ವಿಜಯಪುರ: ಪಾಕಿಸ್ತಾನ್ ಪರ ಘೋಷಣೆ ಪ್ರಕರಣದ ತನಿಖೆ ಮುಗಿಯುವವರೆಗೂ ರಾಜ್ಯಸಭೆ ನೂತನ ಸಂಸದ ನಾಶೀರ್ ಹುಸೇನ್ ಅವರಿಗೆ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ನೀಡಬಾರದು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ವಿಚಾರ ರಾಜ್ಯಸಭೆ ಸದಸ್ಯ ನಾಸಿರ್ ಹುಸೇನ್ ವರೆಗೂ ಹೋಗಬಹುದು. ಪಾಕಿಸ್ತಾನ ಪರ ಘೋಷಣೆ ಹಾಕಿದ ವ್ಯಕ್ತಿ ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ ಜೊತೆಗೂ ಬಾಂಧವ್ಯ ಹೊಂದಿದ್ದಾನೆ. ಪಾಕಿಸ್ತಾನ ಪರ ಘೋಷಣೆ ಹಾಕಿದ ವಿಚಾರದಲ್ಲಿ ನಾಸಿರ್ ಹುಸೇನ್ ಪಾತ್ರವೂ ಇದೆ. ಹೀಗಾಗಿ ಅವರಿಗೆ ರಾಜ್ಯಸಭೆ ಸದಸ್ಯತ್ವದ ಪ್ರಮಾಣವಚನ ಬೋಧಿಸಬಾರದು ಎಂದು ನಿವೃತ್ತ ಐಎಎಸ್ ಅಧಿಕಾರಿಗಳು ಒತ್ತಾಯ ಮಾಡಿದ್ದಾರೆ. ಈ ಕುರಿತು ಉಪರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. ಈ ಕುರಿತು ನಾನು ಸಹ ಉಪರಾಷ್ಟ್ರಪತಿಗಳಿಗೆ ಒತ್ತಾಯ ಮಾಡುತ್ತೇನೆ ಎಂದು ಅವರು ಹೇಳಿದರು.
ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ ಬಾಂಬ್ ಸ್ಪೋಟ ಪ್ರಕರಣದ ಲಿಂಕ್ ಬಳ್ಳಾರಿವರೆಗೂ ಇರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಜಾಲ ದೊಡ್ಡದಿದೆ. ಎನ್ ಐ ಎ ಈ ಕುರಿತು ತನಿಖೆ ಮಾಡುತ್ತಿದೆ. ದೇಶದಲ್ಲಿ ದೊಡ್ಡ ಅಭದ್ರತೆ ಮತ್ತು ಅಸುರಕ್ಷತೆ ಮಾಡಲು ಸಂಚು ನಡೆದಿದೆ. ಪಾಕಿಸ್ತಾನದ ಐ ಎಸ್ ಐ ಸೇರಿದಂತೆ ದೇಶದ ಕೆಲವು ಸಂಘಟನೆಗಳು 2047ಕ್ಕೆ ಭಾರತನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡುವ ಉದ್ದೇಶದಿಂದ ಇಂಥ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಇಂಥ ಘಟನೆಗಳು ಆಗುತ್ತಿರುವುದಕ್ಕೆ ರಾಜ್ಯ ಸರಕಾರದ ತುಷ್ಟಿಕರಣ ನೀತಿಯೇ ಕಾರಣವಾಗಿದೆ. ರಾಜ್ಯದಲ್ಲಿ ಮುಸ್ಲಿಮರನ್ನು ಸಂತೈಸುವ ಪ್ರಯತ್ನ ನಡೆಯುತ್ತಿರುವುದರಿಂದ ಅವರಿಗೆ ಮತ್ತಷ್ಟು ಸ್ವಾತಂತ್ರ್ಯ ಸಿಕ್ಕಂತಾಗಿದೆ ಶಾಸಕರು ಆರೋಪಿಸಿದರು.
ಕೇಂದ್ರ ಸರಕಾರ ರಾಜ್ಯಕ್ಕೆ ಅನುದಾನ ನೀಡುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಆರೋಪ ಮಾಡಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಜನರು ಕಟ್ಟಿದ ತೆರಿಗೆ ಹಣವನ್ನು ಸಿಎಂ ಮುಸ್ಲಿಮರಿಗೆ ನೀಡುತ್ತಾರೆ ಎಂದು ಕಿಡಿ ಕಾರಿದರು.
ಸಂಸದ ಅನಂತ್ ಕುಮಾರ್ ಹೆಗಡೆ ವಾಗ್ದಾಳಿ ನಡೆಸಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತು ನಾನು ವಿಧಾನಸಭೆಯಲ್ಲಿ ಮಾತನಾಡಿದ್ದೇನೆ. ಕೇವಲ ಒಂದು ಕೋಮಿಗೆ ರೂ. 10000 ಕೋ. ಅನುದಾನ ಕೊಡುವುದಾಗಿ ಮತ್ತು ವಕ್ಪ್ ಆಸ್ತಿ ಕೌಂಪೌಂಡ್ ಗೆ ಕೊಡುವುದಾಗಿ ಹೇಳುತ್ತಾರೆ. ಹಿಂದೂ ಧರ್ಮದಿಂದ ಬರೋ ಆದಾಯವನ್ನು ಅವರ ಅಭಿವೃದ್ಧಿಗೆ ಏಕೆ ಕೊಡುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ನಮಗೆ ಒಂದು ಕಾನೂನು. ಅವರಿಗೆ ಇನ್ನೋಂದು ಕಾನೂನು ಯಾಕೆ? ಎಂದು ಪ್ರಶ್ನಿಸಿದ ಅವರು, ಕೇಂದ್ರ ಸರಕಾರ ಸಂಬಂಧಿಸಿದ ಆಯಾ ಯೋಜನೆಗಳಿಗೆ ನೇರವಾಗಿ ಹಣವನ್ನು ಕೊಡುತ್ತದೆ. ಆದರೆ, ಜಿ ಎಸ್ ಟಿ ರೂಪದಲ್ಲಿ ಬರುವ ಹಣವನ್ನು ಇಂಥ ಕೆಲಸ ಮಾಡಿ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಮೇಶ್ವರ ಕೆಫೆ ಬಾಂಬ್ ಸ್ಪೋಟ ಪ್ರಕರಣ ಆರೋಪಿ ಸುಲೇಮಾನ್ ಬಂಧನ ವಿಚಾರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಇಂಥ ಘಟನೆಗಳಲ್ಲಿ ಸುಲೇಮಾನ್ ಸಿಗಬೇಕು. ಶಿವಪ್ಪ ಸಿಗಲ್ಲ. ಸುಲೇಮಾನ್, ಅಜಗರ್, ಅಹ್ಮದ್ ಇವರೇ ಸಿಗಬೇಕಲ್ಲ. ಈ ಕುರಿತು ತನಿಖೆ ಇನ್ನೂ ಆಳವಾಗಿ ನಡೆಯಬೇಕು. ಬಾಂಬ್ ಬ್ಲಾಸ್ಟ್ ಪ್ರಕರಣ ಸಾಮಾನ್ಯ ಪ್ರಕರಣವಲ್ಲ. ಈ ಘಟನೆಯ ಗಂಭೀರತೆಯನ್ನು ವಿಧಾನಸಭೆಯಲ್ಲಿ ಹೇಳಿದರೂ ಸರಕಾರ ಒಪ್ಪಲಿಲ್ಲ. ಈ ಘಟನೆ ಕುರಿತು ಕಾಂಗ್ರೆಸ್ಸಿನ ಕೆಲವು ಸಚಿವರು ಇಮ್ಯೆಚುರ್ಡ್ ಸ್ಟೇಟ್ಮೆಂಟ್ ಕೊಟ್ಟರು. ಇಂದು ಅವರಿಗೆ ಮುಖವಿಲ್ಲ ಎಂದು ಶಾಕರು ಟೀಕಿಸಿದರು.
ಸಚಿವ ಪ್ರಿಯಾಂಕ ಖರ್ಗೆ ಅವರ ಹೇಳಿಕೆಗೆ ಗೃಹ ಮಂತ್ರಿಗಳೇ ಛೀಮಾರಿ ಹಾಕಿದ್ದಾರೆ. ಏನು ಗೊತ್ತಲ್ಲದೆ ಮಾಧ್ಯಮಗಳ ಮುಂದೆ ಖರ್ಗೆ ಹೇಳುತ್ತಾರೆ. ಖರ್ಗೆ ಅವರು ಇಂಥ ಬೇಜವಾಬ್ದಾರಿ ಹೇಳಿಕೆ ಕೊಡುವುದನ್ನು ಬಿಟ್ಟು ತಮ್ಮ ಇಲಾಖೆಯಲ್ಲಿ ಜವಾಬ್ದಾರಿತವಾಗಿ ಕೆಲಸ ಮಾಡಲಿ. ಗ್ರಾಮೀಣ ಅಭಿವೃದ್ಧಿ ಇಲಾಖೆ ದೊಡ್ಡದಿದೆ. ಅಲ್ಲಿ ಕೆಲಸ ಮಾಡುವುದನ್ನು ಬಿಟ್ಟು ಬರೀ ಹಿಂದೂಗಳನ್ನು ಬೈಯುವ ಕೆಲಸ ಮಾಡುತ್ತಿದ್ದಾರೆ. ಕಲಬುರ್ಗಿಯಲ್ಲಿ ದಿನನಿತ್ಯ ಬಿಜೆಪಿ ಕಾರ್ಯಕರ್ತರ ಕೊಲೆಯಾಗುತ್ತಿದೆ. ಇಂಥ ಕಾನೂನು ಸುವ್ಯವಸ್ಥೆ ಸರಿಪಡಿಸುವ ಕೆಲಸ ಮಾಡುವುದನ್ನು ಬಿಟ್ಟು ಇಂಥದ್ದನ್ನು ಮಾಡುವುದರಿಂದ ಅವರ ಗೌರವ ಕಡಿಮೆಯಾಗುತ್ತದೆ ಎಂದು ಅವರು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಪ್ರತ್ಯೇಕ ಪ್ರಚಾರ ಜವಾಬ್ದಾರಿ ಕೇಳಿದ್ದೇನೆ
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ದಾ ಅವರು ನನ್ನ ಜೊತೆ 10- 15 ನಿಮಿಷ ಮಾತನಾಡಿದ್ದಾರೆ. ಯಾವುದೇ ಲೋಕಸಭೆ ಕ್ಷೇತ್ರದಿಂದ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದೇನೆ. ನನಗೆ ಕರ್ನಾಟಕದಲ್ಲಿ ಪ್ರತ್ಯೇಕವಾಗಿ ಚುನಾವಣೆ ಪ್ರಚಾರದ ಜವಾಬ್ದಾರಿ ನೀಡಬೇಕು. ಎಲ್ಲ 28 ಲೋಕಸಭೆ ಕ್ಷೇತ್ರಗಳಲ್ಲಿ ಓಡಾಡಿ ಪ್ರಚಾರ ಮಾಡುತ್ತೇನೆ. 28 ಕ್ಷೇತ್ರಗಳನ್ನು ಗೆಲ್ಲಲು ಕಾರ್ಯಕರ್ತರು ಮಾಡುತ್ತಿರುವ ಕೆಲಸದಲ್ಲಿ ನಾನೂ ಕೆಲಸ ಮಾಡುವುದಾಗಿ ಹೇಳಿದ್ದೇನೆ ಎಂದು ಅವರು ತಿಳಿಸಿದರು.
ವಿಜಯಪುರ ಲೋಕಸಭಾ ಟಿಕೆಟ್ ಹಂಚಿಕೆ ವಿಚಾರ
ವಿಜಯಪುರ ಲೋಕಸಭೆ ಟಿಕೆಟ್ ಹಂಚಿಕೆ ನಮ್ಮ ಕೈಯಲ್ಲಿಲ್ಲ. ದೆಹಲಿಯಲ್ಲಿ ಕಳೆದ ಎರಡು ದಿನಗಳಿಂದ ಕರ್ನಾಟಕ ಟಿಕೆಟ್ ಹಂಚಿಕೆ ಕುರಿತು ಚರ್ಚೆ ನಡೆಯುತ್ತಿದೆ. ಆದರೆ ನನಗೆ ಯಾವುದೇ ಮಾಹಿತಿ ಇಲ್ಲ. ನಮ್ಮ ಹೈಕಮಾಂಡ್ ಹಾಲಿ ಸಂಸದ ರಮೇಶ ಜಿಗಜಿಣಗಿ ಅವರಿಗೆ ಟಿಕೆಟ್ ಕೊಟ್ಟರೂ ಚುನಾವಣೆ ಮಾಡುತ್ತೇವೆ. ಬೇರೆ ಸಾಮಾನ್ಯ ಓರ್ವ ದಲಿತ ಯುವಕನಿಗೂ ಟಿಕೆಟ್ ಕೊಟ್ಟರೆ ಚುನಾವಣೆ ಮಾಡುತ್ತೇವೆ. ನಮಗೆ ನಮ್ಮ ದೇಶ ಉಳಿಯಬೇಕಿದೆ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ವಿಚಾರ ಮಾತ್ರ ನಮ್ಮ ಮುಂದಿದೆ. ಟಿಕೆಟ್ ಯಾರಿಗೆ ಕೊಡುತ್ತಾರೋ ಬಿಡುತ್ತಾರೋ ಎಂಬುದು ನಮಗೆ ಗೊತ್ತಿಲ್ಲ ಎಂದು ಅವರು ಹೇಳಿದರು.
ಪಠ್ಯಪುಸ್ತಕ ಪರಿಷ್ಕರಣೆ, ಮತ್ತೆ ಬಿಜೆಪಿ ಅಧಿಕಾರಕ್ಕೆ
ರಾಜ್ಯ ಸರಕಾರ ಶಾಲಾ ಪಠ್ಯಪುಸ್ತಕ ಪರಿಷ್ಕರಣಿ ವಿಚಾರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಸರಕಾರ ಎನ್ ಇ ಪಿ ತೆಗೆದು ಎಸ್ ಇ ಪಿ ಮಾಡುತ್ತಿದೆ. ಎಸ್ ಇ ಪಿ ಮಾಡಬಾರದು ಎಂದು ಅವರು ಸಚಿವ ಮಧು ಬಂಗಾರಪ್ಪಗೆ ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಹಳ ದಿನ ಇರುವುದಿಲ್ಲ. ಲೋಕಸಭೆ ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್ ಸರಕಾರ ಬಿಳುವುದು ಖಚಿತ. ಮತ್ತೆ ನಾವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡುತ್ತೇವೆ. ನೀವು ಪಠ್ಯ ಪುಸ್ತಕದಲ್ಲಿ ಏನೇ ಹಿಂದೂ ವಿರೋಧಿ ವಿಚಾರಗಳನ್ನು ಸೇರಿಸಿದರೂ ನಾವೆಲ್ಲ ತೆಗೆದು ಹಾಕುತ್ತೇವೆ. ನಿಜವಾದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡುತ್ತೇವೆ. ಈ ವಿಚಾರದಲ್ಲಿ ಮಧು ಬಂಗಾರಪ್ಪ ದುಡುಕಬಾರದು. ಲೋಕಸಭೆ ಚುನಾವಣೆ ಮುಗಿಯುವವರೆಗೂ ಅವರ ಕುರ್ಚಿ ಇರುತ್ತದೆ. ಅದಾದ ಬಳಿಕ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತದೆ ಎಂದು ಬಸನಗೌಡ ಪಾಟೀಲ ಯತ್ನಾಳ ಭವಿಷ್ಯ ನುಡಿದರು.