ವಿಜಯಪುರ: ಸಂಸದರು ಮತ್ತು ರೇಲ್ವೆ ಸಚಿವರಿಗೆ ಪತ್ರ ಬರೆದರೂ ಸ್ಪಂದಿಸದ ಹಿನ್ನೆಲೆಯಲ್ಲಿ ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಅವರು ಈಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೇರವಾಗಿ ಪತ್ರ ಬರೆದು ವಿಜಯಪುರದಿಂದ ಬಾಗಲಕೋಟೆ ಮಾರ್ಗವಾಗಿ ಬೆಂಗಳೂರಿಗೆ ಹೊಸದಾಗಿ ವಂದೇ ಭಾರತ ರೈಲು ಸೇವೆ ಪ್ರಾರಂಭಿಸಬೇಕು ಮತ್ತು ಮುಂಬೈ- ಸೋಲಾಪುರ ರೈಲನ್ನು ವಿಜಯಪುರವರೆಗೆ ವಿಸ್ತರಿಸುವಂತೆ ಆಗ್ರಹಿಸಿದ್ದಾರೆ.
ಈ ಬೇಡಿಕೆ ಕುರಿತು 24.11.2023 ರಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಮತ್ತು ಬಾಗಲಕೋಟೆ ಸಂಸದ ಪಿ. ಸಿ. ಗದ್ದಿಗೌಡರ ಅವರಿಗೆ ಹಾಗೂ 10.01.2024 ರಂದು ಕೇಂದ್ರ ರೇಲ್ವೆ ಸಚಿವ ಅಶ್ವಿನಿ ವೈಷ್ಣವ ಅವರಿಗೂ ಪತ್ರ ಬರೆದರೂ ಈವರೆಗೆ ಸ್ಪಂದಿಸಿಲ್ಲ ಎಂದು ಅವರು ಪ್ರಧಾನಿಗೆ ಬರೆದಿರುವ ಮೂರು ಪುಟಗಳ ಪತ್ರದಲ್ಲಿ ತಿಳಿಸಿದ್ದಾರೆ.
ಮಾ. 09 ರಂದು ಪತ್ರ ಬರೆದಿರುವ ಶಾಸಕರು, ಭಾರತದ ಸ್ವಾತಂತ್ರ್ಯ ಸುವರ್ಣ ಮಹೋತ್ಸವದ ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು ಜನತೆ ಒಂದು ಸ್ಥಳದಿಂದ ಮತ್ತೋಂದು ಸ್ಳಳಕ್ಕೆ ಸಂಚರಿಸಲು ಹೆಚ್ಚುವರಿಯಾಗಿ ರೈಲುಗಳನ್ನು ಓಡಿಸುವುದರ ಜೊತೆಗೆ ರೈಲಿನಲ್ಲಿ ಸ್ವಚ್ಚತೆ ಸೇರಿದಂತೆ ನಾನಾ ರೀತಿಯ ಆಧುನಿಕ ಸೌಲಭ್ಯಗಳನ್ನು ಒದಗಿಸಿರುವುದು ಸಂತಸದ ಸಂಗತಿಯಾಗಿದೆ.
ಆದರೆ, ವಿಜಯಪುರದಿಂದ ಬಾಗಲಕೋಟೆ ಮಾರ್ಗವಾಗಿ ಬೆಂಗಳೂರಿಗೆ ಹೋಗಲು ರೈಲು ಸೇವೆ ಇದ್ದರೂ ಈ ರೈಲುಗಳ ಸಂಚಾರದ ಸಮಯ ಅನುಕೂಲವಾಗಿಲ್ಲ. ಈ ರೈಲುಗಳು ಸರಿಯಾದ ಸಮಯಕ್ಕೆ ನಿಗದಿತ ಸ್ಥಳಗಳನ್ನು ತಲುಪದ ಕಾರಣ ಕೆಲಸ ಕಾರ್ಯಗಳಿಗಾಗಿ ಮತ್ತು ದಿನನಿತ್ಯದ ವ್ಯವಹಾರ ಸಂಬಂಧಿ ಕೆಲಸಗಳಿಗಾಗಿ ಹಾಗೂ ಸರಕಾರಿ ಕಚೇರಿ ಕೆಲಸಗಳಿಗಾಗಿ ಬೆಂಗಳೂರಿಗೆ ಪ್ರಯಾಣಿಸುವ ಜನರಿಗೆ ತೊಂದರೆ ಉಂಟಾಗಿದೆ. ಅಲ್ಲದೇ, ಬೆಂಗಳೂರಿನಿಂದ ವಿಜಯಪುರಕ್ಕೆ ಬರುವ ರೈಲುಗಳ ಸಂಚಾರ ಸಮಯವೂ ಹೆಚ್ಚಾಗಿದೆ. ಅಲ್ಲದೇ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಸಾಕಷ್ಟು ಯುವಕರು ಬೆಂಗಳೂರಿನಲ್ಲಿ ನಾನಾ ಉದ್ಯೋಗದಲ್ಲಿದ್ದಾರೆ. ಹಬ್ಬಗಳ ಮತ್ತು ಸಾಲುಸಾಲು ರಜೆಗಳ ಸಂದರ್ಭಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವುದರಿಂದ ಕೆಲವು ಖಾಸಗಿ ಸಾರಿಗೆ ಸಂಸ್ಥೆಗಳು ಪ್ರಯಾಣ ದರವನ್ನು ಎರಡರಿಂದ ಮೂರು ಪಟ್ಟು ಹೆಚ್ಚಳ ಮಾಡುತ್ತಾರೆ. ಇದರಿಂದ ಬೆಂಗಳೂರಿನಲ್ಲಿ ಕೆಲಸ ಮಾಡುವ ಯುವಕರು, ಕಾರ್ಮಿಕರು ಮತ್ತು ಇತರೆ ಸಾರ್ವಜನಿಕರಿಗೆ ತುಂಬಾ ಹೊರೆಯಾಗುತ್ತದೆ. ಜೊತೆಗೆ ಜನರ ಹಬ್ಬದ ಸಂಭ್ರಮದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಹೀಗಾಗಿ ವಿಜಯಪುರದಿಂದ ಪ್ರತಿದಿನ ರಾತ್ರಿ 9 ಗಂಟೆಗೆ ರೈಲು ಸಂಚಾರ ಪ್ರಾರಂಭಿಸಿ ಮರುದಿನ ಬೆಳಿಗ್ಗೆ 6 ಗಂಟೆಗೆ ಬೆಂಗಳೂರು ತಲುಪುವಂತಾಗಬೇಕು. ಅದೇ ರೀತಿ ಬೆಂಗಳೂರಿನಿಂದಲೂ ಪ್ರತಿದಿನ ರಾತ್ರಿ 9 ಗಂಟೆಗೆ ರೈಲು ಹೊರಟು ಮರುದಿನ ಬೆಳಿಗ್ಗೆ 6 ಗಂಟೆಗೆ ವಿಜಯಪುರ ತಲುಪುವ ವ್ಯವಸ್ಥೆ ಮಾಡಬೇಕು. ವಿಜಯಪುರ ಜಿಲ್ಲೆ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿದ್ದು, ಮುಂಬೈ ಮತ್ತು ಕರ್ನಾಟಕಕ್ಕೆ ಮಧ್ಯೆ ಸುಮಾರು 500 ವರ್ಷಗಳಿಂದಲೂ ಅವಿನಾಭಾವ ಸಂಬಂxಧವಿದೆ. ಭಾವನಾತ್ಮಕವಾಗಿ ವಿಜಯಪುರ ಮತ್ತು ಮುಂಬೈ ಹಾಗೂ ಸೋಲಾಪೂರ ಜನರ ಮಧ್ಯೆ ಸಂಬಧ ಬೆಸೆದುಕೊಂಡಿದೆ. ಗಡಿ ಭಾಗದ ಜನರು ಮುಂಬೈ ಮತ್ತು ಸೋಲಾಪೂರ ಪಟ್ಟಣಗಳಿಗೆ ಪ್ರಯಾಣ ಮಾಡುತ್ತಾರೆ. ಈ ಭಾಗದ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳನ್ನೂ ಸಾಗಿಸುತ್ತಾರೆ. ಜನರ ವಹಿವಾಟುಹಗಳಿಗೆ ಅನುಕೂಲವಾಗಲು ಮುಂಬೈ- ಸೋಲಾಪೂರ ನಡುವೆ ಸಂಚರಿಸುವ ಒಂದೇ ಭಾರತ ರೈಲನ್ನು ವಿಜಯಪುರವರೆಗೆ ವಿಸ್ತರಿಸಿದರೆ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಮುಂಬೈ- ಸೋಲಾಪೂರ ವರೆಗೆ ಸಂಚರಿಸುವ ವಂದೇ ಭಾರತ ರೈಲನ್ನು ವಿಜಯಪುರ ವರೆಗೆ ಓಡಿಸಲು ಆದೇಶ ಹೊರಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳು ಹಲವಾರು ಪ್ರಾಚೀನ ಸ್ಮಾರಕಗಳನ್ನು ಹೊಂದಿರುವ ಜಿಲ್ಲೆಗಳಾಗಿವೆ. ಅಲ್ಲದೇ, ದೇಶ- ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ವಿಜಯಪುರ ನಗರ, ಆಲಮಟ್ಟಿ, ಕೂಡಲ ಸಂಗಮ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಮಹಾಕೂಟ ಸೇರಿದಂತೆ ಅನೇಕ ಪ್ರವಾಸಿ ತಾಣಗಳಿಗೆ ಪ್ರತಿದಿನ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಅಲ್ಲದೇ, ಈ ಭಾಗದಲ್ಲಿ ದ್ರಾಕ್ಷಿ, ದಾಳಿಂಬೆ, ಸಪೋಟಾ, ಬಾರೆಹಣ್ಣು ಮುಂತಾದ ಉತೃಕ್ಷ್ಯ ಗುಣಮಟ್ಟದ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತದೆ. ಉತ್ತಮ ಗುಣಮಟ್ಟದ ಜೋಳವನ್ನೂ ಇಲ್ಲಿನ ರೈತರು ಬೆಳೆಯುತ್ತಿದ್ದಾರೆ. ಅಲ್ಲದೇ, ಇತ್ತೀಚೆಗೆ ರೇಷ್ಮೆ ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಅಲ್ಲದೇ, ಕೂಡಗಿ ಎನ್.ಟಿ.ಪಿ.ಸಿ ಯಲ್ಲಿಯೂ ಸಹ ಸಾವಿರಾರು ಜನರು ಕೆಲಸ ಮಾಡುತ್ತಿದ್ದು, ವಂದೇ ಭಾರತ ರೈಲು ಸೇವೆ ಪ್ರಾರಂಭಿಸುವುದರಿಂದ ಈ ಭಾಗದ ಎಲ್ಲ ರೈತರು, ಜನಸಾಮಾನ್ಯರು, ಅಧಿಕಾರಿಗಳು, ಕಾರ್ಮಿಕರು ಬೆಂಗಳೂರಿಗೆ ಪ್ರಯಾಣಿಸಲು ವರದಾನವಾಗಲಿದೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ವಿಜಯಪುರ ಮತ್ತು ಬಾಗಲಕೋಟೆ ಸಂಸದರು ಹಾಗೂ ಕೇಂದ್ರ ರೈಲ್ವೆ ಸಚಿವರಿಗೂ ಪತ್ರ ಬರೆಯಲಾಗಿದೆ. ಆದರೂ ಈವರೆಗೆ ಸ್ಪಂದಿಸಿಲ್ಲ. ಈಗ ತಾವು ಈ ಭಾಗದ ಜನರ ಬೇಡಿಕೆಗೆ ಸ್ಪಂದಿಸಬೇಕು. ವಿಜಯಪುರ- ಬಾಗಲಕೋಟೆ- ಬೆಂಗಳೂರು ಮಧ್ಯೆ ವಂದೇ ಭಾರತ ರೈಲು ಸೇವೆಯನ್ನು ಪ್ರಾರಂಭಿಸಬೇಕು. ಅಲ್ಲದೇ, ಮುಂಬೈ- ಸೋಲಾಪುರ ಮಧ್ಯೆ ಸಂಚರಿಸುವ ವಂದೇ ಭಾರತ ರೈಲು ಸೇವೆಯನ್ನು ವಿಜಯಪುರ ವರೆಗೆ ವಿಸ್ತರಿಸಲು ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸುತ್ತಿರುವುದಾಗಿ ಸುನೀಲಗೌಡ ಪಾಟೀಲ ಅವರು ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.