ರಂಗೋಲಿ ಮೂಲಕ ರಾಷ್ಟ್ರೀಯ, ಅಂತಾರಾಷ್ಟೀಯ ದಾಖಲೆಗೆ ಸಿದ್ಧರಾದ ವೈದ್ಯಕೀಯ ವಿದ್ಯಾರ್ಥಿಗಳು- ವಿನೂನತ ಪ್ರಯತ್ನಕ್ಕೆ ಆಲ್ ದಿ ಬೆಸ್ಟ್

ವಿಜಯಪುರ: 1500 ವೈದ್ಯಕೀಯ ವಿದ್ಯಾರ್ಥಿಗಳು, 40 ಮಾರ್ಗದರ್ಶಕರು ಮತ್ತು 20 ಜನ ಮೇಲ್ವಿಚಾರಕರು, 50 ಸಾವಿರ ಚದುರ ಅಡಿ ಪ್ರದೇಶದಲ್ಲಿ ಚಿತ್ರ ಬಿಡಿಸಲು 10 ಟನ್ ರಂಗೋಲಿ ಖರೀದಿ. ಅರೇ, ಇದೇನಿದು ವಿಚಿತ್ರ ಎಂದು ನೀವು ಅಂದುಕೊಳ್ಳಬಹುದು.  ಆದರೆ, ಇದೆಲ್ಲ ಮಾಡುತ್ತಿರುವುದು ಕೈಯ್ಯಲ್ಲಿ ಪುಸ್ತಕ ಹಿಡಿದು ಕಲಿಯುವಾಗಲೇ ಸ್ಟೆಥೋಸ್ಕೋಪ್ ಬಳಸಿ ರೋಗಿಗಳ ಆರೋಗ್ಯ ತಪಾಸಣೆ ನಡೆಸಬೇಕಾದ ವೈದ್ಯರು.  ಅದೂ ಕೂಡ ಒಂದು ವಿನೂತನ ಕಾರ್ಯಕ್ರಮಕ್ಕಾಗಿ.

ಇದು ಬಸವನಾಡು ವಿಜಯಪುರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ವಿದ್ಯಾರ್ಥಿಗಳು ನಡೆಸುತ್ತಿರುವ ಸ್ವಾಸ್ಥ್ಯ ಸಂತುಲನ ರಂಗೋಲಿ ಮಹೋತ್ಸವಕ್ಕೆ ನಡೆಸಿರುವ ಸಿದ್ಧತೆ.  ಇದೇ ಮಾರ್ಚ್ 10 ರಂದು ಈ ಎಲ್ಲ ವಿದ್ಯಾರ್ಥಿಗಳು ಸೇರಿಕೊಂಡು ಬಿ.ಎಲ್.ಡಿ.ಇ ಆವರಣದಲ್ಲಿ 50000 ಸಾವಿರ ಚದುರ ಅಡಿ ಪ್ರದೇಶದಲ್ಲಿ ರಂಗೋಲಿ ಬಿಡಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ವಿವಿ ಕುಲಪತಿ ಡಾ. ಆರ್. ಎಸ್. ಮುಧೋಳ,  ಬಿ.ಎಲ್.ಡಿ.ಇ ಡೀಮ್ಡ್ ವಿವಿ ಕುಲಾಧಿಪತಿ ಡಾ. ಎಂ. ಬಿ. ಪಾಟೀಲ ಅವರ ಮಾರ್ಗದರ್ಶನದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಪೂರಕವಾಗಿ ಹೊಸ ಹೊಸ ಪ್ರಯತ್ನಗಳಿಗೆ ಮುನ್ನುಡಿ ಬರೆಯುತ್ತಿದ್ದು, ಜನಪರ ಸೇವೆಗಳ ಮೂಲಕ ದೇಶಾದ್ಯಂತ ಗಮನ ಸೆಳೆಯುತ್ತಿದೆ.  ಇಂಥ ಚಟುವಟಿಕೆಗಳಿಗೆ ಈಗ ಮತ್ತೋಂದು ಸೇರ್ಪಡೆ ಇದೇ ತಿಂಗಳು ಮಾರ್ಚ್ 10 ರಂದು 2024ರಂದು ರವಿವಾರ ಬೆಳಿಗ್ಗೆ 7 ಗಂಟೆಗೆ ಆಯೋಜಿಸಿರುವ ಸ್ವಾಸ್ಥ್ಯ ಸಂತುಲನ ರಂಗೋಲಿ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ.  ಅಂದು ಬೆಳಿಗ್ಗೆ 9.30ಕ್ಕೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷರು, ಡೀಮ್ಡ್ ವಿವಿ ಕುಲಾಧಿಪತಿ ಡಾ. ಎಂ. ಬಿ. ಪಾಟೀಲ ಅವರು ಮಾ. 10 ರಂದು ರವಿವಾರ ಬೆಳಿಗ್ಗೆ 9.30ಕ್ಕೆ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ವಿವಿಯ ಎಲ್ಲ ಹಿರಿಯ ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ವೈದ್ಯಕೀಯ ಕ್ಷೇತ್ರದ ಗಣ್ಯರು ಉಪಸ್ಥಿತರಿರಲಿದ್ದಾರೆ.. ವೈದ್ಯಕೀಯ ಶಿಕ್ಷಣದ ವಿಷಯದ ಮೇಲೆ ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದ ಕಾರ್ಯಕ್ರಮ ಇದಾಗಿದ್ದು,  ನಲ್ಲಿ ದಾಖಲಾಗುವ ನಿಟ್ಟಿನಲ್ಲಿ ಮಹತ್ವ ಹೆಜ್ಜೆಯಾಗಿದೆ ಎಂದು ತಿಳಿಸಿದರು.

ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ ಅವರು ಸದಾ ಒಂದಿಲ್ಲೋಂದು ಕ್ರೀಯಾಶೀಲ ಚಟುವಟಿಕೆಗಳನ್ನು ನಡೆಸಲು ಉತ್ಸುಕರಾಗಿರುತ್ತಾರೆ.  ಅದರ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.  ಅದರಂತೆ ಮಾ. 10 ರಂದು ರವಿವಾರ ಈ ಮಹೋತ್ಸವ ನಡೆಯಲಿದ್ದು, ಎಲ್ಲ ವಿದ್ಯಾರ್ಥಿಗಳು ತಮ್ಮ ವೈದ್ಯಕೀಯ ಶಿಕ್ಷಣದ ಪಠ್ಯಕ್ರಮದಲ್ಲಿರುವ ಚಿತ್ರಗಳನ್ನು ರಂಗೂಲಿಯ ಮೂಲಕ ಬಿಡಿಸುತ್ತಿದ್ದಾರೆ.  ದೇಶದಲ್ಲಿ 708 ಮೆಡಿಕಲ್ ಕಾಲೇಜುಗಳಿವೆ.  ಆ ಯಾವ ಕಾಲೇಜುಗಳಲ್ಲಿಯೂ ನಡೆದ ವಿನೂತನ ಪ್ರಯತ್ನವೊಂದು ನಮ್ಮ ಕಾಲೇಜಿನಲ್ಲಿ ನಡೆಯುತ್ತಿದೆ.  ಇದರಿಂದ ವಿದ್ಯಾರ್ಥಿಗಳಿಗೂ ನವೋಲ್ಲಾಸ ಸಿಗಲಿದೆ.  ಅಷ್ಟೇ ಅಲ್ಲ, ಇಲ್ಲಿಗೆ ಬರುವ ಸಾರ್ವಜನಿಕರಿಗೂ ಇದರಿಂದ ಮಾನವನ ದೇಹದ ನಾನಾ ಅಂಗಗಳು, ರೋಗಗಳ ಕುರಿತು ಚಿತ್ರಸಹಿತ ಮಾಹಿತಿ  ಹಾಗೂ ಜಾಗೃತಿ ಉಂಟಾಗಲಿದೆ ಎಂದು ತಿಳಿಸಿದರು.

ಪ್ರಾಚಾರ್ಯ ಡಾ. ಅರವಿಂದ ಪಾಟೀಲ ಮಾತನಾಡಿ, ಈ ಮಹೋತ್ಸವಕ್ಕಾಗಿ 10 ಟನ್ ರಂಗೋಲಿಯನ್ನು ಖರೀದಿಸಲಾಗಿದೆ.  ಈ ಕಾರ್ಯಕ್ರಮದಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗಳನ್ನೂ ದಾಖಲಾತಿ ಮಾಡಲಾಗುತ್ತಿದೆ.  ಅಷ್ಟೇ ಅಲ್ಲ, ಈ ಕಾರ್ಯಕ್ರಮಕ್ಕೆ ಸಂಗ್ರಹಿಸಲಾಗಿರುವ ರಂಗೋಲಿ ಮತ್ತು ನಾನಾ ಬಣ್ಣಗಳ ಖರೀದಿಯಿಂದ ಹಿಡಿದು ಸಮಗ್ರ ಲಿಖಿತ ಮಾಹಿತಿ ಮತ್ತು ದಾಖಲೆಗೆ ಪರಿಗಣಿಸಿರುವ ಏಜೆನ್ಸಿಯವರು ಸಮಗ್ರವಾಗಿ ಸಂಗ್ರಹಿಸಿ ದಾಖಲಿಸಿಕೊಳ್ಳಲಿದ್ದಾರೆ.  ಇದಕ್ಕಾಗಿ ವಿವಿಯ ನುರಿತ ವೈದ್ಯರು ಮತ್ತು ಇತರ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ.  ಈ ಕಾರ್ಯಕ್ರಮ ಸದಾ ನೆನಪಿನಲ್ಲಿ ಉಳಿಯಲಿದೆ.  ನಮ್ಮ ಕಾಲೇಜು, ಜಿಲ್ಲೆ ಮತ್ತು ರಾಜ್ಯಕ್ಕೆ ಇದೊಂದು ಹೆಮ್ಮೆಯ ವಿಷಯ ಎಂದು ತಿಳಿಸಿದರು.

ವಿವಿಯ ಐಟಿ ವಿಭಾಗದ ಮುಖ್ಯಸ್ಥ ಡಾ. ದೀಪಕಕುಮಾರ ಚವ್ಹಾಣ ಮಾತನಾಡಿ, ನಾವು ಈಗಾಗಲೇ ಗಿನ್ನೀಸ್ ಬುಕ್ ಆಫ್ ರೆಕಾರ್ಡ್ಸ್, ಲಂಡನ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಎಲೈಟ್ ವರ್ಲ್ಡ್ ರೆಕಾರ್ಡ್ಸ್, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಅವರನ್ನು ಸಂಪರ್ಕಿಸಿದ್ದು, ಅವರೆಲ್ಲರೂ ಕೂಡ ಈ ಕುರಿತು ನಿಗಾ ವಹಿಸಲಿದ್ದಾರೆ.  ಕಾರ್ಯಕ್ರಮ ನಡೆಯುವ ದಿನ ನಿರಂತರವಾಗಿ ದ್ರೋಣ ಕ್ಯಾಮೆರಾ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಗಮನ ಹರಿಸಲಿದ್ದಾರೆ.  ನಂತರ ಅವರದೇ ಆದ ಮಾನದಂಡಗಳ ಅನ್ವಯ ಪರಿಶೀಲನೆ ನಡೆಸಿ ಈ ಕಾರ್ಯಕ್ರಮ ದಾಖಲೆಯಾದ ಬಗ್ಗೆ ಮಾಹಿತಿ ನೀಡಲಿದ್ದಾರೆ.  ಅಗತ್ಯ ದಾಖಲಾತಿಗಳನ್ನು ನೀಡಲು ಎಲ್ಲ ಸಿದ್ಧತೆಗಳನ್ನು ಕೈಗೊಂಡಿದ್ದೇವೆ.  ರಂಗೋಲಿ ಬಿಡಿಸುವ ಸ್ಥಳದಿಂದ ಹಿಡಿದು ರಂಗೋಲಿಯ ತೂಕ, ಬಣ್ಣ, ತಲಾ ಒಂದು ಚಿತ್ರಕ್ಕೆ ಬೇಕಾದ ಸದಸ್ಯರ ಮಾಹಿತಿ ಸೇರಿದಂತೆ ಎಲ್ಲವನ್ನೂ ಸಿದ್ಧಪಡಿಸಿ ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮ ಸಂಯೋಜಕಿ ಡಾ. ನಂದಿನಿ ಮುಚ್ಚಂಡಿ ಮಾತನಾಡಿ, ವೈದ್ಯಕೀಯ ವಿದ್ಯಾರ್ಥಿಗಳು ಈ ಮಹೋತ್ಸವದಲ್ಲಿ ಪಾಲ್ಗೋಳ್ಳಲು ಉತ್ಸುಕರಾಗಿದ್ದಾರೆ.  ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ 250 ಚಿತ್ರಗಳನ್ನು ರಂಗೋಲಿಯ ಮೂಲಕ ವಿದ್ಯಾರ್ಥಿಗಳು ಬಿಡಿಸಲಿದ್ದಾರೆ.  10×12 ಅಡಿ ಅಳತೆಯ ರಂಗೋಲಿ ಚಿತ್ರಗಳನ್ನು ಬಿಡಿಸಲು ತಯಾರಿ ನಡೆಸಿದ್ದಾರೆ.  ಈಗಾಗಲೇ ಎಲ್ಲ ವಿದ್ಯಾರ್ಥಿಗಳು ತಮಗೆ ವಹಿಸಲಾಗಿರುವ ಜವಾಬ್ದಾರಿಯ ಕುರಿತು ಪೇಪರ್ ಗಳಲ್ಲಿ ಚಿತ್ರಗಳನ್ನು ಬಿಡಿಸಿದ್ದಾರೆ.  ಈ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಯಶಸ್ವಿಗೊಳಿಸಲು ಎಲ್ಲರೂ ಉತ್ಸುಕರಾಗಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಉಪಪ್ರಾಚಾರ್ಯೆ ಸುಮಂಗಲಾ ಪಾಟೀಲ, ಡಾ. ಉದಯಕುಮಾರ ನುಚ್ಚಿ ಮುಂತಾದವರು ಉಪಸ್ಥಿತರಿದ್ದರು.

ವೈದ್ಯಕೀಯ ಶಿಕ್ಷಣದ ಬೋಧನೆ, ಆರೋಗ್ಯದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಮತ್ತು ವಿದ್ಯಾರ್ಥಿಗಳಿಗೆ ಚಿತ್ರಬಿಡಿಸುವ ಕೌಶಲ್ಯಾಭಿವೃದ್ಧಿ ಪಡಿಸುವುದು ಮತ್ತು ಆರೋಗ್ಯದ ಬಗ್ಗೆ ರಂಗೋಲಿಯ ಕಲೆಗೆ ಪ್ರೋತ್ಸಾಹ ನೀಡುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.  ಈ ಕಾರ್ಯಕ್ರಮದ ಮೂಲಕ ಬೃಹತ್ ಪ್ರಮಾಣದಲ್ಲಿ ರಂಗೋಲಿ ಬಿಡಿಸುವ ಮೂಲಕ ವೈದ್ಯಕೀಯ ಶಿಕ್ಷಣದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಲಾಗುತ್ತಿದೆ.  ಈ ಕಾಲೇಜು ಮತ್ತು ವಿದ್ಯಾರ್ಥಿಗಳ ಪ್ರಯತ್ನ ಯಶಸ್ವಿಯಾಗಲಿ.  ಈ ಮಹೋತ್ಸವ ಗಿನ್ನೇಸ್ ಬುಕ್ ಆಫ್ ರೆಕಾರ್ಡ್ಸ್, ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಎಲೈಟ್ ವರ್ಲ್ಡ್ ರೆಕಾರ್ಡ್ಸ್, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ರ್ ನಲ್ಲಿ ಸೇರ್ಪಡೆಯಾಗಲಿ ಎಂದು  ಬಸವನಾಡು ವೆಬ್ ಕೂಡ ಶುಭ ಹಾರೈಸುತ್ತದೆ.

Leave a Reply

ಹೊಸ ಪೋಸ್ಟ್‌