ಧೂಳಖೇಡ ಸೌಹಾರ್ದ ಬ್ಯಾಂಕ್ ಕಳ್ಳತನ ಪ್ರಕರಣ- ಆರು ಜನ ಅಂತಾರಾಜ್ಯ ಕಳ್ಳರ ಬಂಧಿಸಿದ ಝಳಕಿ ಪೊಲೀಸರು

ವಿಜಯಪುರ: ಚಡಚಣ ತಾಲೂಕಿನ ಧೂಳಖೇಡ ಗ್ರಾಮದ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಸೌಹಾರ್ದ ಬ್ಯಾಂಕಿನಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಝಳಕಿ ಪೊಲೀಸರು ಭೇದಿಸಿದ್ದು, ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಕುರಿತು ಝಳಕಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ಋಷಿಕೇಶ ಸೋನಾವಣೆ, ಫೆ. 28 ರಂದು ಮಧ್ಯರಾತ್ರಿ ಸೌಹಾರ್ದ ಬ್ಯಾಂಕ್ ನಲ್ಲಿದ್ದ ರೂ. 19.45 ಲಕ್ಷ ಹಣವನ್ನು ಕಳ್ಳತನ ಮಾಡಲಾಗಿತ್ತು.  ಈ ಪ್ರಕರಣ ಸಂಬಂಧ ತನಿಖೆ ನಡೆಸಿದ ಝಳಕಿ ಪೊಲೀಸರು 6 ಜನ ಆರೋಪಿಗಳನ್ನು ಕಳುವಾದ ಹಣ, ಕಳ್ಳತನ ಮಾಡಲು ಬಳಸಿದ ವಾಹನಗಳು ಹಾಗೂ ಮೊಬೈಲ್ ಗಳು ಸೇರಿದಂತೆ ಒಟ್ಟು ರೂ. 27.15 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಮಹಾರಾಷ್ಟ್ರದ ಸೋಲಾಪುರ ತಾಲೂಕಿನ ಕುರಗೋಟ ಗ್ರಾಮದ ಮಲ್ಲಿಕಾರ್ಜುನ ಮುಕಿಂದ ಹೊನಮಾನೆ(29), ಲತೀಫ್ ಲಾಲಸಾಬ ಮಕಾನದಾರ(27), ಮಾಳಪ್ಪ ಗಂಗಾಧರ ಸಲಗರೆ(24), ಬಾಗಲಕೋಟೆಯ ನವನಗರದ ನಿತೇಶ ಸದಾನಂದ ನೀಲವಣಿ(23), ಹುಲಗಪ್ಪ ರಂಗಪ್ಪ ಪಾತ್ರೋಟ(26), ಅಬ್ದುಲ್ ಮೈನುದ್ದೀನ್ ಚೀನಿ(27)  ಎಂಬುವರನ್ನು ಬಂಧಿಸಿದ್ದಾರೆ.  ಈ ಆರೋಪಿಗಳ ವಿರುದ್ಧ ಬಾಗಲಕೋಟೆ, ಗದಗ, ಕೊಪ್ಪಳ, ಬೆಳಗಾವಿ ಜಿಲ್ಲೆಗಳಲ್ಲಿಯೂ ಕಳ್ಳತನ ಪ್ರಕರಣಗಳು ದಾಖಲಾಗಿವೆ.

ಈ ಕಾರ್ಯಾಚರಣೆಯಲ್ಲಿ ವಿಜಯಪುರ ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ, ಚಡಚಣ ಸಿಪಿಐ ಎಚ್. ಡಿ. ಮುಲ್ಲಾ, ಪಿಎಸ್ಐ ರಾಘವೇಂದ್ರ ಖೋತ, ಹೊನ್ನಪ್ಪ ತಳವಾರ ಮತ್ತು ಸಿಬ್ಬಂದಿ ಪಾಲ್ಗೊಂಡು ಉತ್ತಮ ಕೆಲಸ ಮಾಡಿದ್ದಾರೆ ಎಂದು ವಿಜಯಪುರ ಎಸ್ಪಿ ಋಷಿಕೇಶ ಸೋನಾವಣೆ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌