ಸಂಸದ, ಸಚಿವನಾಗಿ ಬಸವನಾಡಿಗೆ 10 ವರ್ಷ ಸಾಕಷ್ಟು ಕೆಲಸ ಮಾಡಿದ್ದೇನೆ- ರಮೇಶ ಜಿಗಜಿಗಣಗಿ

ವಿಜಯಪುರ: ಸಂಸದ ಮತ್ತು ಕೇಂದ್ರ ಕೇಂದ್ರ ಸಚಿವನಾಗಿ ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ ಸಂತೃಪ್ತಿ ನನಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ರೈಲ್ವೇ, ವಿಮಾನ ನಿಲ್ದಾಣ, ಏಳು ಹೊಸ ರಾಷ್ಟ್ರೀಯ ಯೋಜನೆಗಳು ಸೇರಿದಂತೆ ಸೇರಿದಂತೆ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ.  ವಿಜಯಪುರ ಜಿಲ್ಲೆ ಇನ್ನೂ ಹೆಚ್ಚಿನ ಅಭಿವೃದ್ಧಿಯಾಗಬೇಕೆಂಬ ಹಂಬಲ ಇದೆ.  ಪಕ್ಷ ಮತ್ತೊಮ್ಮೆ ಅವಕಾಶ ಕೊಟ್ಟರೆ ದುಡಿಯುತ್ತೇನೆ.  ಇಲ್ಲವಾದರೆ ಯಾವಾಗಲೂ ಪಕ್ಷ ಕಾರ್ಯಕರ್ತರ ಜೊತೆ ಇರುತ್ತೇನೆ ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.  ಈ ಬಾರಿ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನ ಪಡೆಯಲಿದೆ.  ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸಿಎಂ ಡಿ. ಕೆ. ಶಿವಕುಮಾರ ಕೇವಲ ಜೋರಾಗಿ ಮಾತನಾಡುತ್ತಾರೆ ಹೊರತು ಅವರು ಏನೇ ಮಾಡಿದರೂ ರಾಜ್ಯದಲ್ಲಿ 3ಕ್ಕೂ ಹೆಚ್ಚು ಸ್ಥಾನ ಗಳಿಸುವುದಿಲ್ಲ.  ಕಳೆದ 75 ವರ್ಷಗಳಲ್ಲಿ ಕಾಂಗ್ರೆಸ್ಸಿನವರು ಏನೂ ಮಾಡಿಲ್ಲ. ಈಗ ರಾಜ್ಯ ಸರಕಾರ ಗ್ಯಾರಂಟಿ ಹೆಸರಲ್ಲಿ ಮನೆ ಹೆಣ್ಣು ಮಕ್ಕಳಿಗೆ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಟೀಕಿಸಿದರು.

ವಿಜಯಪುರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪಕ್ಷದ ಹಿರಿಯ ಮುಖಂಡರ ಭಾವಚಿತ್ರಗಳಿಗೆ ನಾಯಕರು ನಮನ ಸಲ್ಲಿಸಿದರು.

ವಿಜಯಪುರ ಲೋಕಸಭೆ ಉಸ್ತುವಾರಿ ಮತ್ತು ಮಾಜಿ ಶಾಸಕ ರಾಜಶೇಖರ ಶೀಲವಂತ ಮಾತನಾಡಿ, ಸಮಾಜದ ಕೊನೆಯ ವ್ಯಕ್ತಿಗೂ ಕೇಂದ್ರದ ಬಿಜೆಪಿ ಸರಕಾರದ ಕಾರ್ಯಕ್ರಮಗಳ ಸುದ್ದಿ ಮುಟ್ಟಿಸಿ ಮನ ಪರಿವರ್ತನೆ ಕೆಲಸ ಪ್ರಾಮಾಣಿಕವಾಗಿ ಮಾಡಬೇಕು ಎಂದು ಕಾಯಕರ್ತರಿಗೆ ಕರೆ ನೀಡಿದರು.

ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರು ಸಮಾಜದ ಕೊನೆಯ ವ್ಯಕ್ತಿಗೂ ಕೇಂದ್ರ ಸರಕಾರದಿಂದ ಏನು ಬೇಕು ಎಂಬದನ್ನು ಅರಿತು ಅದನ್ನು ಪರಿಹರಿಸಲು ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ (ಕೂಚಬಾಳ) ಮಾತನಾಡಿ ಕೇಂದ್ರ ಸರಕಾರದ ಕಾರ್ಯಕ್ರಮಗಳ ಜನರ ಮುಂದೆ ತೆಗೆದುಕೊಂಡು ಹೋಗಬೇಕು.  ಅಲ್ಲದೇ ಬೂತ ಮಟ್ಟದಿಂದ ಪೇಜ್ ಪ್ರಮುಖರವರೆಗೆ ಸಂಘಟನೆಯನ್ನು ಮತ್ತಷ್ಟು ಪ್ರಬಲವಾಗಿ ಬೆಳೆಯಬೇಕು.  ಸಾಮಾಜಿಕ ಜಾಲತಾಣಗಳನ್ನು ಅತ್ಯಂತ ಯಶಸ್ವಿಯಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಬಿಜೆಪಿ ಪಕ್ಷ ಅನೇಕ ಹಿರಿಯರ ತ್ಯಾಗ,ಶ್ರಮ, ಬಲಿದಾನದಿಂದ ಹಮ್ಮರವಾಗಿ ಬೆಳೆದಿದೆ. ಅನೇಕರನ್ನು ಪಕ್ಷ ಸೇರ್ಪಡೆ, ಮೋದಿ ಭಾವಚಿತ್ರವಿರುವ ಗೋಡೆ ಬರಹ ಅಭಿಯಾನ ಪ್ರತಿ ಮನೆಗಳಲ್ಲೂ ಕೇಂದ್ರ ಸರಕಾರದ ಅಭಿವೃದ್ಧಿ ಕೆಲಸ ಚರ್ಚೆ ನಡೆಯುವಂತೆ ಕಾರ್ಯಕರ್ತರು ಶ್ರಮ ವಹಿಸಬೇಕು. ನಿರಂತರವಾಗಿ ಮಂಡಲ ಮಟ್ಟಗಳಲ್ಲಿ ಸಭೆಗಳು ನಡೆಯಬೇಕು.  ಪಕ್ಷದ ಕೆಳ ಹಂತದ ಕಾರ್ಯಕರ್ತರು ಭೂತ ಮಟ್ಟದಲ್ಲಿ ಕೇಂದ್ರದ ಯೋಜನೆಗಳ ಮಾಹಿತಿಯನ್ನು ತಲುಪಿಸಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಶಾಸಕ ಅರುಣ ಶಹಾಪೂರ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗ ಮಾತ್ರ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಅಭಿವೃದ್ಧಿ ಕಾರ್ಯಕ್ಕೆ ವೇಗ ಸಿಗಲಿದೆ.  ಜಿಲ್ಲೆಯಲ್ಲಿ ರೈಲ್ವೆ ಹಳಿ ದ್ವಿಪಥ ಮಾಡಲಾಗಿದೆ.  ಕೆರೆ ತುಂಬುವ ಯೋಜನೆ, ಎನ್.ಟಿ.ಪಿ.ಸಿ ವಿಮಾನ ನಿಲ್ದಾಣ, ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯಾಗಿದ್ದು ಸೇರಿದಂತೆ ನೂರಾರು ಅಭಿವೃದ್ಧಿ ಕಾರ್ಯಗಳು ಬಿಜೆಪಿ ಅವಧಿಯಲ್ಲಿ ಮಾತ್ರ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್. ಕೆ. ಬೆಳ್ಳುಬ್ಬಿ ಮಾತನಾಡಿದರು.

ಮಾಜಿ ಶಾಸಕ ರಮೇಶ ಭೂಸನೂರ, ಬೆಳಗಾವಿ ವಿಭಾಗದ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಮುಖಂಡರಾದ ಸಂಜೀವ ಐಹೊಳೆ,ಬಸವರಾಜ ಯಂಕಂಚಿ, ಮಲ್ಲಮ್ಮ ಜೋಗೂರ, ಸಂಜೀವ ಐಹೊಳೆ, ನಾನಾ ಮಂಡಲ ಹಾಗೂ ಪ್ರಕೋಷ್ಠಗಳ ಅಧ್ಯಕ್ಷರುಗಳು ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಬು ಮಾಶ್ಯಾಳ ಸ್ವಾಗತಿಸಿದರು.  ಈರಣ್ಣ ರಾವೂರ ನಿರೂಪಿಸಿದರು.  ಮುಳುಗೌಡ ಪಾಟೀಲ ವಂದಿಸಿದರು.

Leave a Reply

ಹೊಸ ಪೋಸ್ಟ್‌