ವಿಜಯಪುರ: ಮಹಾನಗರ ಪಾಲಿಕೆ ಮೇಯರ್ ತಮ್ಮದೇ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಟಾಂಗಾದಲ್ಲಿ ಸಾಮಾನ್ಯ ಸಭೆಗೆ ಆಗಮಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದ ಘಟನೆ ವಿಜಯಪುರದಲ್ಲಿ ನಡೆದಿದೆ.
ಬೆಳಿಗ್ಗೆ 11 ಗಂಟೆಗೆ ವಿಜಯಪುರ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ನಿಗದಿಯಾಗಿತ್ತು. ಈ ಸಂದರ್ಭದಲ್ಲಿ ಎಲ್ಲರೂ ಮೇಯರ್ ಮೆಹಜಬೀನ್ ಅಬ್ದುಲ್ ರಜಾಕ್ ಹೊರ್ತಿ ಆಗಮನಕ್ಕೆ ಕಾಯುತ್ತಿದ್ದರು. ಎಲ್ಲರೂ ಕಾರಿಗಾಗಿ ದಾರಿ ಕಾಯುತ್ತಿದ್ದರೆ, ಮೇಯರ್ ಮಾತ್ರ ವಿಜಯಪುರ ನಗರದಲ್ಲಿ ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸುವ ಟಾಂಗಾ ಬರುತ್ತಿರುವುದನ್ನು ಗಮನಿಸಿದರು. ಆ ಟಾಂಗಾ ಇಲ್ಲಿಗೇಕೆ ಬರುತ್ತಿದೆ ಎಂದು ಗಮನಿಸಿದಾಗ ಅದರಲ್ಲಿ ಮೇಯರ್ ತಮ್ಮ ಸಹಾಯಕರೊಂದಿಗೆ ಆಗಮಿಸಿದರು.
ಏಕಾಏಕಿ ನಡೆದ ಈ ಘಟನೆಯನ್ನು ಅಲ್ಲಿದ್ದವರಿಗೆ ಅಚ್ಚರಿ ಮೂಡಿಸಿತು. ಮೇಯರ್ ವಿನೂತನವಾಗಿ ಈ ರೀತಿ ಆಗಮಿಸುತ್ತಿದ್ದಾರೆ ಎಂದು ಚರ್ಚೆ ನಡೆಯಿತು. ಆದರೆ, ಈ ಕುರಿತು ಮೇಯರ್ ಅವರನ್ನು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ತಮ್ಮ ಈ ನಿರ್ಧಾರಕ್ಕೆ ಕಾರಣವನ್ನು ಅವರು ತಿಳಿಸಿದರು.
ತಮಗೆ ಬಳಕೆಗೆ ಹಳೆಯ ವಾಹನ ನೀಡಲಾಗಿದೆ. ಅಲ್ಲದೇ, ಅದಕ್ಕೆ ಚಾಲಕನನ್ನೂ ನೇಮಕ ಮಾಡಿಲ್ಲ. ಹಳೆಯ ವಾಹನದಲ್ಲಿ ಓಡಾಡಲು ಆಗುತ್ತಿಲ್ಲ. ಚಾಲಕನೂ ಇಲ್ಲದೇ ವಾಹನವನ್ನು ಹೇಗೆ ಉಪಯೋಗಿಸಬೇಕು ಎಂದು ಪ್ರಶ್ನಿಸಿದರು.
ನಮ್ಮದೇ ಸರಕಾರವಿದ್ದರೂ ಮಹಾನಗರ ಪಾಲಿಕೆ ಮೇಯರ್ ರನ್ನು ಉದಾಸೀನ ಮಾಡಲಾಗುತ್ತಿದೆ. ಮಹಾನಗರ ಪಾಲಿಕೆಯ ಸಜ್ಜನ ಮತ್ತು ಕಮೀಷನರ್ ಅವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ವಾಹನಕ್ಕೆ ಹಣವನ್ನು ತುಂಬಿಲ್ಲ. ಈ ವಿಷಯದ ಕುರಿತು ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಗಮನಕ್ಕೆ ತಂದರೂ ಅವರು ಊವರೆಗೆ ಸ್ಪಂಧಿಸಿಲ್ಲ ಎಂದು ಅವರು ಆರೋಪಿಸಿದರು.
ಈ ಹಿನ್ನೆಲೆಯಲ್ಲಿಯೇ ಸಭೆ ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿದ್ದರೂ, ತಡವಾಗಿ ಬರಬೇಕಾಯಿತು ಎಂದು ಮೇಯರ್ ಮೆಹಜಬೀನ್ ಅಬ್ದುಲ್ ರಜಾಕ್ ಹೊರ್ತಿ ಸ್ಪಷ್ಟಪಡಿಸಿದರು.
ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿದ ಪಾಕಿಸ್ತಾನ ಪರ ಘೋಷಣೆ ವಿಚಾರ
ಈ ಮಧ್ಯೆ, ಮೇಯರ್ ಆಗಮನದ ನಂತರ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ಪ್ರಾರಂಭವಾಯಿತು. ಈ ಸಭೆಯಲ್ಲಿ ವಿಧಾನ ಸೌಧದಲ್ಲಿ ನಡೆದಿದೆ ಎನ್ನಲಾದ ಪಾಕಿಸ್ತಾನ ಪರ ಘೋಷಣೆ ಹಾಕಿದ ಪ್ರಕರಣದ ಕುರಿತು ಚರ್ಚೆ ನಡೆಯಿತು. ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯ ಶಿವರುದ್ರ ಬಾಗಲಕೋಟ, ರಾಜು ಮಗಿಮಠ, ಪ್ರೇಮಾನಂದ ಬಿರಾದಾರ, ರಾಹುಲ ಜಾಧವ ಮುಂತಾದವರು ಮಾತನಾಡಿ, ದೇಶದ ದ್ರೋಹ ಘೋಷಣೆಗೆ ಖಂಡನಾ ನಿರ್ಣಯ ಕೈಗೊಳ್ಳುವಂತೆ ಮೇಯರ್, ಉಪಮೇಯರ್ ಹಾಗೂ ಆಯುಕ್ತರಿಗೆ ಆಗ್ರಹಿಸಿದರು.
ದೇಶ ದ್ರೋಹ ಘೋಷಣೆ ಹಾಕಿದವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಅವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯೆ ಆರತಿ ಶಹಾಪುರ ಮಾತನಾಡಿ, ದೇಶದ ದ್ರೋಹ ಘೋಷಣೆಯನ್ನು ಖಂಡಿಸಿದರು. ಆದರೆ, ದೇಶ ವಿರೋಧಿ ಘೋಷಣೆ ಹಾಕಿದ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಗೃಹ ಸಚಿವರು ಹೇಳಿದ್ದಾರೆ. ಈ ಹಂತದಲ್ಲಿ ಖಂಡನಾ ನಿರ್ಣಯ ಮಾಡುವುದು ಬೇಡ ಎಂದು ಹೇಳಿದರು. ಆಗ, ಆರತಿ ಶಹಾಪುರ ಮಾತಿಗೆ ಪಕ್ಷೇತರ ಸದಸ್ಯರು ದನಿಗೂಡಿಸಿದರು. ಆದರೂ, ಪಟ್ಟು ಬಿಡದ ಬಿಜೆಪಿ ಸದಸ್ಯರು ಖಂಡನಾ ನಿರ್ಣಯಕ್ಕೆ ಒತ್ತಾಯಿಸಿದರು.
ಕೊನೆಗೆ ಕಾಂಗ್ರೆಸ್ ಪಾಲಿಕೆ ಸದಸ್ಯರು ದೇಶದ್ರೋಹ ಘೋಷಣೆಗೆ ಖಂಡಿಸಿದ ನಂತರ ಬಿಜೆಪಿ ಸದಸ್ಯರು ಖಂಡನಾ ನಿರ್ಣಯ ಕೈಬಿಟ್ಟರು.