ಕಾಖಂಡಕಿಯಲ್ಲಿ ಶ್ರೀಶೈಲ ಜಗದ್ಗುರುಗಳು ಪಲ್ಲಕ್ಕಿ, ಬೆಳ್ಳಿ ಕಂಬಿಯ ಲೋಕಾರ್ಪಣೆ

ವಿಜಯಪುರ: ಶ್ರೀಶೈಲ ಜಗದ್ಗುರುಗಳ ಪಲ್ಲಕ್ಕಿ ಉತ್ಸವ ಮತ್ತು ಮಲ್ಲಯ್ಯನ ದೇವಸ್ಥಾನದ ಬೆಳ್ಳಿ ಕಂಬಿಯ ಲೋಕಾರ್ಪಣೆ ಕಾರ್ಯಕ್ರಮ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ನಡೆಯಿತು.

ಕಾಖಂಡಕಿ ಗ್ರಾಮದ ಹೊರವಲಯದಲ್ಲಿರುವ ಪರಮಹಂಸ ಪೂರ್ವ ಪ್ರಾಥಮಿಕ ಶಾಲೆ ಆವರಣದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಸೇವಾ ಸಮಿತಿ ಪಾದಯಾತ್ರೆ ಭಕ್ತರ ವತಿಯಿಂದ 20ನೇ ವರ್ಷದ ಪಾದಯಾತ್ರೆ ಅಂಗವಾಗಿ ಶ್ರೀಶೈಲ ಜಗದ್ಗುರುಗಳು ಪಲ್ಲಕ್ಕಿ ಮಹೋತ್ಸವ ಮತ್ತು ಮಲ್ಲಯ್ಯನ ಭಕ್ತರ ವತಿಯಿಂದ ವಿನೂತನವಾದ ಐದು ಕೆ.ಜಿ ಬೆಳ್ಳಿಯ ಕಂಬಿಯ ಲೋಕಾರ್ಪಣೆ, ಧರ್ಮಸಭೆ, ವರದಾನಿ ಶ್ರೀ ಗುಡ್ಡಾಪುರ ದಾನಮ್ಮ ದೇವಿಯ ಪ್ರವಚನ ಸಮಾರೋಪ ಕಾರ್ಯಕ್ರಮ ನಡೆಯಿತು.

ಇದಕ್ಕೂ ಮೊದಲು ಈ ಕಾರ್ಯಕ್ರಮದ ಅಂಗವಾಗಿ ಗ್ರಾಮದ ಶ್ರೀಬೀರೇಶ್ವರ ದೇವಾಲಯದಿಂದ ಶ್ರೀಮಲ್ಲಿಕಾರ್ಜುನ ದೇವಸ್ಥಾನದವರೆಗೆ ನಾನಾ ವಾದ್ಯಮೇಳದೊಂದಿಗೆ ಕಾಖಂಡಕಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಶ್ರೀಶೈಲ ಜಗುದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರ ಪಲ್ಲಕ್ಕಿ ಉತ್ಸವ ನಡೆಯಿತು.

ವಿಜಯಪುರ ಜಿಲ್ಲೆಯ ಕಾಖಂಡಕಿ ಗ್ರಾಮದಲ್ಲಿ ಶ್ರೀಶೈಲ ಜಗದ್ಗುರುಗಳ ಪಲ್ಲಕ್ಕಿ ಉತ್ಸವ ನಡೆಯಿತು.

ಆಶೀರ್ವಚನ ನೀಡಿದ ಶ್ರೀಶೈಲ ಜಗದ್ಗುರುಗಳು, ಸಾವಿರಾರು ವರ್ಷಗಳಿಂದನಡೆದು ಬಂದಿರುವ ಕಂಬಿಯ ಕಾರ್ಯಕ್ರಮ ಈಗಲೂ ಮುಂದುವರೆದಿದೆ.  ಇದರ ಅಂಗವಾಗಿ ಭಕ್ತರ ಮನೆಗಳಿಗೆ ತೆರಳಿ ನಾನಾ ಧಾನ್ಯಗಳನ್ನು ಸಂಗ್ರಹಿಸಿ ಶ್ರೀಶೈಲಕ್ಕೆ ತಲುಪಿಸಿ ಅಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ದರ್ಶನ ಪಡೆಯಲಾಗುತ್ತದೆ.  ದೇವರು ಕೊಟ್ಟ ಆಶೀರ್ವಾದವನ್ನು ಮತ್ತೆ ಭಕ್ತರ ಮನೆಗೆ ಸಲ್ಲಿಸುವುದು ಭಕ್ತರ ಸಂಪ್ರದಾಯವಾಗಿದೆ ಎಂದು ಹೇಳಿದರು.

ಶ್ರೀಶೈಲ ಮಲ್ಲಯ್ಯನ ಭಕ್ತರು ಪ್ರತಿ ವರ್ಷ ಒಂದು ತಿಂಗಳು ಯಾವುದೂ ಕಾರ್ಯಕ್ರಮ ಮಾಡದೆ ದೇವರ ಧ್ಯಾನ ಭಕ್ತಿಸೇವೆ ಮಾಡುತ್ತಾರೆ.  ಶ್ರೀಶೈಲಕ್ಕೆ ಬರುವ ಎಲ್ಲ ಕಂಬಿಗಳನ್ನು ಒಂದೇ ಕಡೆ ಕೂಡಿಸಲು ಅನುಕೂಲವಾಗಲು ಕಟ್ಟಡವನ್ನು ನಿರ್ಮಿಸಲಾಗುವುದು ಎಂದು ಹೇಳಿದರು.

ಗುಣದಾಳದ ಕಲ್ಯಾಣಿೇಶ್ವರ ಹಿರೇಮಠದ ಡಾ. ವಿವೇಕಾನಂದ ದೇವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗಿರಿಸಾಗರದ ಶ್ರೀ ರುದ್ರಮುನಿ ಶಿವಾಚಾರ್ಯರು, ಮುಸೂತಿಯ ಶ್ರೀ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಮಮದಾಪುರದ ಶ್ರೀ ಅಭಿನವ ಮುರುಗೇಂದ್ರ ಸ್ವಾಮೀಜಿ, ಮುತ್ತತ್ತಿ, ಬಿಲಕೇರಿ, ಕುಂದರಗಿ ಶ್ರೀಗಳು, ಶ್ರೀ ಶಿವಲಿಂಗ ಶಾಸ್ತ್ರಿಗಳು, ಶ್ರೀ ಶಾಂತಯ್ಯ ಪೂಜಾರಿ, ಶ್ರೀ ಸೈಯದ್ ಜಾಗೀರದಾರ, ಶಿವಾನಂದ ಪಾರ್ಥನಹಳ್ಳಿ, ಉದ್ದಿಮಿಗಳಾದ ಗುರಲಿಂಗಪ್ಪ ಅಂಗಡಿ, ರಾಜು ಬಿಜ್ಜರಗಿ, ಗ್ರಾ. ಪಂ. ಅಧ್ಯಕ್ಷೆ ಪದ್ಮಾವತಿ ಗೌಡಪ್ಪಗೋಳ, ರಾಜುಗೌಡ ಪಾಟೀಲ, ರಾಮನಗೌಡ ಪಾಟೀಲ, ಸಂತೋಷ ಪೂಜಾರಿ, ನಾಗಪ್ಪ ಬಿದರಿ, ಸಂತೋಷ ಲೋಕುರಿ ಮುಂತಾದವರು ಉಪಸ್ಥಿತರಿದ್ದರು.

ನಿಜಲಿಂಗಯ್ಯ ಸ್ವಾಮೀಜಿ, ಸಂಗಯ್ಯ ಹಿರೇಮಠ ಅವರು ಪೂಜಾ ಕಾರ್ಯಕ್ರಮ ನೆರವೇರಿಸಿದರು.  ಗಿರೀಶ ಹೂಗಾರ ವಾದ್ಯಮೇಳ ನಡೆಸಿಕೊಟ್ಟರು.

ಶಿವಲಿಂಗಯ್ಯ ರೋಣಿಹಾಳಮಠ, ಅಡವಯ್ಯ ಹಿರೇಮಠ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌