ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಸಮರ್ಪಕವಾಗಿ ಕಾರ್ಯ ನಿರ್ವಹಿಸಿ- ಆಯೋಗದ ಸದಸ್ಯ ಎಸ್. ಕೆ. ವಂಟಿಗೋಡಿ ಸಲಹೆ

ವಿಜಯಪುರ: ಸಾರ್ವಜನಿಕರ ಯಾವುದೇ ಸಮಸ್ಯೆಗಳಿಗೆ ಅಧಿಕಾರಿಗಳು ತುಂಬಾ ಜಾಗರೂಕತೆಯಿಂದ ಸಹಾನುಭೂತಿಯಿಂದ ಸಮಸ್ಯೆಗಳನ್ನು ಆಲಿಸಿ ನಿಮ್ಮ ಹಂತದಲ್ಲಿಯೇ ಪರಿಹರಿಸುವ ಮೂಲಕ ಮಾನವ ಹಕ್ಕುಗಳ ರಕ್ಷಣೆಗೆ ಮುಂದಾಗುವಂತೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಎಸ್. ಕೆ. ವಂಟಿಗೋಡಿ ಅವರು ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮಾನವ ಹಕ್ಕುಗಳ ಕುರಿತ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಮಾನವ ಹಕ್ಕುಗಳ ಸಂರಕ್ಷಣೆ, ಉಲ್ಲಂಘಣೆ ತಡೆಗಟ್ಟುವುದು, ಪರಿಹಾರ ಒದಗಿಸುವುದೇ ಮಾನವ ಹಕ್ಕುಗಳ ಮೂಲ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ತಮ್ಮ ಹಂತದಲ್ಲಿ ಬರುವ ಸಾರ್ವಜನಿಕರ  ಸಮಸ್ಯೆಗಳನ್ನು ಅತ್ಯಂತ ಜವಾಬ್ದಾರಿಯಿಂದ ಜಾಗರೂಕತೆಯಿಂದ ಆಲಿಸಿ, ಮಾನವೀಯ ನೆಲೆಗಟ್ಟಿನಲ್ಲಿ ಸಮಸ್ಯೆಗಳ ಮೂಲ ಗುರುತಿಸಿ ತಮ್ಮ ಹಂತದಲ್ಲಿಯೇ ಇತ್ಯರ್ಥಪಡಿಲು ಕ್ರಮ ವಹಿಸುವಂತೆ ಅವರು ಹೇಳಿದರು.

ವಿಜಯಪುರದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಎಸ್. ಕೆ. ವಂಟಿಗೋಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಸಾರ್ವಜನಿಕರ ಅಹವಾಲುಗಳಿಗೆ ಸಹಾನುಭೂತಿಯಿಂದ ಸ್ಪಂದಿಸಿ ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಮುಂಜಾಗ್ರತೆ ವಹಿಸಬೇಕು. ಮಾನವ ಹಕ್ಕುಗಳ ಘನತೆ ಮತ್ತು ಗೌರವ ಎತ್ತಿ ಹಿಡಿಯುವಂತೆ ಸಲಹೆ ನೀಡಿದ ಅವರು, ಜನರ ಒಳಿತಿಗಾಗಿ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ನ್ಯಾಯಯುತವಾಗಿ ಒದಗಿಸಬೇಕಾದ ಸರ್ಕಾರದ ಸೌಲಭ್ಯಗಳು ನೈಜ ಫಲಾನುಭವಿಗಳಿಗೆ ದೊರಕುವಂತೆ ನೋಡಿಕೊಳ್ಳಬೇಕು ಯಾವುದೇ ಪ್ರಕರಣಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.

ನೈಸರ್ಗಿಕವಾಗಿ ಪ್ರತಿಯೊಬ್ಬ ವ್ಯಕ್ತಿ ತನ್ನ ಹಕ್ಕುಗಳನ್ನು ಹೊಂದಿರುತ್ತಾನೆ. ಮೂಲಭೂತ ಸೌಲಭ್ಯ ಇರುವಂತೆ ನೋಡಿಕೊಳ್ಳಬೇಕು. ಯಾವುದೇ ವ್ಯಕ್ತಿ ತೊಂದರೆಗೊಳಗಾಗದಂತೆ ಅವರ ರಕ್ಷಣೆ ಮಾಡುವುದು ನಮ್ಮ ಕರ್ತವ್ಯವವಾಗಿದೆ. ಮಾನವ ಹಕ್ಕುಗಳ ಕುರಿತು ಸಾರ್ವಜನಿಕರಲ್ಲಿ ಸೂಕ್ತ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದ ಅವರು, ಈಗಾಗಲೇ ಆಯೋಗದಿಂದ ರಾಜ್ಯದ 7-8 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದು, ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದಲ್ಲಿ ಪರಿಶೀಲಿಸಿ ನ್ಯಾಯ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ದಾಖಲಾಗುವ ಮಾನವ ಹಕ್ಕುಳ ಉಲ್ಲಂಘನೆ ಪ್ರಕರಣಗಳ ಕುರಿತು ತ್ವರಿತವಾಗಿ ಇತ್ಯರ್ಥಪಡಿಸಲು ಕ್ರಮ ವಹಿಸಬೇಕು. ಜಿಲ್ಲೆಯ ವಸತಿ ನಿಲಯಗಳಲ್ಲಿ ಮಕ್ಕಳಿಗೆ ಒದಗಿಸಲಾಗಿರುವ ಆಹಾರ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಎಲ್ಲ ವಸತಿ ನಿಲಯಗಳಲ್ಲಿ ಸ್ವಚ್ಛತೆಗೆ ಪ್ರಥಮಾದ್ಯತೆ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಹೇಳಿದರು.

 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ ಸೋನಾವಣೆ ಅವರು ಮಾತನಾಡಿ, ಅಧಿಕಾರಿಗಳು ತಮ್ಮ ವಹಿಸಿದ ಜವಾಬ್ದಾರಿಗಳನ್ನು ಅತ್ಯಂತ ಸಮರ್ಪಕವಾಗಿ ನಿಭಾಯಿಸಬೇಕು. ಶಾಲೆಯಲ್ಲಿ ಶಿಕ್ಷಣದ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಆಯಾ ಇಲಾಖೆಗಳಲ್ಲಿ ದಾಖಲಾಗುವ ಯಾವುದೇ ಪ್ರಕರಣಗಳನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸಲು ಕ್ರಮ ವಹಿಸಬೇಕು. ತಮ್ಮ ಹಂತದಲ್ಲಿಯೇ ಇತ್ಯರ್ಥಪಡಿಸಬೇಕು. ಸಮಸ್ಯೆ ಯಾವುದಾದರಿದ್ದರೂ ಸಮಸ್ಯೆ ಕುರಿತು ಅರಿವು ಹೊಂದಬೇಕು. ಇದರಿಂದ ಸಮಸ್ಯೆ ಪರಿಹಾರಕ್ಕೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಸಮಸ್ಯೆ ಮೂಲ ಹುಡುಕಿ ತಮ್ಮ ಹಂತದಲ್ಲಿ ಇತ್ಯರ್ಥಪಡಿಸಲು ಕ್ರಮ ವಹಿಸಿ, ಸಾರ್ವಜನಿಕರ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸುವಂತೆ ಅವರು ಅಧಿಕಾರಿಗಳಿಗೆ ಸಲಹೆ ಅವರು ನೀಡಿದರು.

ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಇಂಡಿ ಉಪವಿಭಾಗಾಧಿಕಾರಿ ಆಬೀದ ಗದ್ಯಾಳ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮೂಗನೂರಮಠ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಶಿವಾನಂದ ಮಾಸ್ತಿಹೊಳಿ, ಜಂಟಿ ಕೃಷಿ ನಿರ್ದೇಶಕ ರಾಜಶೇಖರ ವಿಲಿಯಮ್ಸ್, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ನಿಂಗಪ್ಪ ಗೋಠೆ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ರಾಜಶೇಖರ ಧೈವಾಡಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌