ಸ್ವಾಮೀಜಿ, ಶ್ರೀ ಶಿವಲಿಂಗ ಶಾಸ್ತ್ರಿಗಳು. ಶ್ರೀ ಶಾಂತಯ್ಯ ಪೂಜಾರಿ, ಶ್ರೀ ಸೈಯದ್ ಜಾಗೀರದಾರ ಉಪಸ್ಥಿತರಿರಲಿದ್ದಾರೆ.

ಅಷ್ಟೇ ಅಲ್ಲ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಎಂ. ಬಿ. ಪಾಟೀಲ, ಮಾಜಿ ಸಚಿವ ಎಸ್. ಕೆ. ಬೆಳ್ಳುಬ್ಬಿ, ಉದ್ಯಮಿಗಳಾದ ಗುರಲಿಂಗಪ್ಪ ಅಂಗಡಿ, ರಾಜು ಬಿಜ್ಜರಗಿ, ಗ್ರಾ. ಪಂ. ಅಧ್ಯಕ್ಷೆ ಪದ್ಮಾವತಿ ಗೌಡಪ್ಪಗೋಳ, ಸುತ್ತಮುತ್ತಲಿನ ಗ್ರಾಮಗಳ ಹಿರಿಯರು, ಯುವಕರು, ಮಹಿಳೆಯರು ಭಾಗವಹಿಸಲಿದ್ದಾರೆ ಎಂದು ಮಲ್ಲಿಕಾರ್ಜುನ ಸೇವಾ ಸಮಿತಿ  ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

Leave a Reply

ಹೊಸ ಪೋಸ್ಟ್‌