ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಗೆ ಕ್ರಮ: ಸಚಿವ ಎಂ. ಬಿ. ಪಾಟೀಲ

ವಿಜಯಪುರ: ಜಿಲ್ಲೆಯಲ್ಲಿ ನಾನಾ ಕೈಗಾರಿಕೆಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.  ಆಹಾರ ಸಂಸ್ಕøರಣ ಘಟಕಗಳ ಸ್ಥಾಪನೆಯಿಂದ ಜಿಲ್ಲೆಯಲ್ಲಿ ಬೆಳೆಯಲಾದ ದ್ರಾಕ್ಷಿ ಸೇರಿದಂತೆ ನಾನಾ ಬೆಳೆಗಳಿಗೆ ಉತ್ತಮ ಬೆಲೆ ದೊರಕಿ ಆರ್ಥಿಕತೆ ವೃದ್ದಿಯಾಗಿ, ಸ್ಥಳೀಯವಾಗಿಯೇ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದ್ದು, ಜಿಲ್ಲೆಯ ಸರ್ವಾಂಗೀರ್ಣ ಅಭಿವೃದ್ದಿಗೆ ಶ್ರಮಿಸಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ. 

ತಿಕೋಟಾದಲ್ಲಿ ರೂ. 10 ಕೋ. ವೆಚ್ಚದಲ್ಲಿ ನಿರ್ಮಿಸಲಾದ ಮಿನಿ ವಿಧಾನಸೌಧ ಉದ್ಘಾಟನೆ ಹಾಗೂ ತಾಲೂಕಾ ಪಂಚಾಯತಿ ಮತ್ತು ಪಟ್ಟಣ ಪಂಚಾಯತಿಯ ನಾನಾ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೇವಲ ನೀರಾವರಿ ಯೋಜನೆಗಳಷ್ಟೇ ಅಲ್ಲದೇ ಕೆರೆಗಳಿಗೆ ನೀರು ತುಂಬಿಸುವುದು, ಶಿಕ್ಷಣ ಗುಣಮಟ್ಟ ಸುಧಾರಣೆ, ಶಾಲಾ ಕಟ್ಟಡಗಳ ಸುಧಾರಣೆ, ಸುಸಜ್ಜಿತ ಗ್ರಂಥಾಲಯಗಳ ನಿರ್ಮಾಣ, ಸ್ಮಾರ್ಟ್ ಕ್ಲಾಸ್‍ಗಳ ಆರಂಭ, ಅರಣ್ಯ ಪ್ರದೇಶಾಭಿವೃದ್ದಿ, ಜಿಲ್ಲೆಯ ಮಮದಾಪುರದಲ್ಲಿ 1400 ಎಕರೆ ಪ್ರದೇಶದಲ್ಲಿ ಅರಣ್ಯ ಅಭಿವೃದ್ದಿ, ಗ್ರಾಮೀಣ ರಸ್ತೆ ಅಭಿವೃದ್ದಿಗೂ ಒತ್ತು ನೀಡುವ ಮೂಲಕ ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಗೆ ಕ್ರಮ ವಹಿಸಲಾಗುತ್ತಿದೆ ಎಂದು ಅವರು ಹೇಳಿದರು.

ವಿಜಯಪುರ ಜಿಲ್ಲೆಯ ತಿಟೋಕಾದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಎಂ. ಪಾಟೀಲ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದ ನಮ್ಮ ಸರ್ಕಾರ ಚುನಾವಣೆಗೆ ಪೂರ್ವ ಘೊಷಿಸಿದಂತೆ ಎಲ್ಲ ಗ್ಯಾರಂಟಿಗಳನ್ನು ನೀಡುವ ಮೂಲಕ ನುಡಿದಂತೆ ನಡೆಯುತ್ತಿದ್ದೇವೆ. ಸವಾರ್ಂಗೀಣ ಅಭಿವೃದ್ಧಿಗೆ ನಮ್ಮ ಸರ್ಕಾರ ಒತ್ತು ನೀಡಿದೆ. ಆರ್ಥಿಕವಾಗಿ ಸಬಲರಾಗಲು ಈ ಯೋಜನೆ ಸಹಕಾರಿಯಾಗಿವೆ ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ ಅನ್ನಭಾಗ್ಯ ಹಾಗೂ ಯುವ ನಿಧಿ ಯೋಜನೆ ಎಲ್ಲ ವರ್ಗದ ಜನರಿಗೆ ಅನುಕೂಲ ಒದಗಿಸಿದೆ ಎಂದು ಅವರು ಹೇಳಿದರು.

ತಿಕೋಟಾ ಹಾಗೂ ಬಬಲೇಶ್ವರ ಮಿನಿ ವಿಧಾನಸೌಧ 6 ತಿಂಗಳ ಹಿಂದೆ ಉದ್ದಾಟನೆಯಾಗಬೇಕಾಗಿತ್ತು. ಕಾರಣಾಂತರಗಳಿಂದ ಉದ್ಘಾಟನೆಯಾಗಲು ಸಾಧ್ಯವಾಗಿರುವುದಿಲ್ಲ. ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಸುಸಜ್ಜಿತ ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ, ಸಬ್ ರಜಿಸ್ಟರ್ ಸೇರಿದಂತೆ ಎಲ್ಲ ಇಲಾಖೆ ಕಚೇರಿಗಳು ಒಂದೇ ಸ್ಥಳದಲ್ಲಿರುವುದರಿಂದ ಸಾರ್ವಜನಿಕರು ಕೆಲಸ ಕಾರ್ಯಗಳಿಗೆ ಕಚೇರಿಗಳ ಅಲೆದಾಟ ತಪ್ಪಿಸಿ ಒಂದೇ ಸ್ಥಳದಲ್ಲಿ ಸೇವೆ ದೊರಕಲಿರುವುದರಿಂದ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಅತಿ ಎತ್ತರದ ಪ್ರದೇಶವೆಂದೇ ಹೇಳಲಾದ ತಿಕೋಟಾದಲ್ಲಿ ನೀರಾವರಿ ಯೋಜನೆ ಜಾರಿಗೊಳಿಸುವುದು ಅಸಾಧ್ಯವೆಂದೇ ಹೇಳಲಾಗುತ್ತಿದ್ದರೂ ಸಹ ಇಚ್ಛಾಶಕ್ತಿಯಿದ್ದರೇ ಏನೇಲ್ಲ ಸಾಧಿಸಬಹುದೆಂಬುದಕ್ಕೆ ತಿಕೋಟಾ ಕ್ಷೇತ್ರವೇ ಸಾಕ್ಷಿ ಎಂದು ಹೇಳಬಹುದು. ಪೂಜ್ಯ ಶ್ರೀಗಳ ಪ್ರೇರಣೆಯಿಂದ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿದ್ದರಿಂದ ತೀವ್ರ ಭೀಕರ ಬರಗಾಲ ಪರಿಸ್ಥಿತಿ ಇದ್ದರೂ ಸಹ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗಿಲ್ಲ. 3600 ಕೋಟಿ ರೂ. ತಾಲೂಕಿನ ನೀರಾವರಿಗೆ ವೆಚ್ಚ ಮಾಡಲಾಗಿದೆ. ತಿಕೋಟಾ ತಾಲೂಕಿಗೆ 6.8 ಟಿಎಂಸಿ ನೀರು ದೊರಕಿದೆ ಎಂದು ಸಚಿವರು ಹೇಳಿದರು.

ಕಳೆದ ಬರಗಾಲ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ 711 ಟ್ಯಾಂಕರ್ ಮೂಲಕ ನೀರು ಒದಗಿಸಲಾಗಿತ್ತು. ಆದರೆ ಕಳೆದ ಸಲಕ್ಕಿಂತ ಭೀಕರ ಬರಗಾಲ ಜಿಲ್ಲೆಯಲ್ಲಿವಿದ್ದರೂ ಸಹ ನೀರಾವರಿ ಯೋಜನೆಗಳಿಂದ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗಿಲ್ಲ. ಜಿಲ್ಲೆಯಾದ್ಯಂತ ಕೇವಲ 55 ಟ್ಯಾಂಕರ್‍ಗಳ ಮೂಲಕ ಮಾತ್ರ ನೀರು ಪೂರೈಸಲಾಗುತ್ತಿದೆ. ತಿಡಗುಂದಿ, ಚಡಚಣ, ಹೊರ್ತಿ, ಇಂಗಳೇಶ್ವರ, ಗುಂದವಾಣ, ಇಂಚಗೇರಿ, ಜಿಗಜೇವಣಗಿ ಸೇರಿದಂತೆ 16 ಕೆರೆ ತುಂಬಿಸುವುದರಿಂದ ನೀರಿನ ಭವಣೆ ಸಂಪೂರ್ಣ ನಿವಾರಣೆಯಾಗಲಿದೆ ಎಂದು ಎಂ. ಬಿ. ಪಾಟೀಲ ಹೇಳಿದರು.

ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ತಿಕೋಟಾ ಆಡಳಿತ ಸೌಧ ಉದ್ಘಾಟನೆಗೊಂಡಿದ್ದು, ಮುಂಬರುವ ದಿನಗಳಲ್ಲಿ ಬಬಲೇಶ್ವರ ತಾಲೂಕಾ ಸೌಧ ಉದ್ಘಾಟನೆಯಾಗಲಿದೆ. ಆಡಳಿತ ಸೌಧದಲ್ಲಿ ವಿವಿಧ ಕಚೇರಿಗಳ ಕಾರ್ಯನಿರ್ವಹಣೆಯಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಎಸ್ಪಿ ಋಷಿಕೇಶ ಸೋನಾವಣೆ, ಜಿ. ಪಂ. ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ವಿಜಯಪುರ ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ವಿಜಯಕುಮಾರ ಮೆಕ್ಕಳಕಿ, ತಹಶೀಲ್ದಾರ ಸುರೇಶ ಮುಂಜೆ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌