ವಿಜಯಪುರ: ವಿಜಯಪುರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಬಯಸಿ 11 ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ವಿಜಯಪುರ ಎಸ್ ಸಿ ಮೀಸಲು ಕ್ಷೇತ್ರದ ಟಿಕೆಟ್ ನೀಡಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ ಹೇಳಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಕೆಟ್ ವಿಚಾರದಲ್ಲಿ ಪಕ್ಷದ ಹೈಕಮಾಂಡ ಯಾವ ತೀರ್ಮಾನ ಕೈಗೊಳ್ಳತ್ತೋ ಅದಕ್ಕೆ ಎಲ್ಲರೂ ಬದ್ಧರಾಗಿರುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಸರಕಾರದಿಂದ ಬಡವರ ಸರ್ವಾಂಗೀಣ ಅಭಿವೃದ್ಧಿ
ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನ ಮಾಡುವ ಮೂಲಕ ಬಡವರ ಸರ್ವಾಂಗೀಣ ಮಾಡಲಾಗುತ್ತಿದೆ. ಕಾಂಗ್ರೆಸ್ ನುಡಿದಂತೆ ನಡೆಯುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮೂಲಕ ಜನರ ಆದಾಯ ದ್ವಿಗುಣಗೊಳ್ಳುವಂತೆ ಮಾಡಿದೆ. ಈ ಯೋಜನೆಗಳು ಜಾತ್ಯತೀತ ಮತ್ತು ಪಕ್ಷಾತೀತವಾಗಿ ಎಲ್ಲರಿಗೂ ಅನುಕೂಲವಾಗಿವೆ. ರಾಜ್ಯದ ಸುಮಾರು ಶೇ. 50 ರಷ್ಟು ಜನ ಉಚಿತ ಬಸ್ ಪ್ರಯಾಣದ ಲಾಭ ಪಡೆದಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಎರಡು ಕೋಟಿಗೂ ಅಧಿಕ ಕುಟುಂಬಗಳು ಲಾಭ ಪಡೆಯುತ್ತಿವೆ. ಯುವನಿಧಿ ಯೋಜನೆಯಡಿ ಸುಮಾರು ಎರಡು ಲಕ್ಷಕ್ಕೂ ಅಧಿಕ ನಿರುದ್ಯೋಗಿಗಳು ಹೆಸರು ನೋಂದಾಯಿಸಿದ್ದಾರೆ. ಹತ್ತಾರು ಯೋಜನೆಗಳನ್ನು ಕಾಂಗ್ರೆಸ್ ಜಾರಿಗೊಳಿಸಿದೆ ಎಂದು ಅವರು ಹೇಳಿದರು.
ಆದರೆ, ಪ್ರತಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುತ್ತೇವೆ. ವಿದೇಶದಿಂದ ಕಪ್ಪುಹಣ ತಂದು ಬಡವರ ಖಾತೆಗೆ ರೂ. 15 ಲಕ್ಷ ಹಣ ಹಾಕುತ್ತೇವೆ. ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ ಎಂದು ಹೇಳಿದ ಬಿಜೆಪಿ ನೀಡಿದ ಭರವಸೆಗಳನ್ನು ಈಡೇರಿಸದೇ ಈಗ ದೇವರು ಮತ್ತು ಧರ್ಮದ ಮೊರೆ ಹೋಗಿದೆ. ಬಿಜೆಪಿ ದೇವಸ್ಥಾನಗಳ ಹಣವನ್ನು ಬೇರೆ ಕೆಲಸಗಳಿಗೆ ಬಳಸಲಾಗುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದೆ. ವಾಸ್ತವ ಬೇರೆಯಿದೆ ಎಂದು ಅವರು ಹೇಳಿದರು.
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ದೇಶದ ಭದ್ರತೆ ವಿಚಾರದಲ್ಲಿ ರಾಜಕೀಯ ಸರಿಯಲ್ಲ. ಕಾಂಗ್ರೆಸ್ ಅವಧಿಯಲ್ಲಿ ಈ ಹಿಂದೆ ಪಾಕಿಸ್ತಾನದ ವಿರುದ್ಧ ಎರಡು ಬಾರಿ ಯುದ್ದ ಮಾಡಿ ಭಾರತ ಗೆದ್ದಿದೆ. ಕಾಂಗ್ರೆಸ್ ದೇಶವಿರೋಧಿಗಳನ್ನು ಸಹಿಸುವುದಿಲ್ಲ ಎಂದು ಅವರು ಹೇಳಿದರು.
ಲಖನೌದಲ್ಲಿ ಪ್ರಧಾನಿ ನರೇಂದ್ರ ಮೋದಿ ನಡೆಸಿದ ಜಾಥಾದಲ್ಲಿ ಅರ್ಧದಷ್ಟು ಜನ ಸಹ ಇರಲಿಲ್ಲ. ಇದು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂಬುದಕ್ಕೆ ಸಾಕ್ಷಿಯಾಗಿದೆ. ಅಡುಗೆ ಅನಿಲ ದರ ಏರಿಕೆಯಾಗಿದೆ. ಯುಪಿಎ ಅವಧಿಯಲ್ಲಿ ಕೇವಲ ರೂ. 400ಕ್ಕೆ ಸಿಗುತ್ತಿದ್ದ ಅಡುಗೆ ಅನಿಲ ದರ ಇದೀಗ ರೂ. 1200ಕ್ಕೆ ಏರಿಕೆಯಾಗಿದೆ. ಉಚಿತ ಸಿಲಿಂಡರ್ ನೀಡಿದ ಮೋದಿ ಸರಕಾರ ಅದಕ್ಕೆ ಅನಿಲ ತುಂಬಿಸಲು ಹಣವನ್ನು ನೀಡಿಲ್ಲ. ಜನ ಬೆಲೆ ಏರಿಕೆಯಿಂದ ಬೇಸತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ. ಲೋಕಸಭೆ ಚುನಾವಣೆಯಲ್ಲೂ ಜನ ಕಾಂಗ್ರೆಸ್ಸಿಗೆ ಬೆಂಬಲ ವ್ಯಕ್ತಪಡಿಸಲಿದ್ದಾರೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸುಭಾಸ ಛಾಯಾಗೋಳ, ಡಾ. ಗಂಗಾಧರ ಸಂಬಣ್ಣಿ, ಸುರೇಶ ಘೊಣಸಗಿ, ಟಪಾಲ ಎಂಜಿನಿಯರ್, ವೈಜನಾಥ ಕರ್ಪೂರಮಠ, ಚಂದ್ರಶೇಖರ ಕೊಟಬಾಗಿ ಸಾಹೇಬಗೌಡ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.