ವಿಜಯಪುರ: ನಗರದ ಐಟಿಐ ಸಂಸ್ಥೆಗೆ ಕೂಡಗಿಯ ಎನ್.ಟಿ.ಪಿ.ಸಿ ವಿದ್ಯಾರ್ಥಿಗಳ ಸರ್ವೋತ್ತಮ ಅಭಿವೃದ್ಧಿಗಾಗಿ ಎರಡು ಅಂತಸ್ಥಿನ ಕಟ್ಟಡ ನಿರ್ಮಿಸಲು ರೂ. 90 ಲಕ್ಷ ಅನುದಾನ ನೀಡಿದೆ ಎಂದು ನಗರ ಶಾಸಕರಾದ ಬಸನಗೌಡ ರಾ ಪಾಟೀಲ ಯತ್ನಾಳ ಹೇಳಿದ್ದಾರೆ.
ನಗರದ ಸರಕಾರಿ ಕೈಗಾರಿಕೆ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾಡಳಿತ ಹಾಗೂ ಎನ್.ಟಿ.ಪಿಸಿ ಸಹಯೋಗದಲ್ಲಿ ಆರ್ ಆ್ಯಂಡ್ ಆರ್ ಯೋಜನೆಯಡಿ ವಿಜಯಪುರ ಜಿಲ್ಲೆಯ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಸಿಒಇ ಕಟ್ಟಡದ ಮೊದಲನೆಯ ಹಾಗೂ ಎರಡನೆಯ ಮಹಡಿ ಮೇಲೆ ಬೋಧನಾ ಕೊಠಡಿ ಹಾಗೂ ಕಾರ್ಯಾಗಾರ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜಾ ಸಮಾರಂಭದ ಶಂಕು ಸ್ಥಾಪನೆ ಮಾಡಿ ಅವರು ಮಾತನಾಡಿದರು.
ಎನ್.ಟಿ.ಪಿ.ಸಿ.ಯು ಜಿಲ್ಲೆಯಲ್ಲಿ ಈಗಾಗಲೇ ನಗರದಲ್ಲಿ ನಾನಾ ಬಡಾವಣೆಗಳಲ್ಲಿ ಗಾರ್ಡನ್ ಅಭಿವೃದ್ಧಿ, ಗಿಡಗಳನ್ನು ಹಚ್ಚುವುದು ಶಾಲಾ ಕಾಲೇಜುಗಳ ಅಭಿವೃದ್ಧಿ ಹಾಗೂ ವಿವಿಧ ವಲಯಗಳಲ್ಲಿ ಜಿಲ್ಲೆಯ ಅಭಿವೃದ್ಧಿಗಾಗಿ ಅನುದಾನ ನೀಡುತ್ತಾ ಬಂದಿದೆ. ಇದರೊಂದಿಗೆ ಜಿಲ್ಲೆಯ ಸಾರ್ವಜನಿಕರೂ ಸಹಕಾರ ನೀಡುತ್ತಿರುವುದು ಸಂತೊಷದ ವಿಷಯ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಕೂಡಗಿಯ ಎನ್.ಟಿ.ಪಿ.ಸಿ ಈಗಾಗಲೇ ರೈಲು ನಿಲ್ಧಾಣ ನವೀಕರಣ, ರೈಲ್ವೇ ಜೋಡಿ ಹಳಿಗಳ ಜೋಡಣೆ ಹಾಗೂ ವಿದ್ಯುತ್ತೀಕರಣಗೊಳಿಸಲು ಪ್ರಮುಖ ಪಾತ್ರ ವಹಿಸಿದ್ದು ಜಿಲ್ಲೆಯ ಔದ್ಯೋಗಿಕರಣಕ್ಕೆ ಬಹಳ ಸಹಕಾರಿಯಾಗಿದೆ. ಕೂಡಗಿಯ ಎನ್.ಟಿ.ಪಿ.ಸಿ ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ, ಸ್ಮಾರ್ಟ್ ಕ್ಲಾಸ ನಡೆಸಲು ಅನುವು ಮಾಡಿಕೊಡುವಂತೆ ಹಾಗೂ ಇಲ್ಲಿ ಕಲಿತ ವಿದ್ಯಾರ್ಥಿಗಳಿಗೆ ತಮ್ಮ ಸಂಸ್ಥೆಯಲ್ಲಿ ಉದ್ಯೋಗ ನೀಡುವಂತೆ ಅವರು ಕೋರಿದರು.
ಎನ್.ಟಿ.ಪಿ.ಸಿಯ ಚೀಪ ಜನರಲ್ ಮ್ಯಾನೇಜರ ಬಿದ್ಯಾನಂದ ಝಾ ಮಾತನಾಡಿ ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ನಮ್ಮ ದೇಶದ ಪ್ರಗತಿಗೆ ಕೈಜೋಡಿಸಬೇಕು ನಿಮ್ಮ ಶಕ್ತಿ, ಜ್ಞಾನದಿಂದ ನಮ್ಮ ದೇಶ ಬಲಾಢ್ಯವಾಗಬಲ್ಲದು ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಕರ್ಯಕ್ಕಾಗಿ ಹಾಗೂ ಈ ಸಂಸ್ಥೆಯ ಅಭಿವೃದ್ಧಿಗಾಗಿ ಎನ್.ಟಿ.ಪಿ.ಸಿ ಸಂಸ್ಥೆಯು ಸದಾ ನಿಮ್ಮೊಂದಿಗೆ ಕೈ ಜೊಡಿಸುವುದಾಗಿ ಅವರು ಹೇಳಿದರು.
ಶೆಡ್ ನಿರ್ಮಾಣಕ್ಕೆ ಭೂಮಿಪೂಜೆ
ವಿಜಯಪುರದ ಎನ್‌ಸಿಸಿ ಆವರಣದಲ್ಲಿ ವಿದ್ಯಾರ್ಥಿನಿಗಳಿಗೆ ನಿರ್ಮಿಸಲಾಗುತ್ತಿರುವ ಶೆಡ್ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಹಾಗೂ ಕೂಡಗಿ ಎನ್‌ಟಿಪಿಸಿಯ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಬಿದ್ಯಾನಂದ ಝಾ ಅವರು ಜಂಟಿಯಾಗಿ ಭೂಮಿ ಪೂಜೆ ನೆರವೇರಿಸಿದರು.
ಜಿಲ್ಲಾಧಿಕಾರಿ ಟಿ.ಬೂಬಾಲನ್ ಮಾತನಾಡಿ ಎನ್‌ಸಿಸಿ ಆವರಣದಲ್ಲಿ ಶೆಡ್ ನಿಮಾಣಕ್ಕಾಗಿ ಕೂಡಗಿ ಎನ್.ಟಿ.ಪಿ.ಸಿಯಿಂದ ಸಿ.ಎಸ್.ಆರ್ ಅನುದಾನದಲ್ಲಿ ರೂ. 70 ಲಕ್ಷ ರೂ.ಗಳನ್ನು ಒದಗಿಸಿದ್ದು, ಜಿಲ್ಲೆಯ ಶಿಕ್ಷಣ ಆರೋಗ್ಯ, ಮೂಲಭೂತ ಸೌಕರ್ಯವನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಜಿಲ್ಲೆಯ ಅಭಿವೃದ್ಧಿಗೆ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳಲು ಅನುದಾನ ನೀಡುವುದಾಗಿ ಅವರು ತಿಳಿಸಿದ್ದಾರೆ ಎಂದು ಅವರು ಹೇಳಿದರು.
ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ರಮೇಶ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ತಹಸೀಲ್ಧಾರ ಕವಿತಾ ಎನ್.ಟಿ.ಪಿ.ಸಿಯ ಜನರಲ್ ಮ್ಯಾನೇಜರ್ ಆಪರೇಶನ್ ಮತ್ತು ಮೆಂಟೆನನ್ಸ್ ಅಧಿಕಾರಿ ಕೆ. ಕೆ. ದತ್ತಾ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಜಿ. ಎನ್. ಮಲಜಿ, ಸರಕಾರಿ ಕೈಗಾರಿಕೆ ತರಬೇತಿ ಸಂಸ್ಥೆಯ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಮುಂತಾದವರು ಉಪಸ್ಥಿತರಿದ್ದರು.