ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಡಾ. ಎಲ್. ಎಚ್. ಬಿದರಿ ನೇತೃತ್ವದ ಹೋರಾಟ ಸಮಿತಿ ಭೇಟಿ

ವಿಜಯಪುರ: ಜಿಲ್ಲೆಯ ಬುರಣಾಪುರ ಬಳಿ ನಿರ್ಮಿಸಲಾಗುತ್ತಿರುವ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ವಿಮಾನ ನಿಲ್ದಾಣ ಹೋರಾಟ ಸಮಿತಿ ಸಂಚಾಲಕ ಡಾ. ಎಚ್. ಎಚ್. ಬಿದರಿ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಕಾಮಗಾರಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಸಮಿತಿ ಸದಸ್ಯರು, ನಡೆದಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಂತಸ ವ್ಯಕ್ತಪಡಿಸಿದರು.  ವಿಮಾನ ನಿಲ್ದಾಣದ ಟರ್ಮಿನಲ್ ಮ್ಯಾನೇಜರ್ ಮಹೇಶ ನಿಲ್ದಾಣದಲ್ಲಿರುವ ಎಲ್ಲ ವಿಭಾಗಗಳನ್ನು ತೋರಿಸಿ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು.  ಭದ್ರತಾ ವಿಭಾಗದ ಮುಖ್ಯಸ್ಥ ಭೀಮಪ್ಪಾ ಕೆ. ಮತ್ತು ಆಲೂರ ಕನಸ್ಟ್ರಕ್ಷನ್ ನ ಮಂಜುನಾಥ ಗಣಿ ಕೂಡ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಮಾಹಿತಿ ನೀಡಿದರು.

ಈಗ ತುರ್ತ ಸೇವೆ, ಅಗ್ನಿಶಾಮಕ ಘಟಕದ ಅನುಮೋದನೆ ಬರುವುದು ಬಾಕಿಯಿದ್ದು, ಕೆಲವೇ ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣವಾಗಿ ವಿಮಾನ ಹಾರಾಟಕ್ಕೆ ಹಸಿರು ನಿಶಾನೆ ಸಿಗಲಿದೆ ಎಂದು ಅವರು ಹೇಳಿದರು.

ವಿಜಯಪುರ ಜಿಲ್ಲೆಯ ಬುರಣಾಪುರ ಬಳಿ ನಿರ್ಮಿಸಲಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಹೋರಾಟ ಸಮಿತಿ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅತ್ಯಾಧುನಿಕ ತಾಂತ್ರಿಕ ಸೌಲಭ್ಯ ಮತ್ತು ವಿನ್ಯಾಸಗಳೊಂದಿಗೆ ಪ್ರತಿಯೊಂದು ವಿಭಾಗ ಆಕರ್ಷಕವಾಗಿವುದಕ್ಕೆ ಸಮಿತಿ ಸದಸ್ಯರು ಸಂತಸ ವ್ಯಕ್ತಪಡಿಸಿದರು.  ಇದಕ್ಕೆ ಕಾರಣರಾದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರನ್ನು ಈ ಸಂದರ್ಭದಲ್ಲಿ ಸಮಿತಿ ವತಿಯಿಂದ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಎಲ್. ಎಚ್. ಬಿದರಿ, 2021ರ ಫೆಬ್ರವರಿಯಲ್ಲಿ ಪ್ರಾರಂಭವಾದ ಕಾಮಗಾರಿ ಈಗ ಬಹುತೇಕ ಮುಕ್ತಾಯದ ಹಂತದಲ್ಲಿದ್ದು, ಮುಂಬರುವ ಜೂನ್ ತಿಂಗಳಲ್ಲಿ ಲೋಕಾರ್ಪಣೆಯಾಗುವ ನಿರೀಕ್ಷೆಯಿದೆ.  ಪ್ರತಿದಿನ ಬೆಳಿಗ್ಗೆ 7ಕ್ಕೆ ಬೆಂಗಳೂರಿನಿಂದ ವಿಜಯಪುರಕ್ಕೆ ಮತ್ತು ವಿಜಯಪುರದಿಂದ ಬೆಂಗಳೂರಿಗೆ ಬೆಳಿಗ್ಗೆ 8.30ಕ್ಕೆ ಹಾಗೂ ಸಂಜೆ 5ಕ್ಕೆ ವಿಜಯಪುರದಿಂದ ಬೆಂಗಳೂರು ಹಾಗೂ ಸಂಜೆ ಬೆಂಗಳೂರಿನಿಂದ ವಿಜಯಪುರಕ್ಕೆ ಸಂಜೆ 6.30ಕ್ಕೆ ವಿಮಾನಯಾನ ಸಮಯ ನಿಗದಿ ಪಡಿಸಬೇಕು ಎಂಬುದು ಜಿಲ್ಲೆಯ ಜನರ ಬೇಡಿಕೆಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಮಿತಿಯ ಸಹ-ಸಂಚಾಲಕ ರಾಜು ಗಚ್ಚಿನಮಠ, ಸದಸ್ಯರಾದ ಮಲ್ಲಮ್ಮ ಯಾಳವಾರ, ಪ್ರಕಾಶ ಮಠ, ಅನೀಲ ಥೊಬ್ಬಿ, ಅರ್ಜುನ ಕೋಕರೆ, ನಂದಲಾಲ ರುಣವಾಲ, ಲೋಕೋಪಯೋಗಿ ಇಲಾಖೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ರಾಜು ಮುಜುಂದಾರ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌