ಸಿಂದಗಿ ಮತಕ್ಷೇತ್ರಾದ್ಯಂತ ತೆರಳಿ ಸ್ವಗ್ರಾಮ ಯತ್ನಾಳಕ್ಕೆ ಮರಳಿದ ಜೋಡೆತ್ತಿನ ರೈತರ ನಂದಿ ಯಾತ್ರೆ

ವಿಜಯಪುರ: ಎತ್ತುಗಳ ಸಂತತಿಯನ್ನು ಉಳಿಸಿ ಬೆಳೆಸುವ ಸಂದೇಶವನ್ನು ಹೊತ್ತು ಯತ್ನಾಳ ಗ್ರಾಮದ ರೈತರು ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಜೋಡೆತ್ತಿನ ಬಂಡಿ ರಥ ಏಳು ದಿನಗಳ ಕಾಲ ಸಿಂದಗಿ ಮತಕ್ಷೇತ್ರದ ಪ್ರಮುಖ ಆಧ್ಯಾತ್ಮಿಕ ಸ್ಥಳಗಳಿಗೆ ತೆರಳಿ ಸ್ವಗ್ರಾಮಕ್ಕೆ ಮರಳಿದೆ.

ಈ ಸಂದರ್ಭದಲ್ಲಿ ಯತ್ನಾಳ ರೈತರು ಒಂದು ವಾರಗಳ ಕಾಲ ಸಿಂದಗಿ ಮತಕ್ಷೇತ್ರಾದ್ಯಂತ ರೈತ ಮಿತ್ರ ಸ್ವಯಂ ಸೇವಕರ ಸಂಘಗಳನ್ನು ರಚಿಸಿದ್ದಾರೆ.  ಸುಮಾರು 200 ಕಿಲೋಮೀಟರ್ ನಡೆದ 11 ಜೋಡೆತ್ತುಗಳ ಗಾಡಿಗಳು ತಾಂಬಾ, ಬಂಥನಾಳ, ಚಾಂದಕವಟೆ, ಸಿಂದಗಿ ಹಾಗೂ ಕನ್ನೊಳ್ಳಿ ಗ್ರಾಮಗಳಿಗೆ ಭೇಟಿ ನೀಡಿದ್ದಾರೆ.

ಗ್ರಾಮಕ್ಕೆ ವಾಪಸ್ಸಾದ ಎತ್ತಿನ ಗಾಡಿಗಳು ಮತ್ತು ರೈತರನ್ನು ಯತ್ನಾಳ ಗ್ರಾಮದ ಹಿರಿಯರ ನೇತೃತ್ವದಲ್ಲಿ ಬಾಜಾ ಭಜಂತ್ರಿಯೊಂದಿಗೆ ಸ್ವಾಗತಿಸಲಾಯಿತು.  ನಂದಿ ಯಾತ್ರೆಯ ನೇತೃತ್ವ ವಹಿಸಿದ್ದ ಉದ್ಯಮಿ ಮಲ್ಲಿಕಾರ್ಜುನ ಕೋರಿ ಅವರು ನಂದಿ ಯಾತ್ರಿಕರಿಗೆ ಸನ್ಮಾನಿಸಿ ಗೌರವಿಸಿದರು.

ಬಳಿಕ ಮಾತನಾಡಿದ ಅವರು, ಗ್ರಾಮಗಳಲ್ಲಿ ಎತ್ತುಗಳು ಉಳಿದರೆ ಮಾತ್ರ ನಮ್ಮ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಗುಣಮಟ್ಟದ ಆಹಾರ ದೊರೆಯಲಿದೆ.  ಆದ್ದರಿಂದ ಎಲ್ಲ ಪ್ರಜ್ಞಾವಂತರು ಎತ್ತುಗಳ ಸಂತತಿ ಉಳಿಸುವ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.

ಅಭಿ ಫೌಂಡೇಶನ್ ಸಂಸ್ಥಾಪಕ ಬಸವರಾಜ ಬಿರಾದಾರ ಮಾತನಾಡಿ, ಗ್ರಾಮಗಳಲ್ಲಿರುವ ನಂದಿ ಸಂಪತ್ತು ಉಳಿದರೆ ಮಾತ್ರ ಗ್ರಾಮಗಳಲ್ಲಿ ಅನ್ನ ಸಂಪತ್ತು ಉಳಿಯಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಮಲ್ಲಪ್ಪ ಮಾಳಪ್ಪ ಕೋರಿ, ಭೀಮು ರಾಮಗೊಂಡ ಬಿರಾದಾರ, ಅಪ್ಪಾಸಾಹೇಬ ಶಿವಗೊಂಡ ಬಿರಾದಾರ, ಚನ್ನಪ್ಪ ಈರಪ್ಪ ಉಮರಾಣಿ(ಅಂಕಲಗಿ), ಮನೋಹರ ಈರಪ್ಪ ಬಿರಾದಾರ ಮುಂತಾವದರು ಭಾಗವಹಿಸಿದ್ದರು.

Leave a Reply

ಹೊಸ ಪೋಸ್ಟ್‌