ವೃತ್ತಿ ಬದುಕಿನ ಆಯ್ಕೆಯಲ್ಲಿ ಪೂರಕ ಮಾಹಿತಿ ಸರಿಯಾಗಿ ಬಳಸಿಕೊಳ್ಳಬೇಕು- ಪ್ರೊ. ಬಿ. ಕೆ. ತುಳಸಿಮಾಲಾ

ವಿಜಯಪುರ: ವೃತ್ತಿ ಬದುಕಿನ ಆಯ್ಕೆಯಲ್ಲಿ ಪೂರಕ ಮಾಹಿತಿ ಅವಶ್ಯಕ ಹಾಗೂ ಇರುವ ಮಾಹಿತಿಯನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಮಹಿಳಾ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಬಿ. ಕೆ. ತುಳಸಿಮಾಲ ಹೇಳಿದ್ದಾರೆ. 

ತೊರವಿ ಬಳಿ ಇರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ ಹಾಗೂ ವೃತ್ತಿ ಮಾರ್ಗದರ್ಶನ ಕೋಶ ಮತ್ತು ಅಹಲ್ಯಬಾಯಿ ಸಂಶೋಧನಾ ವಿಸ್ತರಣಾ ಕೇಂದ್ರದ ಸಹಯೋಗದಲ್ಲಿ ಅಂತರಾಷ್ಟ್ರೀಯ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ವೃತ್ತಿ ಅನ್ವೇಷಕರಿಗೆ ವೃತ್ತಿ ಮಾಹಿತಿ ಬೆಂಬಲ ಕುರಿತ ಒಂದು ದಿನದ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾಹಿತಿ ಎಂಬುವುದು ನಮ್ಮ ಜೀವನದಲ್ಲಿ ಅತೀ ಮುಖ್ಯವಾದದ್ದು. ನಾವು ಯಾವಾಗಲೂ ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ಅನ್ವೇಷಣೆ ಮಾಡುವ ಮೂಲಕ ಗ್ರಹಿಸಬೇಕು ಎಂದು ಹೇಳಿದರು.

ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ. ಬಿ. ಕೆ. ತುಳಸಿಮಾಲಾ ಮಾತನಾಡಿದರು.

ಇದೇ ಸಂದರ್ಭದಲ್ಲಿ ನಗರದ ಜಿಲ್ಲಾ ಕೌಶಲ್ಯಾ ಅಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕ ಸಿ.ಬಿ.ಕುಂಬಾರ ಮಾತನಾಡಿ, ನಮ್ಮ ಇಲಾಖೆಯ ವತಿಯಿಂದ ಮಹಿಳೆಯರಿಗಾಗಿ ಹತ್ತು ಹಲವಾರು ಕೌಶಲ್ಯ ತರಬೇತಿಗಳನ್ನು ನೀಡುವ ಮೂಲಕ ಮಹಿಳೆಯರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಪ್ರೇರೇಪಿಸಲಾಗುತ್ತದೆ. ಹಲವಾರು ಯೋಜನೆಗಳ ಮೂಲಕ ಅವರಿಗೆ ಧನಸಹಾಯ ನೀಡಿ ಸ್ವ ಉದ್ಯೋಗಕ್ಕೆ ಸಹಕರಿಸಲಾಗುತ್ತದೆ. ಎಲ್ಲ ಮಹಿಳೆಯರು ಇದರ ಸದುಪಯೋಗ ಪಡಿಸಿಕೊಂಡು ಮುಂದೆ ಬರಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಪಿ.ಜಿ.ತಡಸದ ಮಾತನಾಡಿ, ಉದ್ಯೋಗ ಅವಕಾಶಗಳನ್ನು ನಾವಾಗಿಯೇ ಹುಡುಕಬೇಕೇ ಹೊರತು ಅದಾಗಿಯೇ ನಮ್ಮ ಬಳಿ ಬರುವುದಿಲ್ಲ. ಅದಕ್ಕಾಗಿ ವೃತ್ತಿಪರ ವಿಷಯಗಳಿಗೆ ಸಂಬಂಧಪಟ್ಟಂತೆ ನಾವೇ ಸ್ವತಃ ಮಾಹಿತಿಗಳನ್ನು ಕಲೆಹಾಕಬೇಕು ಎಂದು ಹೇಳಿದರು.

ಈ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಾಧ್ಯಾಪಕ ಡಾ. ಚಂದ್ರಶೇಖರ ಮಠಪತಿ, ಪ್ರೊ.ರೇಣುಕಾ ಮೇಟಿ, ಪ್ರೊ.ಜಿ.ಜಿ.ರಜಪೂತ, ಡಾ. ಬಾಬು ಲಮಾಣಿ ಮಾತನಾಡಿದರು.

ಸಮಾರೋಪ ಸಮಾರಂಭದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಭಾಗವಹಿಸಿ ಮಾತನಾಡಿದರು. ವಿಭಾಗದ ಪ್ರಾಧ್ಯಾಪಕಿ ಪ್ರೊ.ಶಾಂತಾದೇವಿ ಟಿ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಾರ್ಯಕ್ರಮದಲ್ಲಿ ನಾನಾ ವಿಭಾಗಗಳ ಸಂಶೋಧನೆ ವಿದ್ಯಾರ್ಥಿನಿಯರು ಮತ್ತು ಸ್ನಾತಕ ಸ್ನಾತಕೋತರ ವಿದ್ಯಾರ್ಥಿನಿಯರು  ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌