ವಿಜಯಪುರ: ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರಕಾರ ಪತನವಾಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಭವಿಷ್ಯ ನುಡಿದಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಾತಿ ಗಣತಿ ಸ್ವೀಕಾರ ಮಾಡಿರುವುದರಿಂದ ಸರಕಾರ ಪತನವಾಗಲಿದೆ. 50-60 ಶಾಸಕರಿಂದ ಸರಕಾರ ಬೀಳಲಿದೆ. ಈ ಸರಕಾರ ಬಹಳ ದಿನ ಮುಂದೆವರೆಯುವುದಿಲ್ಲ ಎಂದು ಅವರು ತಿಳಿಸಿದರು.
ಜಾತಿ ಗಣತಿ ಸ್ವಿಕಾರ ವಿಚಾರವಾಗಿ ಕಾಂಗ್ರೆಸ್ಸಿನಲ್ಲಿ ಅಸಮಧಾನ ಭುಗಿಲೆದ್ದಿದೆ. ಕಾಂಗ್ರೆಸ್ಸಿನ ಶಾಸಕರಾದ ಶಾಮನೂರ ಶಿವಶಂಕ್ರಪ್ಪ, ವಿನಯ ಕುಲಕರ್ಣಿ, ಸಚಿವರಾದ ಲಕ್ಷ್ಮಿ ಹೆಬ್ಬಾಳಕರ, ಮಧು ಬಂಗಾರಪ್ಪ ಅವರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಲೋಕಸಭೆ ಚುನಾವಣೆಯ ನಂತರ ರಾಜ್ಯ ಸರಕಾರ ಪತನ ನಿಶ್ಚಿತವಾಗಿದೆ ಎಂದು ಅವರು ಭವಿಷ್ಯ ನುಡಿದರು.
ಜಾತಿ ಗಣತಿಗೆ ನಮ್ಮ ವಿರೋಧವಿಲ್ಲ. ಬಹುತೇಕ ಜನರ ಮನೆಗೆ ಹೋಗದೇ ವರದಿ ತಯಾರಿಸಲಾಗಿದೆ. ಮತ್ತೋಮ್ಮೆ ಸಮೀಕ್ಷೆ ನಡೆಸಬೇಕು. ಇದೇ ನೆಪದಲ್ಲಿ ಸರಕಾರ ಪತನವಾಗಲಿ ಎಂಬುದು ಅವರ ಮನಸ್ಸಿನಲ್ಲಿರಬೇಕು. ಈ ಜಾತಿ ವರದಿ ಸ್ವೀಕಾರ ಮಾಡಿದ್ದನ್ನು ಯಾವುದೇ ಪರಿಸ್ಥಿತಿಯಲ್ಲಿ ಸರಕಾರ ಒಪ್ಪಬಾರದು. ಒಂದು ವೇಳೆ ಒಪ್ಪಿದರೆ ಕರ್ನಾಟಕದಲ್ಲಿ ಬಹಳ ದೊಡ್ಡ ಅನಾಹುತ ಅನಾಹುತ ಉಂಟಾಗಲಿದೆ ಎಂದು ಅವರು ಹೇಳಿದರು.
ಪ್ರತಿದಿನ ಒಬ್ಬೊಬ್ಬ ನಾಯಕರು ಮತದಾರರ ವಿರುದ್ಧ ಒಂದೊಂದು ರೀತಿ ಹೇಳಿಕೆ ನೀಡಿ ಜನರನ್ನು ಬ್ಲ್ಯಾಕ್ ಮೇಲ್ ಮಾಡಿ ಲೋಕಸಭೆ ಚುನಾವಣೆಯಲ್ಲಿ ಮತ ಪಡೆಯಲು ಹುನ್ನಾರ ನಡೆಸಿದ್ದಾರೆ. 28 ಲೋಕಸಭೆಯಲ್ಲಿ ಬಿಜೆಪಿ ಗೆಲ್ಲುವ ಭಯದಿಂದ ಹತಾಶರಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ಸಿದ್ಧರಾಮಯ್ಯ ಸರಕಾರ ಯಾರೂ ನಿರೀಕ್ಷಿಸದ ರೀತಿಯಲ್ಲಿ ಪತನವಾಗಲಿದೆ ಎಂದು ಅವರು ಹೇಳಿದರು.
ಗ್ಯಾರಂಟಿ ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ಜನರಿಗೆ ತಲುಪಿಲ್ಲ. ಶಾಸಕರ ಕ್ಷೇತ್ರಗಳಿಗೂ ಅನುದಾನ ಸಿಗುತ್ತಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಒಂದು ರೂಪಾಯಿಯನ್ನೂ ಇಟ್ಟಿಲ್ಲ. ಶಾಸಕರಷ್ಟೇ ಅಲ್ಲ, ಏಳೆಂಟೂ ಜನ ಸಚಿವರೂ ಅಸಮಾಧಾನ ಹೊಂದಿದ್ದು, ಎಲ್ಲರೂ ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಎಂದು ಅವರು ಹೇಳಿದರು.
ಎಫ್ ಎಸ್ ಎಲ್ ವರದಿ ದೃಢ ವಿಚಾರ
ಪಾಕಿಸ್ತಾನ ಪರ ಘೋಷಣೆ ವಿಚಾರ ಕುರಿತು ಕಿಡಿಕಾರಿದ ಯತ್ನಾಳ, ನಾಸೀರ ಹುಸೇನ್ ಜಿಂದಾಬಾದ ಎಂದರೆ ನಮ್ಮ ತಕರಾರಿಲ್ಲ. ಆದರೆ, ಪಾಕಿಸ್ತಾನ ಪರ ಘೋಷಣೆ ಹಾಕಿರುವುದನ್ನು ಎಲ್ಲ ಮಾಧ್ಯಮದವರು ಪ್ರಸಾರ ಮಾಡಿದ್ದರು. ಅದನ್ನು ಸರಕಾರ ನಂಬಲಿಲ್ಲ. ಈ ಪ್ರಕರಣವನ್ನು ಜಮೀರ್ ಅಹ್ಮದ್, ಸಿ. ಎಂ. ಇಬ್ರಾಹಿಂ ಅಗಲಿ ಯಾವೊಬ್ಬ ಮುಸ್ಲಿಂ ನಾಯಕರು, ಸಚಿವರು ಖಂಡಿಸಲಿಲ್ಲ. ಈ ಮೂಲಕ ಅವರು ಸಿದ್ದರಾಮಯ್ಯ ಅವರ ಮರ್ಯಾದೆ ತೆಗೆದಿದ್ದಾರೆ. ಈಗಲಾದರೂ ಸಿದ್ಧರಾಮಯ್ಯ ಮುಸ್ಲಿಮರ ತುಷ್ಠಿಕರಣ ಬಿಡಲಿ. ಮುಸ್ಲಿಮರ ತುಷ್ಠಿಕರಣ ಅತೀಯಾಗಿದೆ. ಹಿಂದುಳಿದ ಮತ್ತು ಇತರ ವರ್ಗಗಳಲ್ಲಿರುವ ಬಡವರ ಪರ ಸಿಎಂ ಕಾಳಜಿ ತೋರಲಿ. ಇತರ ಬಡ ಜನರ ಪರ ರೂ. 10 ಸಾವಿರ ಕೋ. ಅನುದಾನ ನೀಡಲಿ. ಎಲ್ಲ ಸಮುದಾಯದವರು ನಿಮಗೆ ಮತ ಹಾಕಿದ್ದಾರೆ. ಈ ಘಟನೆಯಿಂದ ಸಿದ್ಧಮರಾಮಯ್ಯ ಅವರಿಗೆ ಅವಮಾನವಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಸಿದ್ಧರಾಮಯ್ಯ ರಿಗೆ ರಾಜ್ಯದ ಜನರಿಗೆ ಭದ್ರತೆ ನೀಡಲು ಆಗುವುದಿಲ್ಲ ಎಂಬುದು ಸಾಬೀತಾಗುತ್ತದೆ ಎಂದು ಶಾಸಕರು ವಾಗ್ದಾಳಿ ನಡೆಸಿದರು.
ಎಲ್ಲ ಮಾಧ್ಯಮಗಳು ಈ ಕುರಿತು ವರದಿ ಪ್ರಸಾರ ಮಾಡಿದ್ದರೂ ಅವರು ಗಂಭೀರವಾಗಿ ಪರಿಗಣಿಸಲಿಲ್ಲ. ಬಜೆಟ್ ಕುರಿತು ಮಾಧ್ಯಮ ವರದಿಗಳನ್ನು ಸಿಎಂ ಶ್ಲಾಘಿಸಿದ್ದರು. ಈಗ ಮಾಧ್ಯಮಗಳನ್ನೇ ನಂಬುತ್ತಿಲ್ಲ. ಮಾಧ್ಯಮಗಳು ತಮ್ಮ ಪರವಾಗಿ ವರದಿ ಮಾಡಿದರೆ ಶ್ಲಾಘಿಸುತ್ತಾರೆ. ತಪ್ಪು ಮಾಡಿದಾಗ ಸುದ್ದಿ ಪ್ರಕಟಿಸಿದರೆ ನೊಟೀಸ್ ನೀಡುತ್ತಾರೆ. ಕಾಂಗ್ರೆಸ್ ನಾಯಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಜೆ. ಪಿ. ನಡ್ಡಾ ಕರೆ ಮಾಡಿದ್ದರು
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರು ತಡರಾತ್ರಿ ನನಗೆ ಕರೆ ಮಾಡಿದ್ದರು. ಬೆಳಗಾವಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಇಂದು ವಿಜಯಪುರದಲ್ಲಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದೇನೆ. ನಾಳೆ ನಾನು ಬೆಳಗಾವಿಗೆ ತೆರಳಿ ರಾಷ್ಟ್ರೀಯ ಅಧ್ಯಕ್ಷರ ಸಭೆಯಲ್ಲಿ ಪಾಲ್ಗೋಳ್ಳುತ್ತೇನೆ ಎಂದು ಅವರು ಇದೇ ವೇಳೆ ತಿಳಿಸಿದರು.
ಯಾರಿಗೆ ಟಿಕೆಟ್ ನೀಡಿದರೂ ಬಿಜೆಪಿ ಪರ ಕೆಲಸ ಮಾಡುತ್ತೇನೆ
ವಿಜಯಪುರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಯಾರಿಗೇ ಟಿಕೆಟ್ ನೀಡಿದರೂ ನಾವು ಅವರ ಪರ ಕೆಲಸ ಮಾಡುತ್ತೇವೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ. ಹಾಲಿ ಸಂಸದ ರಮೇಶ ಜಿಗಜಿಣಗಿಯಾಗಲಿ ಅಥವಾ ಬೇರೆ ಯಾರಿಗೇ ಆಗಲಿ ಟಿಕೆಟ್ ನೀಡಿದರೂ ನಾವು ಪಕ್ಷದ ಪರವಾಗಿ ಕೆಲಸ ಮಾಡುತ್ತೇವೆ. ದಲಿತ ಸಮುದಾಯದ ಯುವಕನಿಗೆ ಟಿಕೆಟ್ ನೀಡಿದರೂ ಅವರ ಪರವಾಗಿ ಕೆಲಸ ಮಾಡುತ್ತೇವೆ. ಮೋದಿ ಪ್ರಧಾನಿ ಮಾಡಿಲು ಎಲ್ಲರೂ ಕೈಜೋಡಸಲಿದ್ದೇವೆ ಎಂದು ಅವರು ತಿಳಿಸಿದರು.
ರಮೇಶ ಜಿಗಜಿಣಗಿ ಅವರಿಗೆ ಅನಾರೋಗ್ಯದ ವದಂತಿ ವಿಚಾರ
ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರ ಆರೋಗ್ಯ ಸಮಸ್ಯೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಸಂಸದರ ಆರೋಗ್ಯದ ಬಗ್ಗೆ ಅವರ ಪುತ್ರ ವಿನೋದ ಜಿಗಜಿಣಗಿ ಅವರೇ ಆತಂಕ ಬೇಡ ಎಂದು ಸ್ಪಷ್ಟಪಡಿಸಿದ್ದಾರೆ. ಅವರ ಕುಟುಂಬವೇ ಹೇಳಿದ ಮೇಲೆ ಯಾರೂ ಅಪಪ್ರಚಾರ ಮಾಡಬಾರದು. ರಾಜಕೀಯ ಕಾರಣಕ್ಕಾಗಿ ಸುಳ್ಳು ವಂದತಿ ಹಬ್ಬಿಸುತ್ತಿದ್ದಾರೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಟೆಕೆಟ್ ನೀಡುವುದು ಹೈಕಮಾಂಡ್ ನಿರ್ಧಾರ. ಈವರೆಗೂ ಯಾವ ಕ್ಷೇತ್ರಕ್ಕೂ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ ಎಂದು ಶಾಸಕರು ಸ್ಪಷ್ಟಪಡಿಸಿದರು.
ರಾಜ್ಯ ಸರಕಾರದಲ್ಲಿ 50 ಪರ್ಸೆಂಟ್ ಭ್ರಷ್ಟಾಚಾರ
ರಾಜ್ಯ ಸರಕಾಕಾರದಲ್ಲಿ 50 ಪರ್ಸೆಂಟ್ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ ಅವರು, ಗುತ್ತಿಗೆದಾರರು 13 ಪರ್ಸೆಂಟ್ ಕಮಿಷನ್ ನೀಡದಿದ್ದರೆ ಅ;ರಿಗೆ ಎನ್ಓಸಿ ಕೊಡುತ್ತಿಲ್ಲ. ಕೇಳಗಿನದ್ದು ಮತ್ತೇ ಅದೇಲ್ಲ ಬೇರೆ ಬೇರೆ ಇದೆ. ಎಲ್ಲಾ ಸೇರಿದರೆ 50% ಕಮೀಷನ್ ಗೆ ಬಂದು ನಿಲ್ಲುತ್ತದೆ. ನಮ್ಮ ಸರಕಾರದ ವಿರುದ್ಧ 40% ಎಂದು ಆರೋಪ ಮಾಡುತ್ತಿದ್ದರು. ಆದರೆ, ಇವರು 50% ಗೆ ಬಂದು ನಿಂತಿದ್ದಾರೆ. ಇದು 50% ಸರಕಾರವಾಗಿದೆ. ಬಿಬಿಎಂಪಿ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪರಿಸ್ಥಿತಿ ಇದೆ. ಮನೆ, ಮಠ ಮಾರಾಟ ಮಾಡಿ, ಸಾಲ ಮಾಡಿದ್ದರೂ ಬಡ್ಡಿ ತುಂಬಲು ಗುತ್ತಿಗೆದಾರರಿಂದ ಸಾಧ್ಯವಾಗುತ್ತಿಲ್ಲ. ಈಗಿನ ಭ್ರಷ್ಟಾಚಾರ ನೋಡಿದರೆ ನಿಮ್ಮ ಸರಕಾರವೇ ಉತ್ತಮ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. ವಿಜಯೆಂದ್ರ ಬಹಳ ಉತ್ತಮವಾಗಿದ್ದರು ಎಂದು ಗುತ್ತಿಗೆದಾರ ಹೇಳುತ್ತಿದ್ದಾರೆ ಎಂದು ಶಾಸಕ ಯತ್ನಾಳ ಹೇಳಿದರು.